ADVERTISEMENT

ಡಂಬಳ | ಬಿತ್ತನೆ ಕ್ಷೇತ್ರ ಕಡಿಮೆ: ಹೆಚ್ಚಾದ ಬೇಡಿಕೆ

ಲಕ್ಷ್ಮಣ ಎಚ್.ದೊಡ್ಡಮನಿ
Published 20 ಡಿಸೆಂಬರ್ 2023, 5:11 IST
Last Updated 20 ಡಿಸೆಂಬರ್ 2023, 5:11 IST
ಡಂಬಳ ಗ್ರಾಮದ ರೈತರ ಜಮೀನೊಂದರಲ್ಲಿ ಸಮೃದ್ಧವಾಗಿ ಬೆಳೆದಿರುವ ಬಿಳಿಜೋಳದ ಚಿತ್ರಣ.
ಡಂಬಳ ಗ್ರಾಮದ ರೈತರ ಜಮೀನೊಂದರಲ್ಲಿ ಸಮೃದ್ಧವಾಗಿ ಬೆಳೆದಿರುವ ಬಿಳಿಜೋಳದ ಚಿತ್ರಣ.   

ಡಂಬಳ: ಬಿತ್ತನೆ ಕ್ಷೇತ್ರ ಕಡಿಮೆಯಾದ ಪರಿಣಾಮ ಉತ್ತರ ಕರ್ನಾಟಕ ಭಾಗದ ಜನ ಗಟ್ಟಿ ಆಹಾರ ಎಂದು ಹೆಸರು ಪಡೆದಿರುವ ಬಿಳಿ ಜೋಳಕ್ಕೆ ಈ ಸಲ ಭಾರಿ ಬೇಡಿಕೆ ಬಂದಿದೆ. ರೈತ ಸಮುದಾಯಕ್ಕೆ ಹರ್ಷ ತಂದರೆ ಗ್ರಾಹಕರು ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳ ಖರೀದಿ ರೈತರಿಗೆ ಪಡಿತರ ವಿತರಣಾ ಕೇಂದ್ರದ ಮೂಲಕ ರಿಯಾಯಿತಿ ದರದಲ್ಲಿ ವಿತರಣೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ರೈತ ಸಮುದಾಯ ಈಚೇಗೆ ವಾಣಿಜ್ಯ ಬೆಳೆ ಬೆಳೆಯಲು ಹೆಚ್ಚು ಆಸಕ್ತಿ ವಹಿಸುತ್ತಿದ್ದರಿಂದ ಜೋಳ ಬಿತ್ತನೆಗೆ ನಿರಾಸಕ್ತಿ ತೋರಿದ್ದಾರೆ. ಅಲ್ಲದೇ ಮಳೆ ಕೊರತೆಯಿಂದ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ.

ಸದ್ಯ ಬಿಳಿ ಜೋಳದ ದರ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ದರ ₹ 6 ಸಾವಿರದಿಂದ ₹ 6500 ಇದೆ. ಹೀಗಾಗಿ ಬಡವರು ಮಧ್ಯವರ್ಗದ ಜನರಿಗೆ ಜೋಳ ಖರೀದಿ ಮಾಡಿ ಊಟ ಮಾಡುವುದು ಗಗನ ಕುಸಮವಾಗಲಿದೆ ಎನ್ನುವ ಆತಂಕ ಕಾಡತೊಡಗಿದೆ.

ADVERTISEMENT

ಮತ್ತೊಂಡದೆ ಬಿಳಿ ಜೋಳದ ದರ ಹೆಚ್ಚಳವಾದ ಪರಿಣಾಮ ಹಲವು ವರ್ಷದಿಂದ ಒಂದು ರೊಟ್ಟಿಗೆ ₹ 5 ಇದ್ದ ದರ ಈಗ ಹೋಟೆಲ್, ಖಾನಾವಳಿಗಳಲ್ಲಿ ಬೆಲೆ ಏರಿಕೆಯಾಗಲಿದೆ. ಒಂದು ರೊಟ್ಟಿಗೆ ₹ 8 ರಿಂದ ₹ 10 ಆಗಲಿದ್ದು, ರೊಟ್ಟಿಪ್ರಿಯರಿಗೆ ಹೊಡೆತ ಬೀಳಲಿದೆ.

