ಹುನಗುಂದ: ಮುಂಗಾರು ಮಳೆ ಕೊರತೆಯ ನಡುವೆಯೂ ಅರೆಬರೆ ತೇವಾಂಶದಲ್ಲಿ ಬಿತ್ತನೆ ಮಾಡಿದ ಗೋವಿನ ಜೋಳ ಬೆಳೆಗೆ ಲದ್ದಿ ಹುಳುವಿನ ಬಾಧೆ ಹೆಚ್ಚಾಗಿ ಬೆಳೆ ಹಾಳಾಗುವ ಹಂತದಲ್ಲಿದೆ. ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಒಟ್ಟು 1,659 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆ ಮಾಡಲಾಗಿದೆ. ರೈತರು ಪ್ರತಿ ವರ್ಷ ಕೃಷಿ ಚಟುವಟಿಕೆಯಲ್ಲಿ ಬಿತ್ತನೆಯಿಂದ ಹಿಡಿದು ಬೆಳೆ ಕೈ ಸೇರಿ ಮಾರಾಟ ಮಾಡುವವರೆಗೆ ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ, ಬೆಲೆ ಕುಸಿತ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಮುನಿಸಿಕೊಂಡಿದ್ದರಿಂದ ಬಿತ್ತನೆ ಕುಂಠಿತವಾಗಿತ್ತು. ಆದರೆ ಮುಂಗಾರು ಹಂಗಾಮಿನ ಕೊನೆಯಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರಿಂದ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಚುರುಕುಗೊಂಡಿತ್ತು. ಅದರಲ್ಲೂ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಗೋವಿನ ಜೋಳವನ್ನು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು.
ಮಳೆ ಕೊರತೆಯ ನಡುವೆಯೂ ತಾಲ್ಲೂಕಿನಾದ್ಯಂತ ಗೋವಿನ ಜೋಳಕ್ಕೆ ಲದ್ದಿ ಹುಳುವಿನ ಕಾಟ ಹೆಚ್ಚಾಗಿದ್ದು, ಕೀಟಗಳು ಬೆಳೆಯ ಸುಳಿಯನ್ನು ತಿಂದು ಹಾಕುತ್ತಿವೆ. ಒಂದೆಡೆ ಹುಳುಗಳ ಕಾಟ ಇನ್ನೊಂದೆಡೆ ಮಳೆಯಾಗದಿರುವುದರಿಂದ ರೈತರು ಆತಂಕ ಪಡುವಂತಾಗಿದೆ.
ಎಕರೆಗೆ ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತಿದ್ದ ಗೋವಿನ ಜೋಳ ಬೆಳೆ ಆರಂಭದ ಹಂತದಲ್ಲೇ ಕೀಟಬಾಧೆಗೆ ತುತ್ತಾಗಿದೆ. ಇಷ್ಟೆಲ್ಲ ಸಂಕಷ್ಟಗಳ ನಡುವೆ ಲದ್ದಿ ಹುಳುಗಳು ಬೆಳೆಯ ಸುಳಿ ತಿನ್ನುತ್ತಿದ್ದು, ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಫಸಲು ಬರುತ್ತದೆಯೋ ಇಲ್ಲವೋ ಎಂದು ತಿಳಿಯದಾಗಿದೆ ಎಂದು ರೈತರಾದ ಸಂಗಪ್ಪ ನರಗುಂದ, ಮಲ್ಲಿಕಾರ್ಜುನ ಕರಡಿ, ಸುರೇಶ ಚಿತ್ತವಾಡಗಿ, ಸಂಗನಗೌಡ ಭಾವಿಕಟ್ಟಿ, ವೀರಣ್ಣ ಯರಗಟ್ಟಿ ಅಲವತ್ತುಕೊಂಡರು.
ಮಳೆ ಕೊರತೆಯಿಂದ ಬೆಳೆ ಬಾಡುತ್ತಿದೆ. ಗೋವಿನ ಜೋಳಕ್ಕೆ ಕೀಟ ಬಾಧೆ ಹೆಚ್ಚಾಗಿರುವುದರಿಂದ ರೈತ ಸಮುದಾಯ ಆತಂಕ ಪಡುವಂತಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಯಡಹಳ್ಳಿ ಗ್ರಾಮದ ರೈತ ಮಹಾಂತೇಶ ಅರಸಿಬಿಡಿ ಆಗ್ರಹಿಸಿದರು.
ತಕ್ಷಣ ಕ್ರಮ ಕೈಗೊಳ್ಳಿ ಲದ್ದಿ ಹುಳು (ಸ್ಪೋಡೊಫೈರಾ ಪ್ರೊಜಿಪರ್ದಾ) ಅಪಾಯಕಾರಿ ಕೀಟವಾಗಿದ್ದು ಜಮೀನಿನಲ್ಲಿ ಕಾಣಿಸಿಕೊಂಡರೆ ಅದು ಬೆರಳೆಣಿಕೆಯ ದಿನಗಳಲ್ಲಿ ಇಡೀ ಬೆಳೆಯನ್ನೇ ತಿಂದು ನಾಶ ಮಾಡುತ್ತದೆ. ಹೀಗಾಗಿ ರೈತರು ಕೀಟ ನಿಯಂತ್ರಣಕ್ಕೆ 10 ಲೀಟರ್ ನೀರಿನಲ್ಲಿ 3 ಗ್ರಾಂ. ಇಮಾಮೆಕ್ಟೀನ್ ಬೆಂಜೊಯಿಟ್ ಮಿಶ್ರಣ ಮಾಡಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕು – ಬಸವರಾಜ ಟಕ್ಕಳಕಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಹುನಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.