ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 2 ಜನವರಿ 2015, 7:28 IST
Last Updated 2 ಜನವರಿ 2015, 7:28 IST

ಬಳ್ಳಾರಿ: ಜಿಲ್ಲಾ ಮಟ್ಟದ 18ನೇ ಕನ್ನಡ ಸಾಹಿತ್ಯ ಸಮ್ಮೇಳನವು ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಬಳಿಯ ಬಂಟರ ಭವನದಲ್ಲಿ ಇದೇ 3ರಿಂದ ಎರಡು ದಿನಗಳ ಕಾಲ ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆದಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಎರಿಸ್ವಾಮಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾ­ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಸಮ್ಮೇಳನ ಉದ್ಘಾಟಿಸಲಿದ್ದು, ಸಾಹಿತಿ ಕೇಶವ ಮಳಗಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಷತ್‌ನ ಎಲ್ಲ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ. ಜಿಲ್ಲೆಯ ಸಾಹಿತ್ಯಾಸಕ್ತರನ್ನು ಸಂಪರ್ಕಿಸಿ ಸಮ್ಮೇಳನಕ್ಕೆ ಬರುವಂತೆ ಕೋರಲಾಗಿದೆ. ಶಾಲೆ– -ಕಾಲೇಜುಗಳಿಗೆ ಆಹ್ವಾನ ಪತ್ರಿಕೆ­ಗಳನ್ನು ವಿತರಿಸಲಾಗಿದ್ದು, ಅಧಿಕ ಸಂಖ್ಯೆ­ಯಲ್ಲಿ ಕನ್ನಡ ಪ್ರೇಮಿಗಳು ಸಮ್ಮೇಳನ­ದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಪುಸ್ತಕ, ಚಿತ್ರಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ­ಗಳನ್ನು ಏರ್ಪಡಿಸಲಾಗಿದೆ. ಮೊದಲ ದಿನ ಬೆಂಗಳೂರಿನ ಮಹಾಲಕ್ಷ್ಮಿ ಶರ್ಮಾ, ಯಶವಂತ ಹಾಗೂ ತಂಡದ­ವರಿಂದ ಸುಗಮ ಸಂಗೀತ, ಮರಿಯಮ್ಮನ­ಹಳ್ಳಿ ಲಲಿತಾಕಲಾ ರಂಗದಿಂದ ‘ವಿಶ್ವಬಂಧು ಬಸವಣ್ಣ’ ನಾಟಕ ಪ್ರದರ್ಶನ ನಡೆಯಲಿದೆ. ಬೆಂಗಳೂರಿನ ರಮೇಶಚಂದ್ರ, ನಾಗಚಂದ್ರಿಕಾ ಭಟ್ ಅವರಿಂದ ಗೀತ­ಗಾಯನ ನಡೆಯಲಿದೆ ಎಂದು ವಿವರಿಸಿದರು.

