ಕೂಡಲಸಂಗಮ: ಕೂಡಲಸಂಗಮ ಕ್ಷೇತ್ರದ ಬಸವಣ್ಣನವರ ಐಕ್ಯ ಮಂಟಪದಲ್ಲಿ ಭಾನುವಾರ ರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಲಾಯಿತು.
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವಚನ ಗಾಯನದೊಂದಿಗೆ ನೂತನ ವರ್ಷವನ್ನು ಸ್ವಾಗತಿಸಿದರು.
ರಾತ್ರಿ 11.50ಕ್ಕೆ ವಿಶೇಷ ಲಿಂಗ ಪೂಜೆಯನ್ನು ಮಾಡುತ್ತ ‘ಓಂ ಶ್ರೀ ಗುರು ಬಸವ ಲಿಂಗಾಯ ನಮಃ’ ಎಂಬ ಮಂತ್ರ ಪಠಿಸಿದರು. ಕಳೆದ ವರ್ಷದ ಒಳ್ಳೆಯ ಕಾರ್ಯಗಳನ್ನು ಸ್ಮರಸಿ, ಕೆಟ್ಟ ಕಾರ್ಯಗಳನ್ನು ಮರೆಯುವಂತೆ ಹೇಳಿ ಧ್ಯಾನದಲ್ಲಿ ತಲ್ಲೀನರಾಗಲು ತಿಳಿಸಿದರು.
12 ಗಂಟೆಗೆ ಸರಿಯಾಗಿ ಬಸವಣ್ಣವರ ಐಕ್ಯ ಸ್ಥಳದಲ್ಲಿ ಕುಳಿತು ವಚನ ಪಠಿಸಿದರು. ‘ಮೀಸಲಾತಿ ಹೋರಾಟಕ್ಕೆ ನ್ಯಾಯ ದೊರೆಯಲಿ, ನಾಡಿನಾದ್ಯಂತ ಉತ್ತಮ ಮಳೆ ಬೆಳೆ ದೊರಯಲಿ. ವಿಶ್ವದಾದ್ಯಂತ ಶಾಂತಿ ನೆಲೆಸಲಿ, ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕನಿಗೆ ಒಳಿತಾಗಲಿ’ ಎಂದು ಹೇಳಿದರು. ಮುಖಂಡರಾದ ಬಸವರಾಜ ರಕ್ಕಸಗಿ, ಬಿ.ಕೆ.ಗೌಡರ ಮುಂತಾದವರು ಇದ್ದರು.
ಭಕ್ತರಿಂದ ದೀಪೋತ್ಸವ ಸಂಗಮೇಶ್ವರ ಕಾರ್ತಿಕೋತ್ಸವದ ಪ್ರಯುಕ್ತ ಭಾನುವಾರ ರಾತ್ರಿಯಿಡೀ ಭಕ್ತರು ಸಂಗಮನಾಥನಿಗೆ ಕಾರ್ತೀಕ ದೀಪ ಹಚ್ಚುವ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದರು. ಕೆಲವು ಭಕ್ತರು ಮನೆಯಿಂದಲೇ ಸಿಹಿ ತಿಂಡಿಗಳ ಭೋಜನ ಸಮೇತ ಸುಕ್ಷೇತ್ರಕ್ಕೆ ಬಂದು ಕಾರ್ತಿಕ ದೀಪ ಬೆಳಗಿ ಕುಟುಂಬದವರೊಂದಿಗೆ ಭೋಜನ ಸವಿದರು. ಸಂಭ್ರಮಕ್ಕೆ ವಚನ ಗಾಯನ ಭಜನೆ ಜೊತೆಯಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.