ADVERTISEMENT

ಬಾಗಲಕೋಟೆ | ಅಭಿವೃದ್ಧಿ ವಂಚಿತ ಗುಳೇದಗುಡ್ಡ ತಾಲ್ಲೂಕು

ಕೇವಲ 4 ಕಚೇರಿಗಳು ಮಾತ್ರ ಕಾರ್ಯನಿರ್ವಹಣೆ: ಬಾದಾಮಿಗೆ ಜನರ ಅಲೆದಾಟ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 4:28 IST
Last Updated 23 ಜೂನ್ 2024, 4:28 IST
ಗುಳೇದಗುಡ್ಡ ತಾಲ್ಲೂಕಿನ ತಹಶೀಲ್ದಾರ್‌ ಕಚೇರಿ
ಗುಳೇದಗುಡ್ಡ ತಾಲ್ಲೂಕಿನ ತಹಶೀಲ್ದಾರ್‌ ಕಚೇರಿ   

ಗುಳೇದಗುಡ್ಡ: 2018 ರಲ್ಲಿ ರಚನೆಯಾದ ಗುಳೇದಗುಡ್ಡ ತಾಲ್ಲೂಕಿನಲ್ಲಿ ಅಭಿವೃದ್ದಿ ಕಡೆಗಣಿಸಲಾಗಿದ್ದು, ಹಲವು ಇಲಾಖೆಗಳ ಕಚೇರಿಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ಅನೇಕ ಜನ ಕಚೇರಿ ಕೆಲಸಗಳಿಗೆ ಬಾದಾಮಿಗೆ ಅಲೆದಾಡುವಂತಾಗಿದೆ. ಈ ಬಾರಿಯೂ ಜನಸ್ಪಂದನ ಕಾರ್ಯಕ್ರಮ ಗುಳೇದಗುಡ್ಡ ತಾಲ್ಲೂಕಿನಲ್ಲಿ ನಡೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 ಈ ಸಲವೂ ಬಾದಾಮಿಯಲ್ಲೆ ಗುಳೇದಗುಡ್ಡ ತಾಲ್ಲೂಕನ್ನು ಸೇರಿಸಿ ಜನ ಸ್ಪಂದನ ಕಾರ್ಯಕ್ರಮ ಮಾಡಿದ್ದರಿಂದ ತಾಲ್ಲೂಕಿನ ಕಡಿಮೆ ಸಂಖ್ಯೆಯ ಜನ ಭಾಗವಹಿಸಿದ್ದರು. ಇದು ಎರಡನೇ ಜನಸ್ಪಂದನ ಕಾರ್ಯಕ್ರಮವಾಗಿದ್ದು, ಪ್ರತಿಸಲ ಅಲ್ಲೆ ಜನ ಸ್ಪಂದನ ಕಾರ್ಯಕ್ರಮ ಮಾಡುವುದಾದರೆ ಗುಳೇದಗುಡ್ಡ ತಾಲ್ಲೂಕಿನ ಅಗತ್ಯ ಏನಿದೆ, ಶಾಸಕರು ಎರಡು ತಾಲ್ಲೂಕಿಗೆ ಆದ್ಯತೆ ನೀಡಬೇಕು ಎಂಬುದು ಜನರ ಆಗ್ರಹವಾಗಿದೆ.

ADVERTISEMENT

ಇನ್ನೂ ಆರಂಭವಾಗದ ಕಚೇರಿಗಳು : ತಾಲ್ಲೂಕಿನಲ್ಲಿ ಒಟ್ಟು 20 ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಈಗಾಗಲೇ ಆರಂಭವಾಗಬೇಕಿತ್ತು.ಆದರೆ  ಈವರೆಗೆ ಕೇವಲ 4 ಕಚೇರಿಗಳು ಮಾತ್ರ ಕೆಲಸ ಮಾಡುತ್ತಿವೆ. ಅದರಲ್ಲಿ ತಹಶೀಲ್ದಾರ್‌ ಕಚೇರಿ, ನೋಂದಣಿ, ಕೃಷಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿ ಹೊರತು ಪಡಿಸಿದರೆ ಬೇರೆ  ಕಚೇರಿಗಳು ಅರಂಭವಾಗಿಲ್ಲ.