ಗೋಷ್ಠಿಗಳನ್ನು ಆರಂಭಿಸುವುದು ವಿಳಂಬ­ವಾಗಬಹುದು ಎಂಬ ಕಾರಣ­ದಿಂದ  ಪ್ರಸಕ್ತ ಸಮ್ಮೇಳನದಲ್ಲಿ ಅಧ್ಯಕ್ಷರ ಮೆರವಣಿಗೆ ಹಮ್ಮಿಕೊಂಡಿಲ್ಲ. ‘ಕನ್ನಡ ಸಾಹಿತ್ಯ ಪರಿಷತ್ತು-– ಅವಲೋಕನ’ ವಿಷಯ ಕುರಿತ ಗೋಷ್ಠಿ ನಡೆಯಲಿದ್ದು, ಲೇಖಕ ಹುರಕಡ್ಲಿ ಶಿವಕುಮಾರ್ ಉದ್ಘಾ­ಟಿಸಲಿದ್ದಾರೆ. ಸಾಹಿತಿಗಳು ಈ ಸಂದರ್ಭದಲ್ಲಿ ಪ್ರಬಂಧ ಮಂಡಿಸಲಿ­ದ್ದಾರೆ. ಶಂಕರಪ್ಪ ತೋರಣಗಲ್ ಅಧ್ಯಕ್ಷತೆ ವಹಿಸಲಿದ್ದಾರೆ.  ನಂತರ ಸಮ್ಮೇಳನದ ಅಧ್ಯಕ್ಷ ಕೇಶವ ಮಳಗಿ ಅವರೊಂದಿಗೆ ಸಂವಾದವಿದೆ. ಲೇಖಕ ಡಾ.ಅರವಿಂದ ಪಾಟೀಲ್, ಸ್ವರೂಪಾ­ನಂದ ಕೊಟ್ಟೂರು, ಡಾ.ಗಿರಿಜಾ, ಡಾ.ಎನ್.ಎಸ್. ವೇಣುಗೋಪಾಲ್ ಮತ್ತಿತರರು ಪಾಲ್ಗೊಳ್ಳ­ಲಿದ್ದಾರೆ ಎಂದು ಅವರು ಹೇಳಿದರು.

ಜನವರಿ 4ರಂದು ನಡೆಯಲಿರುವ ‘ಕರ್ನಾಟಕದ ಚಳವಳಿಗಳು’ ವಿಷಯ ಕುರಿತ 3ನೇ ಗೋಷ್ಠಿಯನ್ನು ಸಿರಿಗೇರಿ ಪನ್ನರಾಜ್ ಉದ್ಘಾಟಿಸಲಿದ್ದು, ಸಿಪಿಎಂ ಮುಖಂಡ ಎಸ್. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಕೆ.ಎಂ. ಮಹೇಶ್ವರ­ಸ್ವಾಮಿ, ಡಿ.ಎನ್. ಸುಜಾತಾ, ಬಿ.ಶ್ರೀನಿವಾಸ ಮೂರ್ತಿ, ಅಕ್ಕಿ ಬಸವೇಶ ಭಾಗವಹಿಸುವರು.

ಬಳ್ಳಾರಿ ಜಿಲ್ಲೆಯ ಸಾಹಿತ್ಯ ಕುರಿತು ಜರುಗುವ ಗೋಷ್ಠಿಯನ್ನು ಪರಿಷತ್‌ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕಲ್ಲೇಶಪ್ಪ ಇಟಗಿ ಉದ್ಘಾಟಿಸುವರು. ಡಾ.ಮೃತ್ಯುಂಜಯ ರುಮಾಲೆ ಅಧ್ಯಕ್ಷತೆ ವಹಿಸುವರು. ಡಾ.ಎ.ಕರಿಬಸಪ್ಪ, ವಿಶ್ವನಾಥ ಅಡಿಗ, ಡಾ.ದಯಾನಂದ ಕಿನ್ನಾಳ್, ಸಿ.ದೇವಣ್ಣ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ನಂತರ ಕವಿಗೋಷ್ಠಿ, ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಸಮಾರೋಪ ಭಾಷಣ ಮಾಡುವರು ಎಂದು ಅವರು ಹೇಳಿದರು. ಡಿ.ನಾಗರಾಜ ಪ್ರಸಾದ ಶೆಟ್ಟಿ, ಎಸ್.ಎಂ. ನಾಗರಾಜಸ್ವಾಮಿ, ಈರಮ್ಮ, ಚಾ.ಮ. ಗಂಗಾಧರಯ್ಯ, ಅಬ್ದುಲ್ ಹಾಜರಿದ್ದರು.

