ಬಾಗಲಕೋಟೆ: ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಸಂತ್ರಸ್ತರಿಗೆ ನವನಗರದಲ್ಲಿ ಹಂಚಿಕೆಯಾಗಿರುವ 30 ಸಾವಿರಕ್ಕೂ ಹೆಚ್ಚು ನಿವೇಶನಗಳು ಇ–ಆಸ್ತಿ ದಾಖಲೆ ಹೊಂದಿರದ ಕಾರಣ ಮಾರಾಟ ಮಾಡಲು ಸಾಧ್ಯವಾಗದೆ ಜನರು ಪರದಾಡುತ್ತಿದ್ದಾರೆ. ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ತಿಂಗಳಿಗೆ ದಾಖಲಾಗುತ್ತಿದ್ದ ಆಸ್ತಿ ಮಾರಾಟದ ಪ್ರಮಾಣ ಶೇ 35ರಷ್ಟು ಕಡಿಮೆಯಾಗಿದೆ.
ಬಾಗಲಕೋಟೆ ಹಲವು ಬಡಾವಣೆಗಳು ಹಿನ್ನೀರಿನಲ್ಲಿ ಮುಳುಗಡೆಯಾಗಿವೆ. ಮುಳುಗಡೆ ಹೊಂದಿದ ಸಂತ್ರಸ್ತರಿಗಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು (ಬಿಟಿಡಿಎ) ನವನಗರದ ಯುನಿಟ್–1 ಮತ್ತು 2ರಲ್ಲಿ ಬಡಾವಣೆಗಳನ್ನು ರಚಿಸಿ, ಸಂತ್ರಸ್ತರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದೆ. ಹಂಚಿಕೆಯಾಗಿ ಎರಡು ದಶಕಗಳಾಗಿದ್ದರೂ, ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಟ ಮುಂದುವರೆದಿದೆ.
ಕಾವೇರಿ ತಂತ್ರಾಂಶ–2 ಜಾರಿಗೆ ತಂದ ಮೇಲೆ ಆಸ್ತಿಗಳ ಮಾರಾಟಕ್ಕೆ ಇ ಆಸ್ತಿ ದಾಖಲೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಸಂತ್ರಸ್ತರಿಗೆ ಇಲ್ಲಿಯವರೆಗೆ ಇ–ಆಸ್ತಿ ದಾಖಲೆ ನೀಡದ್ದರಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿರುವ ಬಿಟಿಡಿಎ, ಜನರಿಗೆ ಹಕ್ಕುಪತ್ರಗಳನ್ನು ವಿತರಿಸಿದೆ. ಆದರೆ, ಈ ಪ್ರದೇಶ ನಗರಸಭೆ ವ್ಯಾಪ್ತಿಯಲ್ಲಿದೆ. ಈ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿದ್ದ ನಂತರ ಬಿಟಿಡಿಎ ಅವುಗಳನ್ನು ನಗರಸಭೆಗೆ ಹಸ್ತಾಂತರಿಸಬೇಕಾಗಿತ್ತು. ರಾಜಕೀಯ ಕಾರಣಗಳಿಗಾಗಿ ಇಲ್ಲಿಯವರೆಗೆ ಬಡಾವಣೆಗಳನ್ನು ಹಸ್ತಾಂತರಿಸಲಾಗಿಲ್ಲ.
ಯುನಿಟ್–1 ಹಸ್ತಾಂತರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಬಾರಿ ಚರ್ಚೆಗಳಾಗಿವೆ. ಈ ಹಿಂದೆ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತದೆ ಎನ್ನುವ ಕಾರಣಕ್ಕೆ ಹಸ್ತಾಂತರ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಕ್ಕೆ, ರಾಜ್ಯ ಸರ್ಕಾರ ₹130 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಬಂದ ಅನುದಾನವನ್ನು ಖರ್ಚು ಮಾಡಲಾಯಿತೇ ಹೊರತು ಹಸ್ತಾಂತರ ಮಾಡಲಿಲ್ಲ.
ನೋಂದಣಿ, ಆದಾಯ ಕುಸಿತ: ನಗರದಲ್ಲಿರುವ ಉಪನೋಂದಣಿ ಕಚೇರಿಯಲ್ಲಿ ಬಿಕೊ ಎನ್ನುತ್ತಿದೆ. ಆಸ್ತಿಗಳ ಮಾರಾಟ ಹಾಗೂ ನೋಂದಣಿ ಇಲಾಖೆಗೆ ಆದಾಯ ತಂದುಕೊಡುವಲ್ಲಿ ಯುನಿಟ್–1 ಹಾಗೂ 2ರ ಕೆಲ ಸೆಕ್ಟರ್‌ಗಳ ಆಸ್ತಿ ಮಾರಾಟಗಾರರೇ ಮುಂಚೂಣಿಯಲ್ಲಿದ್ದರು. ಇ ಆಸ್ತಿ ದಾಖಲೆ ದೊರೆಯದ ಕಾರಣ ಎರಡು ತಿಂಗಳಿಂದ ನವನಗರದ ಆಸ್ತಿಗಳ ಮಾರಾಟ ಸ್ಥಗಿತಗೊಂಡಿದೆ.
ಪ್ರತಿ ತಿಂಗಳು 1,000 ದಿಂದ 1,100 ಆಸ್ತಿಗಳು ಮಾರಾಟವಾಗುತ್ತಿದ್ದವು. ಈಗ ಅವುಗಳ ಸಂಖ್ಯೆ 650 ರಿಂದ 700ಕ್ಕೆ ಇಳಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ₹1.98 ಕೋಟಿ ಶುಲ್ಕ ಸಂಗ್ರಹವಾಗಿತ್ತು. ಈ ವರ್ಷ ಸೆಪ್ಟೆಂಬರ್‌ನಲ್ಲಿ ₹1.60 ಕೋಟಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ₹2.36 ಕೋಟಿ ಶುಲ್ಕ ಸಂಗ್ರವಾಗಿತ್ತು. ಈ ವರ್ಷ ₹1.70 ಕೋಟಿ ಸಂಗ್ರವಾಗಿದೆ. ಆದಾಯ ಕುಸಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.