ADVERTISEMENT

ಗೂಂಡಾ ಕಾಯ್ದೆ ಅಡಿ 8 ಮಂದಿ ಗಡಿಪಾರು

ಗೋನಾಳು ಗುಂಪು ಘರ್ಷಣೆಗೆ ವೈಯಕ್ತಿಕ ಕಾರಣ:ಎಸ್ಪಿ ಅರುಣ್‌ ರಂಗರಾಜನ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 6:10 IST
Last Updated 7 ಜೂನ್ 2018, 6:10 IST
ಅರುಣ್‌ ರಂಗ ರಾಜನ್‌
ಅರುಣ್‌ ರಂಗ ರಾಜನ್‌   

ಬಳ್ಳಾರಿ: ‘ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋನಾಳ ಗ್ರಾಮದಲ್ಲಿ ಮೇ 25ರಂದು ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿ 14 ಮಂದಿಯನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಹತ್ತು ಮಂದಿಗಾಗಿ ಹುಡುಕಾಟ ನಡೆದಿದೆ. ಬಂಧಿಸದೇ ಇರುವ ಎಂಟು ಮಂದಿಯನ್ನು ಗೂಂಡಾ ಕಾಯ್ದೆ ಅಡಿ ಗಡಿಪಾರು ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ತಿಳಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿ ಎರಡೂ ಗುಂಪಿನ 47 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತಿದೆ. ಗಲಭೆ ಎಬ್ಬಿಸುವ ಸಾಧ್ಯತೆ ಉಳ್ಳವರನ್ನು ಗುರುತಿಸಲಾಗಿದ್ದು, ಅವರನ್ನೂ ರೌಡಿಪಟ್ಟಿಗೆ ಸೇರಿಸಲಾಗುವುದು’ ಎಂದು ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವೈಯಕ್ತಿಕ ಪ್ರತಿಷ್ಠೆಗಾಗಿ ಘರ್ಷಣೆ ನಡೆದಿದ್ದು, ಅದಕ್ಕೆ ಎರಡೂ ಗುಂಪಿನ ಕೆಲವು ದುಷ್ಕರ್ಮಿಗಳು ಜಾತಿಯ ವಿಷಬೀಜ ಬಿತ್ತಿ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಅಂಥವರನ್ನೂ ಗುರುತಿಸಲಾಗಿದ್ದು, ವಿಚಾರಣೆ ನಡೆದಿದೆ. ಘರ್ಷಣೆಗೆ ಕಾರಣವಾದ ಎರಡು ಕುಟುಂಬಕ್ಕೆ ಸೇರಿರುವ ಜಾತಿಗಳ ಜನ ಮಾತ್ರ ಆ ಕುಟುಂಬಗಳಿಗೆ ಬೆಂಬಲ ನೀಡಿಲ್ಲ. ಆದರೆ ಪ್ರಕರಣವನ್ನು ಜಾತಿಗಳ ನಡುವಿನ ಘರ್ಷಣೆ ಎಂದು ಅಪಪ್ರಚಾರ ಮಾಡಲಾಗಿದೆ’ ಎಂದರು.

ADVERTISEMENT

‘ಘರ್ಷಣೆಯಲ್ಲಿ ಗಾಯಗೊಂಡಿರುವವರು ಮರಳು ಮಾಫಿಯಾ ನಡೆಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗ್ರಾಮದ ಪ್ರತಿ ಮನೆಗೂ ಭೇಟಿ ಕೊಟ್ಟು ಸಮಾಲೋಚನೆ ನಡೆಸಲಾಗಿದೆ. ಘರ್ಷಣೆ ಬಿಟ್ಟು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ’ ಎಂದರು.

‘ಎಫ್‌ಐಆರ್‌ ದಾಖಲಾಗಿರುವ ಎರಡೂ ಗುಂಪಿನ ಕಡೆಯವರಿಗೆ ಆಸ್ತಿ ಬಾಂಡ್ ಜಾರಿ ಮಾಡಲಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಆಸ್ತಿಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದರು.

ಪಾದಯಾತ್ರೆ: ಗ್ರಾಮದಲ್ಲಿ ಶಾಂತಿ ನೆಲೆಸಬೇಕು ಎಂಬ ಆಶಯದಿಂದ ಜೂನ್ 10ರಂದು ಅಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಮಾಲಾರ್ಪಣೆ ಬಳಿಕ ಚಿಗುರು ಕಲಾ ತಂಡದ ಕಲಾವಿದರು ಭಾವೈಕ್ಯ ಮತ್ತು ಸೌಹಾರ್ದ ಗೀತೆಗಳನ್ನು ಹಾಡಲಿದ್ದಾರೆ’ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್‌.ಜಗದೀಶ್‌ ಇದ್ದರು.

ರೌಡಿ ಪಟ್ಟಿಗೆ ಹಲವರ ಸೇರ್ಪಡೆ ಶೀಘ್ರ
ಬಳ್ಳಾರಿ:
ಜಿಲ್ಲೆಯ ಹಲವು ಗ್ರಾಮಗಳಲ್ಲಿ ಘರ್ಷಣೆಯನ್ನು ಸೃಷ್ಟಿಸುವ ಶಂಕಿತರನ್ನು ಗುರುತಿಸುವ ಕಾರ್ಯ ನಡೆದಿದ್ದು, ಅವರೆಲ್ಲರನ್ನೂ ರೌಡಿಪಟ್ಟಿಗೆ ಸೇರಿಸಲಾಗುವುದು. ಅದಕ್ಕಾಗಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ವೈಯಕ್ತಿಕ ಕಾರಣಕ್ಕಾಗಿ ನಡೆದಿರುವ ಘರ್ಷಣೆಗೆ ಜಾತಿ ಬಣ್ಣ ಬಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅರುಣ್‌ ರಂಗರಾಜನ್‌ ತಿಳಿಸಿದರು.

‘ರೌಡಿ ಪಟ್ಟಿ ಪರಿಶೀಲನೆ ಕಾರ್ಯ ಹಲವು ವರ್ಷಗಳಿಂದ ನಡೆದಿಲ್ಲ. ಶಾಂತಿ–ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಗ ಆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.