ಸಮ್ಮೇಳನಾಧ್ಯಕ್ಷರ ಹೆಸರೇ ಮಾಯ..!
ಬಳ್ಳಾರಿ: ಇದೇ 3ರಿಂದ ಎರಡು ದಿನಗಳ ಕಾಲ ನಗರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ­ಯಾಗಿರುವ ಸಾಹಿತಿ ಕೇಶವ ಮಳಗಿ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿರುವ ಉದ್ಘಾಟನೆ ಸಮಾರಂಭದ ವಿವರದಲ್ಲಿ ಕೈಬಿಡಲಾಗಿದೆ.

ಉದ್ಘಾಟನೆ ಸಮಾರಂಭದಲ್ಲಿ ಪ್ರಮುಖವಾಗಿ ಭಾಷಣ ಮಾಡುವ  ಸಮ್ಮೇಳನದ ಅಧ್ಯಕ್ಷರ ಹೆಸರನ್ನು ಕೈಬಿಟ್ಟು, ಮುಂದಿನ ಪುಟದಲ್ಲಿರುವ ‘ಅಧ್ಯಕ್ಷರೊಂದಿಗೆ ಸಂವಾದ’ ಎಂಬ ವಿಭಾಗದಲ್ಲಿ ಮಾತ್ರ ಅವರ ಹೆಸರು ಪ್ರಕಟಿಸಲಾಗಿದೆ.

ಈ ಕುರಿತು ಪತ್ರಿಕಾ­ಗೋಷ್ಠಿಯಲ್ಲಿ ಪ್ರಶ್ನಿಸಿದ ಪತ್ರಕರ್ತರಿಗೆ, ‘ಆಹ್ವಾನ ಪತ್ರಿಕೆ ಪ್ರಕಟಿಸುವ ಸಂದರ್ಭ ಕಣ್ತಪ್ಪಿನಿಂದ ಅಧ್ಯಕ್ಷರ ಹೆಸರು ಕೈಬಿಟ್ಟುಹೋಗಿದೆ. ಮತ್ತೆ ಆಹ್ವಾನ ಪತ್ರಿಕೆ ಪ್ರಕಟಿಸಲಾಗುವುದು’ ಎಂದು ಅಧ್ಯಕ್ಷ ಸಿರಿಗೇರಿ ಎರಿಸ್ವಾಮಿ ಉತ್ತರಿಸಿದರು.
ಮೃತರ ಹೆಸರು ಪ್ರಕಟ: ಅಲ್ಲದೆ, ಜ. 4ರಂದು ಸಮ್ಮೇಳನ­ದಲ್ಲಿ ಆಯೋಜಿಸಿರುವ ಕವಿಗೋಷ್ಠಿ­ಯಲ್ಲಿ ಕವನ ವಾಚಿಸ­ಲಿರುವ ಕವಿಗಳ ಪಟ್ಟಿಯಲ್ಲಿ 4 ತಿಂಗಳುಗಳ ಹಿಂದೆ ಮೃತಪಟ್ಟಿರುವ ಜಿಲ್ಲೆಯ ಎಮ್ಮಿಗನೂರಿನ ಸಾಹಿತಿ ರಾಗಿ ಶರಣಯ್ಯ ಅವರ ಹೆಸರನ್ನೂ ಪ್ರಕಟಿಸಲಾಗಿದೆ.

ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎರಿಸ್ವಾಮಿ, ಆಯಾ ತಾಲ್ಲೂಕು ಘಟಕಗಳ ಅಧ್ಯಕ್ಷರಿಗೆ ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವ ಕವಿಗಳ ಆಯ್ಕೆ ಜವಾಬ್ದಾರಿ ನೀಡಲಾಗಿತ್ತು. ಬಳ್ಳಾರಿ ತಾಲ್ಲೂಕು ಘಟಕದ ಅಧ್ಯಕ್ಷರು ರಾಗಿ ಶರಣಯ್ಯ ಅವರನ್ನ ಆಯ್ಕೆ ಮಾಡಿದ್ದಾರೆ. ಅವರು ಮೃತಪಟ್ಟಿರುವ ವಿಷಯ ಗೊತ್ತಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.