ಮೂಲ ಸೌಲಭ್ಯಗಳಿಂದ ಮರೀಚಿಕೆ‌: ಇದ್ದ ಕಚೇರಿಗಳಲ್ಲೂ ಮೂಲ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ಉತ್ತಮ ಕಟ್ಟಡ ಮುಂತಾದ ಸೌಲಭ್ಯಗಳ ಸಮಸ್ಯೆಯಿದ್ದು, ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಜನಪ್ರತಿನಿಧಿಗಳ ನಿರಾಸಕ್ತಿ: ಗುಳೇದಗುಡ್ಡ ಪಟ್ಟಣ ಮತ್ತು ಅದರ ವ್ಯಾಪ್ತಿಯ ಗ್ರಾಮಗಳಲ್ಲಿ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಮುಖಂಡರು ಮತ್ತು ಮಾಜಿ ಶಾಸಕರು, ವಿವಿಧ ಪಕ್ಷಕ್ಕೆ ಸಂಬಂಧಿಸಿದ ಮುಖಂಡರಿದ್ದು, ಅವರಿಂದಲೂ ಪಟ್ಟಣ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಇದಕ್ಕೆಲ್ಲ ಮುಖಂಡರ ನಿರಾಸಕ್ತಿಯೇ ಕಾರಣ ಎಂದು ಸಾರ್ವಜನಿಕರು ದೂರುತ್ತಾರೆ.

ಬಾದಾಮಿಗೆ ಅಲೆದಾಟ: ಸಾರ್ವಜನಿಕರು ಕೋರ್ಟ್‌ ಕೆಲಸ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ತೋಟಗಾರಿಕೆ, ಶಿಕ್ಷಣ ಮುಂತಾದ ಇಲಾಖೆಗಳ ಕೆಲಸಕ್ಕೆ ಬಾದಾಮಿಗೆ ಅಲೆಯಬೇಕಾಗಿರುವುದರಿಂದ ಗುಳೇದಗುಡ್ಡ ತಾಲ್ಲೂಕು ಇದ್ದು ಇಲ್ಲದಂತಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಾದಾಮಿಯಲ್ಲಿ ಸಭೆ ಕರೆದರೆ ಶಿಕ್ಷಕರು ಇಡೀ ದಿನ ತೆರಳಬೇಕಾಗುವುದರಿಂದ ಶಾಲಾ ಚಟುವಟಿಕೆಗೆ ತೊಂದರೆಯಾಗುತ್ತದೆ.  ಶಿಕ್ಷಣ ಇಲಾಖೆ ಶೀಘ್ರ ಕಚೇರಿ ತೆರೆಯಬೇಕು ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಬಾದಾಮಿ ಹಾಗೂ ಗುಳೇದಗುಡ್ಡ ತಾಲ್ಲೂನ ಅಭಿವೃದ್ದಿಗೆ ಸಮಾನ ಆದ್ಯತೆ ನೀಡಬೇಕು ಎಂದು ಬಡ ನೇಕಾರ ಕೂಲಿಕಾರ ಸಂಘದ ಕಾರ್ಯದರ್ಶಿ ಶ್ರೀಕಾಂತ ಹುನಗುಂದ ಹೇಳಿದರು.

‘ಹೋರಾಟ ಮಾಡುವ ಮೂಲಕ ತಾಲ್ಲೂಕು ರಚನೆ ಆಗಿದೆ. ಆದರೆ ಇಲ್ಲಿ ನಡೆಯಬೇಕಾದ ಜನಸ್ಪಂದನ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಇಲ್ಲಿಯೆ ನಡೆಯಬೇಕು ಹಾಗೂ ತಾಲ್ಲೂಕು ಅಸ್ತಿತ್ವಕ್ಕೆ ಬಂದು 6 ವರ್ಷ ಗತಿಸಿದರೂ ಸರ್ಕಾರ ಎಲ್ಲ ಇಲಾಖೆಗಳನ್ನು ಆರಂಭಿಸದಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ಗುಳೇದಗುಡ್ಡದ ಸಾಮಾಜಿಕ ಕಾರ್ಯಕರ್ತ ಅಶೋಕ ಹೆಗಡೆ.

ಮುಂದಿನ ಸಲ ಗುಲೇದಗುಡ್ಡ ಪಟ್ಟಣದಲ್ಲೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲು ಶಾಸಕರ ಗಮನಕ್ಕೆ ತರಲಾಗುವುದು.
ಮಂಗಳಾ ಎಂ, ತಹಶೀಲ್ದಾರ್, ಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.