ADVERTISEMENT

ಉಡುಪಿ: ಮಗುವನ್ನು ಅಪಹರಿಸಿ ಪರಾರಿಯಾಗಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:35 IST
Last Updated 12 ಜುಲೈ 2021, 4:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಬಾಗಲಕೋಟೆ ಮೂಲದ ದಂಪತಿಯ ಎರಡೂವರೆ ವರ್ಷದ ಮಗುವನ್ನು ಭಾನುವಾರ ಅಪಹರಿಸಿ ಪರಾರಿಯಾಗಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಪರಶುರಾಮನನ್ನು ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಉಡುಪಿ ನಗರ ಠಾಣೆ ಪಿಎಸ್‌ಐ ಅಶೋಕ್ ಕುಮಾರ್ ಮಾಹಿತಿ ನೀಡಿದರು.

ಮಗು ಸುರಕ್ಷಿತವಾಗಿದ್ದು, ಯಾವ ಉದ್ದೇಶಕ್ಕೆ ಆರೋಪಿ ಅಪಹರಣ ಮಾಡಿದ್ದ ಎಂದು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.

ADVERTISEMENT

ಪ್ರಕರಣದ ವಿವರ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅರುಣ್ ಹಾಗೂ ಭಾರತಿ ದಂಪತಿಯು ಮಗ ಶಿವರಾಜ್‌ನೊಂದಿಗೆ ಉಡುಪಿಯ ಕರಾವಳಿ ಬೈಪಾಸ್ ಬಳಿಯ ಶೆಡ್‌ವೊಂದರಲ್ಲಿ ವಾಸವಿದ್ದರು. ಈಚೆಗೆ ದಂಪತಿಗೆ ಪರಿಚಿತವಾಗಿದ್ದ ಆರೋಪಿ ಪರಶುರಾಮ, ಮಗುವಿನ ಜತೆ ಸಲುಗೆ ಬೆಳೆಸಿಕೊಂಡಿದ್ದ. ಭಾನುವಾರ ಬೆಳಿಗ್ಗೆ ತಿಂಡಿಕೊಡಿಸುವುದಾಗಿ ಮಗುವನ್ನು ಕರೆದೊಯ್ದು ಮರಳಿ ಬಂದಿರಲಿಲ್ಲ. ಮಗು ನಾಪತ್ತೆಯಾದ ಬಗ್ಗೆ ಪೋಷಕರು ದೂರು ನೀಡಿದ್ದರು. ಆರೋಪಿ ಮಗುವನ್ನು ಎತ್ತಿಕೊಂಡು ಖಾಸಗಿ ಬಸ್‌ ಹತ್ತುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಪ್ರಯಾಣ ಮಾಡಿದ್ದ ಬಸ್ ಸಿಬ್ಬಂದಿಯ ಬಳಿ ಮಾಹಿತಿ ಕಲೆ ಹಾಕಿ ಭಟ್ಕಳದಲ್ಲಿ ಅಪಹರಣಕಾರನನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.