ಹುನಗುಂದ: ಶತಮಾನ ಕಂಡ ಪಟ್ಟಣದ ಸರ್ಕಾರಿ ಕೇಂದ್ರ ಶಾಲೆ ಮತ್ತು ಸಮಾಜ ಕೇಂದ್ರ ಆವರಣದ ಬಹುತೇಕ ಭಾಗ ನೀರು ಆವರಿಸಿ ಕೆರೆಯಂತೆ ಆಗಿ ದುರ್ನಾತ ಬೀರುತ್ತಿದೆ. ದಿನವೂ ಈ ವಾಸನೆ ಸಹಿಸಬೇಕಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಿದೆ.
ಒಂದು ಸಮಯದಲ್ಲಿ ಈ ಶಾಲೆಯಲ್ಲಿ 1,200 ರಿಂದ 1,400ರವರೆಗೆ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸಿ ಅವರಿಗೆ ಉನ್ನತ ಹುದ್ದೆ ಕಲ್ಪಿಸಿ ಬದುಕು ಕಟ್ಟಿಕೊಟ್ಟ ಈ ಶಾಲೆಯ ಶೋಚನೀಯ ಸ್ಥಿತಿಯನ್ನು ಈಗ ಕೇಳುವವರು ಇಲ್ಲದಂತಾಗಿದೆ.
ಮಳೆಗಾಲ ಬಂತೆಂದರೆ ಸಾಕು ಇಲ್ಲಿಯ ಮಕ್ಕಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕಾರಣ ಪ್ರತಿ ಬಾರಿ ಜೋರು ಮಳೆಯಾದಾಗ ಶಾಲೆಯ ಮೇಲ್ಭಾಗದ ಹಳ್ಳದ ನೀರು ಮತ್ತು ಸುತ್ತಲಿನ ಬಡಾವಣೆಗಳಿಂದ ಕೊಳಚೆ ನೀರು ಆವರಣದೊಳಗೆ ನಿಂತು ಕೆರೆಯಂತೆ ಆಗುತ್ತದೆ. ಆವರಣದೊಳಗೆ ನುಗ್ಗುವ ನೀರು ಬೇರೆ ಕಡೆ ಹೋಗಲು ಅವಕಾಶ ಇಲ್ಲದಂತಾಗಿದೆ. ಮಳೆ ನಿಂತರೂ ನೀರು ಇಲ್ಲಿ ಬರುವುದು ನಿಲ್ಲುವುದಿಲ್ಲ. ಏಕೆಂದರೆ ಶಾಲೆ ಕೆಳ ಭಾಗದಲ್ಲಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ನಿರಂತರವಾಗಿ ನೀರು ಬಸಿಯುತ್ತಿರುತ್ತದೆ. ಹೀಗಾಗಿ ಶಾಲೆಯ ಆವರಣದಲ್ಲಿ ತಿಂಗಳುಗಟ್ಟಲೇ ನೀರು ನಿಂತು ದುರ್ನಾತ ಬೀರುತ್ತದೆ.
ಇಲ್ಲಿ ನಿಂತ ನೀರು ಸೊಳ್ಳೆ ಮತ್ತು ಕ್ರೀಮಿ–ಕೀಟಗಳ ಆವಾಸದ ತಾಣವಾಗಿ ಮಾರ್ಪಟ್ಟಿದೆ. ನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಆವರಣದಲ್ಲಿ ಮೂಗು ಮುಚ್ಚಿಕೊಂಡೇ ಹೆಜ್ಜೆ ಹಾಕುವಂತಾಗಿದೆ. ಪ್ರಸ್ತುತ ಈ ಶಾಲೆಯಲ್ಲಿ 87 ವಿದ್ಯಾರ್ಥಿಗಳು ಶಿಕ್ಷಣ ಪಡೆಯತ್ತಿದ್ದಾರೆ. ಸರ್ಕಾರ ಅಥವಾ ಸಂಭಂಧಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. 2-3 ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಾಲೆಯ ಮುಖ್ಯ ಶಿಕ್ಷಕರು ಅಸಹಾಯಕತೆ ವ್ಯಕ್ತ ಪಡಿಸಿದರು.
ಇದೇ ಆವರಣದಲ್ಲಿ ಶಾಲೆಯ ಹಳೆಯ ಕಟ್ಟಡವಿದ್ದು, ಬಹುತೇಕ ಎಲ್ಲ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿ ಬೀಳುವಂತಾಗಿವೆ. ಈ ಕಟ್ಟಡದ ಆಸುಪಾಸಿನಲ್ಲಿ ವಿದ್ಯಾರ್ಥಿಗಳು ತಿರುಗಾಡುವುದರಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಾರೆ ಪಾಲಕರು.
ಶಾಲಾ ಆವರಣದಲ್ಲಿ ನಿಂತಿರುವ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿ ಕೊಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ಮನವಿ ಮಾಡುತ್ತೇನೆಜಾಸ್ಮೀನ್ ಕಿಲ್ಲೇದಾರ ಕ್ಷೇತ್ರ ಶಿಕ್ಷಣಾಧಿಕಾರಿ ಹುನಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.