ಹೊಸಪೇಟೆ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾ ವಣೆಯ ಬಳ್ಳಾರಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಆರ್ಥಿಕ ಬಲ ಲೆಕ್ಕ ಲೆಕ್ಕಹಾಕುತ್ತಿದ್ದಾರೆ. ಹೌದು ಉಭಯ ಪಕ್ಷಗಳು ಈ ಎರಡು ಮಾನದಂಡಗಳ ಮೇಲೆ ಟಿಕೆಟ್ ಹಂಚಿಕೆ ಮಾಡಲು ನಿರ್ಧರಿಸಿದ್ದರೆ ಜೆಡಿಎಸ್ ಪಕ್ಷದ ಅಸ್ತಿತ್ವಕ್ಕಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.
ಪಕ್ಷದ ತತ್ವ ಸಿದ್ಧಾಂತ, ವರ್ಚಸ್ಸು, ಹಿನ್ನೆಲೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಟಿಕೆಟ್ ಹಂಚಿಕೆ ಮಾಡುವ ಪದ್ಧತಿ ಯಿಂದ ಬಹುದೂರ ಸರಿದಿರುವ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಗೆಲುವನ್ನೇ ಮುಖ್ಯವಾಗಿರಿಸಿಕೊಂಡಿವೆ ಎಂಬ ಮಾತುಗಳು ಸಾಮಾನ್ಯವಾಗಿವೆ. ಅಭ್ಯರ್ಥಿ ಆಯ್ಕೆಗೂ ಮುನ್ನವೇ ‘ಬೆಳ್ಳಿ ನಾಣ್ಯ’ ಮತ್ತು ‘ವಿಮೆಭಾಗ್ಯ’ ಪಡೆದು ಕೊಂಡ ಮತದಾರರು ಚುನಾವಣೆ ಘೋಷಣೆಯಾಗುತ್ತಿದ್ದಂತೆ ‘ಆರ್ಥಿಕ ಭಾಗ್ಯ’ ಎದುರು ನೋಡುತ್ತಿದ್ದಾರೆ.
ಈ ಮಧ್ಯೆ ಚುನಾವಣೆಯಲ್ಲಿ ಪಕ್ಷ ಹೇಳಿದಷ್ಟು ಹಣ ಖರ್ಚು ಮಾಡಲು ಆಗದ ಆಕಾಂಕ್ಷಿಗಳು ಕಣದಿಂದ ಹಿಂದೆ ಸರಿಯುತ್ತಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕಿದ್ದ ಇದೇ ಕ್ಷೇತ್ರದ ಹಾಲಿ ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಸ್ಪರ್ಧೆಗೆ ಹಿಂದೇಟು ಹಾಕುತ್ತಿ ದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಉಳಿದಂತೆ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವ ಚನ್ನಬಸವನ ಗೌಡ ಮತ್ತು ರಾಜಶೇಖರಗೌಡ ಅವರು ತಮಗೆ ಅವಕಾಶ ನೀಡಿದರೆ ಎಷ್ಟು ಖರ್ಚು ಮಾಡಬಲ್ಲವು ಎಂಬುದನ್ನು ಈಗಾಗಲೇ ತಮ್ಮ ವರಿಷ್ಠರಿಗೆ ತಿಳಿಸಿದ್ದಾರೆ ಎಂದೂ ತಿಳಿದು ಬಂದಿದೆ.
ಕಾಂಗ್ರೆಸ್ ಪರಿಸ್ಥಿತಿಯು ಬಿಜೆಪಿಗಿಂತ ಭಿನ್ನವಾಗಿಲ್ಲ. ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಮತ್ತು ಸೂರ್ಯ ನಾರಾಯಣ ರೆಡ್ಡಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಅಂತಿಮ ವಾಗಿ ಚುನಾವಣೆಯಲ್ಲಿ ಹಣ ಖರ್ಚು ಮಾಡುವ ಸಾಮರ್ಥ್ಯವೇ ಟಿಕೆಟ್ ಗಿಟ್ಟಿಸಿಕೊಳ್ಳುವ ಮಾನದಂಡವಾಗಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
ಇದೆಲ್ಲದರ ಮಧ್ಯೆ ಚುನಾವಣೆಗೆ ಹಣ ಖರ್ಚು ಮಾಡುವುದರಲ್ಲಿ ದೇಶದ ಗಮನ ಸೆಳೆದಿದ್ದ ಬಳ್ಳಾರಿ ಜಿಲ್ಲೆಯ ರಾಜಕಾರಣಿಗಳು ಇತ್ತೀಚಿನ ಚುನಾವಣೆ ಗಳಲ್ಲಿ ಕೈ ಬಿಗಿ ಹಿಡಿಯುತ್ತಿದ್ದಾರೆ. ಜನಾರ್ದನ ರೆಡ್ಡಿ ಸೇರಿದಂತೆ ಪ್ರಮುಖ ರಾಜಕಾರಣಿಗಳ ಗೈರು ಹಾಗೂ ಗಣಿಗಾರಿಕೆ ಸ್ಥಗಿತವೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.
ಆದರೂ ಪ್ರಸ್ತುತ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವ ಜನಪ್ರತಿನಿಧಿಗಳು ಯಾವ ಅಭ್ಯರ್ಥಿ ಬಲ ಎಷ್ಟು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು, ಪಕ್ಷದ ಮುಖಂಡರ ಮಧ್ಯೆಸ್ಥಿಕೆ ಬದಲಾಗಿ ಅಭ್ಯರ್ಥಿಯ ನೇರ ಸಂಪರ್ಕ ಸಾಧಿಸಲು ಮುಂದಾಗಿದ್ದಾರೆ.
*
ವಿದ್ವಾಂಸರ ವಿಷಾದ
ವಿಧಾನಪರಿಷತ್ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಒಂದು ಕಾಲದಲ್ಲಿ ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುತ್ತಿದ್ದ ಮೇಲ್ಮನೆ ಈಗ ಹಣವಂತರ ಪಾಲಾಗುತ್ತಿರುವುದಕ್ಕೆ ವಿದ್ವಾಂಸರು ಕಳವಳ ವ್ಯಕ್ತಪಡಿಸಿದ್ದಾರೆ.
‘ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಮೇಲೆ ಚರ್ಚಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡುವುದು ಅಥವಾ ನಿರ್ಣಯಗಳನ್ನು ವಿರೋಧಿಸುವುದು ಇಲ್ಲಿನ ಸದಸ್ಯರ ಕೆಲಸ. ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿ ಹಾಗೂ ಸರ್ಕಾರದಿಂದ ನಾಮನಿರ್ದೇಶನವಾಗಿ ಬಂದಿರುವ ಚಿಂತಕರೇ ಹೆಚ್ಚಾಗಿರುತ್ತಿದ್ದ ಸಂವಿಧಾನಿಕ ಸ್ಥಳ ಇದಾಗಿತ್ತು.
ಆದರೆ, ಇತ್ತೀಚಿಗೆ ಉದ್ಯಮಿಗಳು, ಅನುಭವದ ಕೊರತೆ ಎದುರಿಸು ತ್ತಿರುವ ಹಣ ಬಲದ ರಾಜಕಾರಣಿ ಗಳು ಪರಿಷತ್ತಿಗೆ ಲಗ್ಗೆ ಇಡುತ್ತಿರು ವುದು ವಿಷಾದದ ಸಂಗತಿ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ರಮೇಶ್ ನಾಯಕ್ ಕಳವಳ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.