‘ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಜೋಳವನ್ನು ರೈತರ ಮೂಲಕ ಖರೀದಿ ಮಾಡಿ ಪಡಿತರ ವಿತರಣೆ ಕೇಂದ್ರದ ಮೂಲಕ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ವಿತರಣೆ ಮಾಡಬೇಕು. ಬೆಲೆ ಹೆಚ್ಚಳದ ಪರಿಣಾಮ ರೊಟ್ಟಿ ತಿನ್ನದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಊಟ ಮಾಡುವಾಗ ರೊಟ್ಟಿ ತಿಂದರೆ ಮಾತ್ರ ನಮಗೆ ನೆಮ್ಮದಿ ಮತ್ತು ಆರೋಗ್ಯಕ್ಕೂ ಪೂರಕ’ ಎನ್ನುತ್ತಾರೆ ಡಂಬಳದ ಹಿರಿಯರಾದ ಸಿದ್ದಪ್ಪ ನಂಜಪ್ಪನವರ ಮತ್ತು ಬಸವರಾಜ ಪೂಜಾರ.

ಹಿಂಗಾರಿ ಬೆಳೆ ಬಿತ್ತನೆ ವಿವರ

2022-23ರಲ್ಲಿ 14,300 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದ್ರೆ 14,305 ಹೆಕ್ಟರ್ ಸಾಧನೆ ಮಾಡಲಾಗಿದೆ. 2023-24ರಲ್ಲಿ 1310 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು ಆದ್ರೆ 9525 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಬಿಳಿ ಜೋಳ ಬಿತ್ತನೆಯಾಗಿದೆ.

‘ಮಳೆ ಕೊರತೆ ಅಥವಾ ಹಲವು ವರ್ಷದಿಂದ ನಿರಂತರವಾಗಿ ಜೋಳದ ಬೆಲೆ ಕುಸಿತ ಮತ್ತು ರೈತರು ಹೆಚ್ಚು ವಾಣಿಜ್ಯ ಬೆಳೆಗೆ ಆಸಕ್ತಿ ವಹಿಸುತ್ತಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ’ ಎಂದು ಪ್ರಜಾವಾಣಿಗೆ ಮುಂಡರಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಾಳ ಮಾಹಿತಿ ನೀಡಿದರು.

ಜೋಳಕ್ಕೆ ಅಕ್ಕಿ ಮಿಶ್ರಣ ಅನಿವಾರ್ಯ

ಬೆಲೆ ಹೆಚ್ಚಳದ ಪರಿಣಾಮ ಹಾಗೂ ಜೋಳಕ್ಕೆ ಸ್ವಲ್ಪ ಅಕ್ಕಿ ಮಿಶ್ರಣ ಮಾಡಿ ಜೋಳದ ಹಿಟ್ಟು ಹಾಕಿಸಿಕೊಂಡು ಬಂದರೆ ರೊಟ್ಟಿ ಸ್ವಲ್ಪ ಬಿಳುಪ ಆಗುತ್ತವೇ ಹೀಗಾಗಿ ಜೋಳದಲ್ಲಿ ಅಕ್ಕಿ ಮಿಶ್ರಣ ಮಾಡಿ ಹಿಟ್ಟು ಹಾಕಿಸುವುದು ಅನಿವಾರ್ಯವಾಗಿದೆ. ಮತ್ತೊಂದಡೆ ಬೆಲೆ ಹೆಚ್ಚಳದಿಂದ ಮನೆಯಲ್ಲಿ ಯಜಮಾನರು ಜೋಳ ಖರೀದಿ ಮಾಡಿಕೊಂಡು ಬರಲು ಹಿಂದೇಟು ಹಾಕುತ್ತಿದ್ದು ಬಡವರ ಮಧ್ಯಮದ ವರ್ಗ ಹಾಗೂ ಜನಸಾಮಾನ್ಯರ ಗಟ್ಟಿ ಆಹಾರವಾಗಿದ್ದ ಬಿಳ ಜೋಳ ಪ್ರಸ್ತುತ ಶ್ರೀಮಂತರ ಆಹಾರವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಇದಕ್ಕಿಂತ ಸರ್ಕಾರ ಅಗತ್ಯ ಕ್ರಮ ತಗೆದುಕೊಳ್ಳಬೇಕು ಎನ್ನುತ್ತಾರೆ ಡಂಬಳ ಗ್ರಾಮದ ಶೇಖವ್ವ ಪಲ್ಲೇದ ಮತ್ತು ಜಾನಕವ್ವ ಪೂಜಾರ.

ಡಂಬಳದ ರೈತರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿರುವ ಬಿಳಿಜೋಳದ ಚಿತ್ರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.