ಮಹಾಲಿಂಗಪುರ: ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಮಹಾನ್ ಭಾರತ ಕೇಸರಿ ಜ್ಞಾನೇಶ್ವರ ಜಮದಾಡೆ ಗೆಲುವಿನ ನಗೆ ಬೀರಿದರು.
ಮಧ್ಯಪ್ರದೇಶ ಕೇಸರಿ ಹರಿಯಾಣದ ದೀಪಕಕುಮಾರ ಅವರೊಂದಿಗೆ ತೀವ್ರ ಸೆಣಸಾಟ ನಡೆಸಿದ ಪೈಲ್ವಾನ್ ಜ್ಷಾನೇಶ್ವರ ಜಮದಾಡೆ ಕುಸ್ತಿ ನಿಕಾಲಿ ಮಾಡಿ ಸಂಭ್ರಮಿಸಿದರು.
ತೀವ್ರ ಕುತೂಹಲ ಕೆರಳಿಸಿದ ಮತ್ತೊಂದು ಕುಸ್ತಿಯಲ್ಲಿ ಮಧ್ಯಪ್ರದೇಶದ ಅಮೀತಕುಮಾರ ಅವರನ್ನು ನೇಪಾಳದ ದೇವತಾಪಾ ಸೋಲಿಸಿದರು. ಪಂಜಾಬ ಕೇಸರಿ ಜೋಗಿಂದರ್ ಅವರನ್ನು ದಾವಣಗೇರಿ ಡಬಲ್ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ, ಪುಣೆಯ ಆದಿತ್ಯಾ ಪಾಟೀಲ ಅವರನ್ನು ಉಪಕರ್ನಾಟಕ ಕೇಸರಿ ಶಿವಾನಂದ ನಿರ್ವಾನಟ್ಟಿ ಹಾಗೂ ಹರಿಯಾಣದ ಲಸುನ್ ಬಾಗವತ್ ಅವರನ್ನು ಕರ್ನಾಟಕ ಕೇಸರಿ ನಾಗರಾಜ ಬಸಿಡೋನಿ ಸೋಲಿಸಿದರು.
ಬೆಳಗಾವಿಯ ಕ್ರೀಡಾಶಾಲೆಯ ಪ್ರೀತಿ ಚಿಕ್ಕೋಡಿ ಹಾಗೂ ಮಹಾಲಿಂಗಪುರದ ಮುಸ್ಮಾನ್ ನದಾಫ್ ಅವರ ಮಧ್ಯೆ ಏಕೈಕ ಮಹಿಳಾ ಕುಸ್ತಿ ಪಂದ್ಯ ನಿಕಾಲಿಯಾಗದೆ ಸಮಬಲ ಫಲಿತಾಂಶ ಘೋಷಿಸಲಾಯಿತು.
ರಾಜ್ಯ, ಅಂತರ್ ರಾಜ್ಯ ಮಟ್ಟದ ಖ್ಯಾತ ಕುಸ್ತಿಪಟುಗಳು ಆಗಮಿಸಿ, ತಮ್ಮ ತಾಕತ್ತನ್ನು ತೋರಿಸಿದರು.
ಅಖಾಡದಲ್ಲಿ ಕುಸ್ತಿಪಟುಗಳು ತೊಡೆ ತಟ್ಟಿ, ಸೆಡ್ಡು ಹೊಡೆದು ಒಬ್ಬರಿಗೊಬ್ಬರು ಸೆಣಸಾಡುತ್ತಿದ್ದರೆ, ಇತ್ತ ಪ್ರೇಕ್ಷಕರ ಗ್ಯಾಲರಿಯಿಂದ ಸಿಳ್ಳೆ, ಕೂಗಾಟ, ಚಪ್ಪಾಳೆಯ ಸದ್ದು ಕುಸ್ತಿಪಟುಗಳಿಗೆ ಉತ್ತೇಜನ ನೀಡಿತು. ತಮ್ಮಲ್ಲಿರುವ ನಾನಾ ಪಟ್ಟುಗಳನ್ನು ಪ್ರದರ್ಶಿಸಿ ಎದುರಾಳಿಯನ್ನು ಮಣ್ಣು ಮುಕ್ಕಿಸುವ ತವಕದ ದೃಶ್ಯವನ್ನು ಕಂಡು ಪ್ರೇಕ್ಷಕರು ಕೇಕೆ ಹಾಕಿದರು.
ಪ್ರತಿವರ್ಷ ಜಾತ್ರೆಯ ಮರು ರಥೋತ್ಸವಕ್ಕೂ ಮುನ್ನ ನಡೆಯುತ್ತಿದ್ದ ಕುಸ್ತಿ ಪಂದ್ಯಗಳನ್ನು ಈ ಬಾರಿ ಮರುರಥೋತ್ಸವ ಮುಗಿದ ನಂತರ ಆಯೋಜಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಪ್ರೇಮಿಗಳು ಆಗಮಿಸಿ ಕಣ್ತುಂಬಿಕೊಂಡರು.
ಪಾರ್ಥ ಕಂಗ್ರಾಳಿ, ಮುಬಾರಕ ಇಂಗಳಿ, ಗಜಾನನ ಹನಗಂಡಿ, ರಾಮಚಂದ್ರ ದುಮ್ಮಕ್ಕನಾಳ, ಅಮೀತ ಪಾಟೀಲ, ಬಾಳು ಸಿಂದಿಕುರಬೆಟ್ಟ, ಮಲ್ಲಪ್ಪ ಮೇತ್ರಿ, ಜಾವೇದ ಮಹಾಲಿಂಗಪುರ, ಯಾಕುಬ ಹನಗಂಡಿ, ಮಹಾಂತೇಶ ಬಾಡಗಿ, ಪ್ರಜ್ವಲ ಚಿಮ್ಮಡ ಸೇರಿದಂತೆ 40 ಹೆಚ್ಚು ಕುಸ್ತಿ ಸೆಣಸಾಟ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.