ADVERTISEMENT

ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಯತ್ನ: ಸಚಿವ ಎಚ್.ಕೆ. ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 14:18 IST
Last Updated 10 ಡಿಸೆಂಬರ್ 2023, 14:18 IST
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಸದಸ್ಯರು ಸುವರ್ಣ ಸೌಧದ ಮುಂಭಾಗದಲ್ಲಿ ನೇಕಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಚಿವ ಎಚ್.ಕೆ.ಪಾಟೀಲ ಭೇಟಿ ನೀಡಿ ನೇಕಾರರ ಸಮಸ್ಯೆಗಳನ್ನು ಆಲಿಸಿದರು.
ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಸದಸ್ಯರು ಸುವರ್ಣ ಸೌಧದ ಮುಂಭಾಗದಲ್ಲಿ ನೇಕಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಚಿವ ಎಚ್.ಕೆ.ಪಾಟೀಲ ಭೇಟಿ ನೀಡಿ ನೇಕಾರರ ಸಮಸ್ಯೆಗಳನ್ನು ಆಲಿಸಿದರು.   

ರಬಕವಿ ಬನಹಟ್ಟಿ: ರಾಜ್ಯದ ನೇಕಾರರ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಜೊತೆಗೆ ಶೀಘ್ರದಲ್ಲಿಯೇ ನೇಕಾರರ ಮುಖಂಡರೊಂದಿಗೆ ಸಭೆಗೆ ಅವಕಾಶ ಮಾಡಿಕೊಡುವ ಮೂಲಕ ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಇದೇ ತಿಂಗಳಲ್ಲಿ ನೇಕಾರರ ಸಭೆಯನ್ನು ಕೂಡ ನಡೆಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ನೇಕಾರರಿಗೆ ಭರವಸೆ ನೀಡಿದರು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.

ಭಾನುವಾರ ಬನಹಟ್ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ತಿಂಗಳವರೆಗೆ ನೇಕಾರರ ಬಾಕಿ ಬಿಲ್ ಪಾವತಿಸುವ ಬಗ್ಗೆ ನೇಕಾರರನ್ನು ಒತ್ತಾಯಿಸಬಾರದು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸಚಿವ ಎಚ್.ಕೆ. ಪಾಟೀಲ ಸೂಚನೆ ನೀಡಿದರು’ ಎಂದು ಟಿರಕಿ ತಿಳಿಸಿದರು.

‘ಈಗಾಗಲೇ ವೃತ್ತಿ ಪರ ನೇಕಾರರಿಗೆ ಉಚಿತ ವಿದ್ಯುತ್ ಜಾರಿಯಾಗಿದೆ. ಆದರೆ 10 ರಿಂದ 20 ಎಚ್.ಪಿವರೆಗಿನ ಆದೇಶ ಅವೈಜ್ಞಾನಿಕವಾಗಿದೆ. ಅದನ್ನು ಕೂಡಲೇ ತಿದ್ದುಪಡಿ ಮಾಡಬೇಕು. 500 ಯೂನಿಟ್‌ವರೆಗೆ ಉಚಿತ ವಿದ್ಯುತ್, ನಂತರದ ಹೆಚ್ಚುವರಿ ಯುನಿಟಗಳಿಗೆ ₹ 1.25 ರಷ್ಟು ಮಾತ್ರ ವಿಧಿಸಬೇಕು. ಯಾವುದೆ ರೀತಿ ಶುಲ್ಕ ವಿಧಿಸದೇ ವಿದ್ಯುತ್ ಪೂರೈಸಬೇಕು. ಇಲ್ಲದಿದ್ದರೆ ನಮಗೆ ಉದ್ಯೋಗ ಮುಂದುವರಿಸಲು ತೊಂದರೆಯಾಗುತ್ತದೆ’ ಎಂದು ಹೇಳಿದರು.

ADVERTISEMENT

ಕಟ್ಟಡ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಕೂಡ ವೃತ್ತಿಪರ ನೇಕಾರರಿಗೆ ನೀಡಬೇಕು. ನೇಕಾರರ ಸಂಪೂರ್ಣ ಸಾಲ ಮನ್ನಾ ಮತ್ತು ಐದಾರು ತಿಂಗಳಿಂದ ಬಾಕಿ ಇರುವ ನೇಕಾರರ ಬಿಲ್ ಅನ್ನು ಸರ್ಕಾರವೇ ಭರಿಸಬೇಕು ಎಂದು ಶಿವಲಿಂಗ ಟಿರಕಿ ಸಚಿವರನ್ನು ಆಗ್ರಹಿಸಿದರು.

‘ನೇಕಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಸಿದ್ದು ಸವದಿ ಕೂಡ  ಭರವಸೆ ನೀಡಿದರು’ ಎಂದು ಟಿರಕಿ ಪತ್ರಿಕೆಗೆ ತಿಳಿಸಿದರು.

ರಾಜೇಂದ್ರ ಮಿರ್ಜಿ, ಸಂಗಪ್ಪ ಹಳ್ಳೂರ,ಅರ್ಜುನ ಕುಂಬಾರ, ಮಲ್ಲಪ್ಪ ಮಿರ್ಜಿ, ಸಂಗಪ್ಪ ಉದಗಟ್ಟಿ, ಜಬ್ಬಾರ ಶೇಖ, ಗುರುಪಾದ ಅಮ್ಮಣಗಿ, ಸದಾಶಿವ ಖಟಾವಕರ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.