ADVERTISEMENT

ಉದ್ಘಾಟನೆಗೊಂಡರೂ ಹೊಲಗಳಿಗೆ ಹರಿಯದ ನೀರು

ಮಂಟೂರ ಮಹಾಲಕ್ಷ್ಮಿ ಏತ ನೀರಾವರಿಯಿಂದ ಈ ವರ್ಷ ನೀರಿಲ್ಲ

ಬಸನವಾರ ಹವಾಲ್ದಾರ
Published 8 ಸೆಪ್ಟೆಂಬರ್ 2023, 4:38 IST
Last Updated 8 ಸೆಪ್ಟೆಂಬರ್ 2023, 4:38 IST
ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಕಾಮಗಾರಿಯ ದೃಶ್ಯ (ಸಂಗ್ರಹ ಚಿತ್ರ)
ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಕಾಮಗಾರಿಯ ದೃಶ್ಯ (ಸಂಗ್ರಹ ಚಿತ್ರ)   

ಬಾಗಲಕೋಟೆ: ಜಿಲ್ಲೆಯ ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಉದ್ಘಾಟನೆಗೊಂಡು ಐದು ತಿಂಗಳಾದರೂ ರೈತರ ಹೊಲಗಳಿಗೆ ನೀರು ಹರಿದಿಲ್ಲ. ಕಾರಣ ಹುಡುಕುತ್ತಾ ಹೋದರೆ, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತರಾತುರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿ ಅದ್ಧೂರಿಯಾಗಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಗಿತ್ತು. ಟೆಂಡರ್‌ದಾರರಿಗೆ ನೀಡಿದ್ದ ಕಾಮಗಾರಿಯ ಅವಧಿ ಮುಗಿಯುವ ಮುನ್ನವೇ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಆಗ ಸಚಿವರಾಗಿದ್ದ ಗೋವಿಂದ ಕಾರಜೋಳ ಬೀಗಿದ್ದರು. ಆದರೆ, ಶೇ 10ರಷ್ಟು ಕಾಮಗಾರಿ ಇಂದಿಗೂ ಬಾಕಿ ಉಳಿದಿದೆ.

ಸರಿಯಾಗಿ ಮಳೆಯಾಗದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಿದ್ದರೆ, ಬೆಳೆಗಳನ್ನಾದರೂ ಉಳಿಸಿಕೊಳ್ಳಬಹುದಿತ್ತು. ಹಿಂದೆ ಘಟಪ್ರಭಾ ಎಡದಂತೆ ಕಾಲುವೆಯಿಂದ ನೀರು ಬರುತ್ತಿರಲಿಲ್ಲ. ಈಗ ಹೊಸ ಯೋಜನೆಯ ಮೂಲಕವೂ ಇನ್ನು ಬಂದಿಲ್ಲ.

ADVERTISEMENT

ಇದು ಹೊಸದಾಗಿ ನೀರುಣಿಸುವ ಯೋಜನೆಯೇನೂ ಅಲ್ಲ. ಹಿಡಕಲ್ ಜಲಾಶಯದ ಘಟಪ್ರಭಾ ನದಿಯ ಎಡದಂಡೆ ಕಾಲುವೆ ಮೂಲಕ ಮುಧೋಳ ತಾಲ್ಲೂಕಿನ 13 ಗ್ರಾಮ ಹಾಗೂ ಬೀಳಗಿ ತಾಲ್ಲೂಕಿನ 31 ಗ್ರಾಮಗಳ 29,669 ಎಕರೆ ಪ್ರದೇಶಕ್ಕೆ ನೀರು ಹರಿಸುವ ಯೋಜನೆ ಇದಾಗಿತ್ತು. ಹಿಡಕಲ್‌ ಜಲಾಯಶದಿಂದ ನೀರು ಸರಿಯಾಗಿ ಹರಿಸದ ಕಾರಣ ದಾಖಲೆಗಳಲ್ಲಷ್ಟೇ ನೀರಾವರಿ ದೊರೆತಿತ್ತು.

ಜಿಎಲ್‌ಬಿಸಿ ಯಿಂದ ಬಾರದ ನೀರಿನ ಪ್ರದೇಶಗಳಿಗೆ ನೀರುಣಿಸಲು ಹುಟ್ಟಿಕೊಂಡ ಯೋಜನೆಯೇ ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ. ಕೃಷ್ಣಾ ನದಿಗೆ 10.3 ಕಿ.ಮೀ. ಉದ್ದದವರೆಗೆ ಪೈಪ್‌ಲೈನ್ ಅಳವಡಿಸಿ ಜಿಎಲ್‌ಬಿಸಿ ತರಲು ಉದ್ದೇಶಿಸಲಾಗಿದೆ. ಇದಕ್ಕೆ ₹228 ಕೋಟಿ ವೆಚ್ಚ ಮಾಡಲಾಗುತ್ತಿದೆ.

ನೀರು ಎತ್ತಲು 3885 ಎಚ್‌ಪಿ ಸಾಮರ್ಥ್ಯದ ಐದು ಪಂ‍ಪ್‌ಸೆಟ್‌ಗಳನ್ನು ಅಳವಡಿಸಬೇಕಿದೆ. ಅದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಆಗಬೇಕಿದೆ. ಈಗಾಗಲೇ ₹200 ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿ ಆಗಿದೆ. ಆದರೆ, ಗುತ್ತಿಗೆದಾರರಿಗೆ ₹50 ಕೋಟಿ ಬಿಲ್‌ ಬಾಕಿ ಪಾವತಿಯಾಗಬೇಕಿದೆ. 

ಈ ವರ್ಷ ನೀರಿಲ್ಲ: ಗೋವಿನಜೋಳ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಬೆಳೆಯಲು ಏತ ನೀರಾವರಿಯಿಂದ ನದಿಯಲ್ಲಿ ನೀರು ಹರಿಯುವ ಜೂನ್‌ನಿಂದ ಅಕ್ಟೋಬರ್‌ವರೆಗೆ ನೀರು ಹರಿಸಲಾಗುತ್ತದೆ. ಆಗಸ್ಟ್‌ ಮುಗಿಯುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ಬಾರದ್ದರಿಂದ ಕೃಷ್ಣಾ ನದಿಯಲ್ಲಿ ನೀರಿಲ್ಲ. ಹಾಗಾಗಿ, ಈ ವರ್ಷ ನೀರು ಹರಿಯುವುದು ಅಸಾಧ್ಯದ ಮಾತೇ ಆಗಿದೆ.

ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶೇ 10ರಷ್ಟು ಮಾತ್ರ ಬಾಕಿ ಉಳಿದಿದೆ. ಅದನ್ನೂ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು

–ಎಚ್‌.ಆರ್‌. ಮಹಾರಡ್ಡಿ ಎಇಇ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.