ರಾಂಪುರ: ಹೆಸರು ಬೆಳೆಗೆ ಹಳದಿ ಬಣ್ಣದ ರೋಗ ತಗುಲಿದ್ದರಿಂದ ರೈತರು ಈಗ ಇಡೀ ಬೆಳೆಯನ್ನೇ ಕಿತ್ತು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬಾಗಲಕೋಟೆ ತಾಲ್ಲೂಕಿನ ಶಿರೂರ, ಬೆನಕಟ್ಟಿ ಗ್ರಾಮಗಳಲ್ಲಿ ಅನೇಕ ಜನ ರೈತರು ತಮ್ಮ ಹೊಲಗಳಲ್ಲಿನ ಹೆಸರು ಬೆಳೆಯನ್ನು ಕಿತ್ತು ಹಾಕಿ ಪರ್ಯಾಯ ಬೆಳೆ ಬೆಳೆಯಲು ಬಿತ್ತನೆಗೆ ಭೂಮಿ ಸ್ವಚ್ಛಗೊಳಿಸುತ್ತಿದ್ದಾರೆ.
ಅಧಿಕ ಮಳೆ ಸುರಿದ ಪರಿಣಾಮ ಹೆಸರು ಬೆಳೆಗೆ ಹಳದಿ ರೋಗ ಬಂದಿದೆ ಎಂದು ಹೇಳಲಾಗಿದ್ದು, ಅನೇಕ ರೈತರ ಹೊಲಗಳಲ್ಲಿನ ಬೆಳೆಗೆ ಹಳದಿ ರೋಗ ಆವರಿಸಿದೆ. ಈ ರೋಗ ತಗುಲಿದರೆ ಇಡೀ ಗಿಡವೇ ಸಂಪೂರ್ಣವಾಗಿ ಹಳದಿ ಬಣ್ಣದ್ದಾಗಿ ಕೊಂಡಿ ಬಿಡುವುದಾಗಲಿ, ಕಾಯಿ ಕಟ್ಟುವುದಾಗಲಿ ಆಗುವುದಿಲ್ಲ. ಕಾಯಿ ಆದರೂ ಅದರಲ್ಲಿ ಹಳದಿ ಬಣ್ಣದ ಕಾಳು ಬರುತ್ತದೆ. ಇದರಿಂದ ರೈತರಿಗೆ ನಷ್ಟ. ಇದನ್ನರಿತು ರೈತರು ಬೆಳೆಯನ್ನೇ ಕಿತ್ತು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆನಕಟ್ಟಿ, ಶಿರೂರ ಗ್ರಾಮಗಳಲ್ಲಿ ರೈತರು ಕಳೆದ ಎರಡು ದಿನಗಳಿಂದ ಹೆಸರು ಬೆಳೆಯನ್ನು ಕಿತ್ತು ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಲ್ಕು, ಐದು ಎಕರೆ ಭೂಮಿಯಲ್ಲಿ ಬೆಳೆಯಲಾದ ಬೆಳೆಯನ್ನು ಕಿತ್ತು ಹಾಕಲು ಬೇರೆಡೆಯಿಂದ ಕೂಲಿ ಆಳುಗಳನ್ನು ತರುತ್ತಿದ್ದಾರೆ. ಇದು ಸಹ ರೈತರಿಗೆ ದುಬಾರಿಯಾಗುತ್ತಿದೆ.
ಅಧಿಕಾರಿಗಳ ಭೇಟಿ: ರೈತರು ಹೆಸರು ಬೆಳೆಯನ್ನು ಕಿತ್ತು ಹಾಕುತ್ತಿರುವ ವಿಡಿಯೊ ನೋಡಿದ ತಕ್ಷಣ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಕೆ. ಶುಕ್ರವಾರ ಶಿರೂರ, ಬೆನಕಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ್ದಾರೆ.
ರೈತರಿಂದ ಮಾಹಿತಿ ಪಡೆದ ಅಧಿಕಾರಿಗಳು ಬೆಳೆ ನಷ್ಟಕ್ಕೆ ವಿಮೆ ಮಾಡಿಸುವಂತೆ ಸೂಚಿಸಿದ್ದಾರೆ. ಜುಲೈ 15 ರವರೆಗೆ ವಿಮೆ ಮಾಡಿಸಲು ಅವಕಾಶವಿದ್ದು, ಅದರ ಪ್ರಯೋಜನ ಪಡೆಯುವಂತೆ ರೈತರಿಗೆ ತಿಳಿಸಿದ್ದಾರೆ. ಆದರೆ ಅದಕ್ಕೆ ಒಪ್ಪದ ರೈತರು ಇಡೀ ಬೆಳೆಯನ್ನೇ ಕಿತ್ತು ಹಾಕಿ ಈರುಳ್ಳಿ, ಮೆಣಸಿನಕಾಯಿ ಬೀಜ ಬಿತ್ತನೆಗೆ ಜಮೀನು ಹದಗೊಳಿಸುವತ್ತ ಚಿತ್ತ ಹರಿಸಿದ್ದಾರೆ.
‘ಹೆಸರು ಬೆಳೆಗೆ ಆವರಿಸಿದ ಹಳದಿ ಬಣ್ಣದ ರೋಗ ನಿವಾರಣೆಗೆ ಔಷಧ ಸಿಂಪಡಣೆ ಮಾಡಿದರೂ ಪ್ರಯೋಜವಾಗಲಿಲ್ಲ. ಆದ್ದರಿಂದ ಬೆಳೆಯನ್ನೇ ಕಿತ್ತು ಹಾಕಿ ಮತ್ತೆ ಪರ್ಯಾಯ ಬೆಳೆ ಬೆಳೆಯಲು ಭೂಮಿ ಹದಗೊಳಿಸುತ್ತಿದ್ದೇವೆ’ ಎಂದು ಬೆನಕಟ್ಟಿ ಗ್ರಾಮದ ರೈತರಾದ ರಮೇಶ ಬೆಣ್ಣೂರ ಹಾಗೂ ರಮೇಶ ಯಡಹಳ್ಳಿ ಹೇಳಿದರು.
‘ವಿಮೆ ಮಾಡಿಸುವಂತೆ ಸೂಚನೆ’
ರೈತರು ಹೆಸರು ಬೆಳೆಯನ್ನು ಕಿತ್ತು ಹಾಕುತ್ತಿರುವ ಮಾಹಿತಿ ತಿಳಿದು ರೈತರ ಜಮೀನುಗಳಿಗೆ ಭೇಟಿ ನೀಡಿ ಚರ್ಚಿಸಿದೆ. ರೋಗ ನಿವಾರಣೆಗೆ ರೈತರು ತಾವು ಮಾಡಿದ ಪ್ರಯತ್ನ ತಿಳಿಸಿದರು. ಬೆಳೆ ನಾಶಕ್ಕೆ ಪರಿಹಾರ ಪಡೆಯಲು ಕೂಡಲೇ ವಿಮೆ ಮಾಡಿಸುವಂತೆ ಸೂಚಿಸಿದ್ದೇನೆ ಎಂದು ಬಾಗಲಕೋಟೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಕೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.