ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, 10 ವರ್ಷಗಳಲ್ಲಿ 5,611 ಟಿಎಂಸಿ ಅಡಿ ನೀರು ಅವಿಭಜಿತ ಆಂಧ್ರ ಪ್ರದೇಶಕ್ಕೆ ಹರಿದು ಹೋಗಿದೆ. ರಾಜ್ಯಕ್ಕೆ ತನ್ನ ಪಾಲಿನ 1,170 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ.
ಕೃಷ್ಣಾ ನ್ಯಾಯಮಂಡಳಿ 2010ರಲ್ಲಿ ನೀಡಿದ ತೀರ್ಪಿನಲ್ಲಿ ಪ್ರತಿ ವರ್ಷ 177 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ನೀಡಿದೆ. ಮೂರನೇ ಹಂತದ ಯೋಜನೆ ಜಾರಿಯಾಗಿದ್ದರೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಯ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯ ಆಗುತ್ತಿತ್ತು.
ಆಲಮಟ್ಟಿ ಜಲಾಶಯದ ಈಗಿನ ಗೇಟಿನ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿ, ನ್ಯಾಯಮಂಡಳಿ ತೀರ್ಪಿನಂತೆ ನೀರಿನ ಸಂಗ್ರಹ ಹೆಚ್ಚಿಸಿಕೊಳ್ಳಬೇಕಿದೆ. ಹಿನ್ನೀರಿನಲ್ಲಿ ಮುಳುಗಡೆ ಆಗುವ 1.33 ಲಕ್ಷ ಎಕರೆ ಭೂಸ್ವಾಧೀನ ಪಡಿಸಿಕೊಂಡು, ಮುಳುಗಡೆ ಆಗುವ 20 ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಈವರೆಗೆ 29,500 ಎಕರೆ ಮಾತ್ರ ಭೂಸ್ವಾಧೀನವಾಗಿದೆ.
ಮೂರನೇ ಹಂತದ ಯೋಜನೆಗೆ 2014–15ರಲ್ಲಿ ಅಂದಾಜು ಮಾಡಿದಾಗ, ₹51 ಸಾವಿರ ಕೋಟಿ ಅನುದಾನ ಬೇಕಿತ್ತು. 2018ರ ವೇಳೆಗೆ ₹78 ಸಾವಿರ ಕೋಟಿಗೆ ಏರಿತ್ತು. ಭೂಸ್ವಾಧೀನದ ಭೂಮಿ ಪರಿಹಾರ ನಾಲ್ಕು ಪಟ್ಟು ಹೆಚ್ಚಳ ಆಗಿರುವ ಕಾರಣ ಈಗ ಅದರ ವೆಚ್ಚ ₹1 ಲಕ್ಷ ಕೋಟಿ ದಾಟಲಿದೆ.
‘ಹತ್ತು ವರ್ಷಗಳ ಹಿಂದೆಯೇ ರೈತರ ಭೂಮಿಯ ಪಹಣಿಗಳಲ್ಲಿ ‘ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಬರೆಯಲಾಗಿತ್ತು. ಇದರಿಂದ ರೈತರು ಭೂಮಿ ಮಾರಲು, ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುವುದಾಗಿದೆ’ ಎಂದು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಸಂಚಾಲಕ ಪ್ರಕಾಶ ಅಂತರಗೊಂಡ ದೂರಿದರು.
‘ಕೇಂದ್ರ ಸರ್ಕಾರವು ಅಂತರರಾಜ್ಯ ವಿವಾದ ಎಂದು ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ. ಗೆಜೆಟ್‌ನಲ್ಲಿ ಪ್ರಕಟಿಸಿದರೂ, ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಕಾಮಗಾರಿ ಪೂರ್ಣಗೊಳಿಸಿಲ್ಲ’ ಎಂದರು.
****
ಕೆಬಿಜೆಎನ್‌ಎಲ್ ಸೂಚಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಸ್ವಾಧೀನಕ್ಕೆ ಸಂಬಂಧಿಸಿದಂತೆ ಮೂರು ಪತ್ರ ಬರೆಯಲಾಗಿದೆ
–ಮಾಧವರಾವ್ ಗಿಟ್ಟೆ ಮಹಾ ವ್ಯವಸ್ಥಾಪಕ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಯುಕೆಪಿ
ಪ್ರತಿ ವರ್ಷ ₹7 ಸಾವಿರದಿಂದ ₹10 ಸಾವಿರ ಅನುದಾನ ಬಿಡುಗಡೆ ಆಗುತ್ತಿದೆ. ಯೋಜನೆ ಮಂದಗತಿಯಲ್ಲಿ ಸಾಗಿದ್ದು ಹಿನ್ನಡೆ ಆಗಿದೆ.
–ಪ್ರಕಾಶ ಅಂತರಗೊಂಡ ಸಂಚಾಲಕ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ
***
ಪ್ರಭಾರ ಅಧಿಕಾರಿಗಳೇ ಗತಿ
ಬೃಹತ್ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪುನರ್ ವಸತಿ ಮತ್ತು ಮತ್ತು ಪುನರ್ ನಿರ್ಮಾಣ ವಿಭಾಗದ ಆಯುಕ್ತರ ಹುದ್ದೆಯನ್ನು ಪ್ರಭಾರ ಅಧಿಕಾರಿಗಳೇ ವಹಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇಲಾಖೆಯೊಂದರ ಉನ್ನತ ಹುದ್ದೆಯಲ್ಲಿ ಇರುವವರಿಗೆ ಆಯುಕ್ತರ ಹುದ್ದೆ ಪ್ರಭಾರವಾಗಿ ವಹಿಸಲಾಗುತ್ತದೆ. ಈಗಲೂ ಕಂದಾಯ ಇಲಾಖೆ ಆಯುಕ್ತ ಪಿ. ಸುನೀಲಕುಮಾರ ಅವರು ಪ್ರಭಾರ ಆಯುಕ್ತರಾಗಿದ್ದಾರೆ. 1995ರಿಂದ ಈವರೆಗೆ 28 ಮಂದಿ ಆಯುಕ್ತರಾಗಿದ್ದಾರೆ. 1993ರಿಂದ ಈವರೆಗೆ 44 ಮಹಾ ವ್ಯವಸ್ಥಾಪಕರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.