ADVERTISEMENT

ಪ್ರತಿ ಲೀಟರ್ ಹಾಲಿಗೆ ₹ 32 ನೀಡಲು ಆಗ್ರಹ

ಶೀತಲೀಕರಣ ಕೇಂದ್ರದ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 16:01 IST
Last Updated 29 ಅಕ್ಟೋಬರ್ 2024, 16:01 IST
ಕೆಎಂಎಫ್‍ನಿಂದ ಪ್ರತಿ ಲೀಟರ್ ಹಾಲಿಗೆ 32 ರೂ. ನೀಡಬೇಕೆಂದು ಆಗ್ರಹಿಸಿ ಸಂಗಾನಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಮಹಾಲಿಂಗಪುರದ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಶೀತಲೀಕರಣ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.
ಕೆಎಂಎಫ್‍ನಿಂದ ಪ್ರತಿ ಲೀಟರ್ ಹಾಲಿಗೆ 32 ರೂ. ನೀಡಬೇಕೆಂದು ಆಗ್ರಹಿಸಿ ಸಂಗಾನಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಮಹಾಲಿಂಗಪುರದ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಶೀತಲೀಕರಣ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.   

ಮಹಾಲಿಂಗಪುರ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದಿಂದ ಪ್ರತಿ ಲೀಟರ್ ಹಾಲಿಗೆ ₹ 32 ನೀಡಬೇಕು ಎಂದು ಆಗ್ರಹಿಸಿ ಸಂಗಾನಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಪಟ್ಟಣದ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಶೀತಲೀಕರಣ ಕೇಂದ್ರದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

‘ಪ್ರತಿ ಲೀಟರ್ ಹಾಲಿಗೆ ಸದ್ಯ ₹ 27 ನೀಡುತ್ತಿದ್ದು, ಇದರಿಂದ ಹೈನುಗಾರಿಕೆ ನಡೆಸುವುದು ಕಷ್ಟವಾಗಿದೆ. ಏಕಾಏಕಿ ಹಾಲಿನ ದರ ಕಡಿಮೆ ಮಾಡುತ್ತಿರುವುದರಿಂದ ರೈತರಿಗೆ ಹಾನಿಯಾಗುತ್ತಿದೆ. ಆದೇಶ ಬರದೇ ಇದ್ದರೂ ₹ 29 ಇರುವುದನ್ನು ₹ 27ಕ್ಕೆ ಇಳಿಕೆ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ದರ ನಿಗದಿಮಾಡಬೇಕು’ ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.

‘ಹಾಲಿಗೆ ಘೋಷಣೆ ಮಾಡಿದ ದರವನ್ನೇ ವರ್ಷವಿಡೀ ಮುಂದುವರೆಸಬೇಕು. ಹಾಲಿನಿಂದ ಉತ್ಪನ್ನ ಮಾಡುವ ವಸ್ತುಗಳು ಬಹಳಷ್ಟಿವೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕು. ಹಾಲಿಗೆ 3.5 ಪ್ಯಾಟ್ ಮತ್ತು 8.5 ಎಸ್‍ಎನ್‍ಎಫ್ ಇದ್ದರೆ ಮಾತ್ರ ₹ 27 ನೀಡಲಾಗುತ್ತಿದೆ. ಕಡಿಮೆ ಇದ್ದರೆ ಅವತ್ತಿನ ಹಣವನ್ನೇ ನೀಡುವುದಿಲ್ಲ’ ಎಂದು ರೈತರು ಆರೋಪಿಸಿದರು.

ADVERTISEMENT

ಕೆಎಂಎಫ್ ವ್ಯವಸ್ಥಾಪಕ ಗಜರಾಜ ರಣತೂರ ಮನವಿ ಸ್ವೀಕರಿಸಿ ಮಾತನಾಡಿ, ‘ವಿಜಯಪುರ ಹಾಗೂ ಬಾಗಲಕೋಟೆ ಎರಡೂ ಜಿಲ್ಲೆಯಿಂದ ಪ್ರತಿದಿನ ಸರಾಸರಿ 1.80 ರಿಂದ 2 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ. ಈ ಪೈಕಿ ಕೇವಲ 90 ಸಾವಿರದಿಂದ 1 ಲಕ್ಷದವರೆಗೆ ಪ್ಯಾಕೆಟ್‌ ಹಾಲು ತಯಾರಿಸಲಾಗುತ್ತದೆ. ಉಳಿದಿದ್ದನ್ನು ಹಾಲಿನ ಉತ್ಪನ್ನ ಇಲ್ಲವೇ ಹಾಲಿನ ಪುಡಿ ಸೇರಿದಂತೆ ಯಾವುದೋ ಪದಾರ್ಥ ಮಾಡಲಾಗುತ್ತದೆ. ಇದಕ್ಕೂ ಮಿಕ್ಕಿ ಉಳಿದರೆ ಬೇರೆ ರಾಜ್ಯಕ್ಕೆ ಕಳುಹಿಸಬೇಕು. ಇಲ್ಲದಿದ್ದರೆ ಡೆಡ್‍ಸ್ಟಾಕ್ ಆಗುತ್ತದೆ. ಹೀಗಾಗಿ, ದರ ಏರಳಿತವಾಗುತ್ತದೆ. ಆಡಳಿತ ಮಂಡಳಿ ಗಮನಕ್ಕೆ ತಂದು ದರ ಪರಿಷ್ಕರಣೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕೆಎಂಎಫ್ ಜಮಖಂಡಿ ಉಪವಿಭಾಗದ ಸಹಾಯಕ ವ್ಯವಸ್ಥಾಪಕ ಆರ್.ಎಸ್.ಚವ್ಹಾಣ್‌, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಗ್ರಾಮ ಲೆಕ್ಕಾಧಿಕಾರಿ ಸಿ.ಎಸ್.ಹೊಸಮನಿ ರೈತರ ಅಹವಾಲು ಆಲಿಸಿದರು.

ಸಿದ್ದು ಉಳ್ಳಾಗಡ್ಡಿ, ಕಾಳಮ್ಮ ಕೇದಾರಿ, ಪರಪ್ಪ ಹುದ್ದಾರ, ರಾಜು ಸೈದಾಪುರ, ಮಾರುತಿ ಹುದ್ದಾರ, ಶಿವಾನಂದ ನಾಗನೂರ, ಮುತ್ತಪ್ಪ ನಾಗನೂರ, ಶಿವಪ್ಪ ನಾಗನೂರ, ಗುರುಲಿಂಗಪ್ಪ ನಾಗನೂರ, ಪರಪ್ಪ ಉಳ್ಳಾಗಡ್ಡಿ, ಮಹಾದೇವ ಮೆಳವಂಕಿ, ಚನ್ನಪ್ಪ ಇಟ್ನಾಳ, ಗಿರಮಲ್ಲಪ್ಪ ಶಿವಾಪೂರ ಇತರರು ಪಾಲ್ಗೊಂಡಿದ್ದರು.

ಕೆಎಂಎಫ್‍ನಿಂದ ಪ್ರತಿ ಲೀಟರ್ ಹಾಲಿಗೆ 32 ರೂ. ನೀಡಬೇಕೆಂದು ಆಗ್ರಹಿಸಿ ಸಂಗಾನಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಮಹಾಲಿಂಗಪುರದ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಶೀತಲೀಕರಣ ಕೇಂದ್ರದ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಾದ ಗಜರಾಜ ರಣತೂರ ಪ್ರಕಾಶ ಮಠಪತಿ ಅವರಿಗೆ ಮನವಿ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.