ಬಾಗಲಕೋಟೆ: ಜಿಲ್ಲೆಯಲ್ಲಿಯೂ 6,900 ಎಕರೆ ಭೂಮಿ, 1,419 ಆಸ್ತಿಗಳು ವಕ್ಫ್ ಬೋರ್ಡ್‌ಗೆ ಸೇರಿವೆ ಎಂದು ವಕ್ಫ್ ದಾಖಲೆಗಳು ಹೇಳುತ್ತಿವೆ. ಆ ಭೂಮಿಯನ್ನು ವಕ್ಫ್‌ಗೆ ಪಡೆಯುವ ಕೆಲಸಗಳು ಆರಂಭಗೊಂಡಿವೆ.
ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿಗಳಲ್ಲಿ 706 ಆಸ್ತಿಗಳ ಖಾತೆ ಬೋರ್ಡ್‌ಗೆ ಹಸ್ತಾಂತರವಾಗಿವೆ. ಉಳಿದಂತೆ 713 ಆಸ್ತಿಗಳ ದಾಖಲೆಗಳು ವಕ್ಫ್‌ಗೆ ಹಸ್ತಾಂತರವಾಗಬೇಕಿದೆ. ಆದರೆ, ಇಲ್ಲಿಯವರೆಗೆ ಯಾರಿಗೂ ನೋಟಿಸ್ ನೀಡಿಲ್ಲ.
ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 568, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 555, ಹಾಗೂ ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ 296 ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ. ಅವುಗಳ ಸಂಪೂರ್ಣ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಸರ್ಕಾರದ ಕೆಲ ಕಚೇರಿಗಳು, ಸಮಾಜ ಕಲ್ಯಾಣ ಇಲಾಖೆಯ ವಸತಿ ಗೃಹಗಳು ಸೇರಿದಂತೆ ಹಲವು ಕಟ್ಟಡಗಳು ವಕ್ಫ್‌ಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ತೆರವುಗೊಳಿಸಲಾಗುತ್ತದೆಯೇ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ.
ಮಸೀದಿ, ದರ್ಗಾ, ಮದರಸಾ, ಖಬರಸ್ಥಾನ್, ಈದ್ಗಾ, ಶಿಕ್ಷಣ ಸಂಸ್ಥೆಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಕೆಲ ಆಸ್ತಿಗಳು ಗೆಜೆಟ್ ಪ್ರಕಾರ ವಕ್ಫ್ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿದು ಬಂದಿದೆ.
ಖಾತೆ ಬದಲಾವಣೆ ಕುರಿತಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಮೂನೆ 3ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ನಿಯಮಾನುಸಾರ ಇದ್ದರೆ, ಬದಲಾವಣೆ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳೂ ಭರವಸೆ ನೀಡಿದ್ದಾರೆ. ಆದರೆ, ಈ ಕುರಿತು ಮಾಹಿತಿ ಹಂಚಿಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಭೂ ನ್ಯಾಯ ಮಂಡಳಿಯು ಕೆಲ ಭೂಮಿಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. ಈ ಆಸ್ತಿಗಳ ಕುರಿತು ಆಕ್ಷೇಪಣೆ ಬಂದರೂ, ಆ ಭೂಮಿಯನ್ನು ವಾಪಸ್ ಪಡೆಯಲು ಬರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಭೂಮಿ ವಾಪಸ್ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.