ADVERTISEMENT

ಹೂಳು ತುಂಬಿ ತುಳುಕುತ್ತಿವೆ ಚರಂಡಿ

ಸೊಳ್ಳೆಗಳ ವಿಪರೀತ ಕಾಟ; ಕೇಳೋರಿಲ್ಲ ಜನಸಾಮಾನ್ಯರ ಗೋಳು

ಬಸವರಾಜ ಮರಳಿಹಳ್ಳಿ
Published 14 ಡಿಸೆಂಬರ್ 2015, 9:37 IST
Last Updated 14 ಡಿಸೆಂಬರ್ 2015, 9:37 IST

ಹೊಸಪೇಟೆ: ನಗರದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿದ್ದು, ಕೊಳಚೆ ನೀರು ನಿಂತು ಗಬ್ಬುನಾರುತ್ತಿದೆ. ಇದರಿಂದ ಚರಂಡಿಗಳ ಸುತ್ತಮುತ್ತಲಿನ ನಿವಾಸಿಗಳ ಗೋಳು ತೀರದಾಗಿದೆ.

ನಗರದಲ್ಲಿ ಹಾದು ಹೋಗಿರುವ ಬಸವಣ್ಣ ಕಾಲುವೆಯೂ ಸೇರಿದಂತೆ ಪ್ರಮುಖ ಬಡಾವಣೆ ಹಾಗೂ ರಸ್ತೆಗಳ ಬದಿಗಳಲ್ಲಿರುವ ಚರಂಡಿಗಳು ತೆರೆದಿದ್ದು, ಮೇಲೆ ಯಾವುದೇ ಹಾಸು ಇಲ್ಲ. ಇದರಿಂದ ಸಾರ್ವಜನಿಕರು ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಸುರಿಯುವುದ ರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ.

ಬಸ್‌ ನಿಲ್ದಾಣ, ಬಸವೇ ಶ್ವರ ಬಡಾವಣೆ, ನೆಹರೂ ಕಾಲೊನಿ, ಪಟೇಲ್‌ ನಗರ, ಎನ್‌ಸಿ ಕಾಲೊನಿ, ಹಂಪಿ ರಸ್ತೆ, ಕಾಲೇಜು ರಸ್ತೆ ಸೇರಿದಂತೆ ನಗರದ ವಿವಿಧೆಡೆ ಗಳಲ್ಲಿರುವ ಚರಂಡಿಗಳ ಸ್ಥಿತಿ ಈ ಮೇಲಿನದ ಕ್ಕಿಂತ ಭಿನ್ನ ವಾಗಿಲ್ಲ. ಈ ಎಲ್ಲ ಚರಂಡಿ ಗಳಿಗೆ ಸ್ಲ್ಯಾಬ್‌ ಇಲ್ಲ. ಅಲ್ಲದೇ ವೈಜ್ಞಾ ನಿಕವಾಗಿ ನಿರ್ವಹಣೆ ಕೂಡ ಮಾಡುತ್ತಿಲ್ಲ. ಇದ ರಿಂದ ಇಲ್ಲಿ ಹೂಳು ತುಂಬಿ ಕೊಂಡು ಸದಾ ಕೊಳಚೆ ನೀರು ನಿಂತಲ್ಲೇ ನಿಂತಿರುತ್ತದೆ. ಇದರಿಂದ ಇದು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪ ಟ್ಟಿದ್ದು, ಸುತ್ತಮುತ್ತಲಿನ ಜನರು ಸೊಳ್ಳೆ ಕಾಟದಿಂದ ಪರದಾಡುತ್ತಿದ್ದಾರೆ.

ಹಿಂಗಾರು ಮಳೆಯ ಅಭಾವದಿಂದಾಗಿ ಈಗಲೇ ಬಿಸಿಲಿನ ತಾಪ ಹೆಚ್ಚಾಗಿದೆ. ಮಳೆಗಾಲದಲ್ಲಿ ಚರಂಡಿ ಗಳು ನದಿಯಾಗಿ ಹರಿಯುತ್ತದೆ. ಮಳೆ ಇಲ್ಲದ ಕಾರಣ ಚರಂಡಿಗಳು ಹೂಳು ತುಂಬಿಕೊಂಡು ಕಿರಿಕಿರಿ ಆಗಿದೆ.

‘ಚರಂಡಿಯಲ್ಲಿ ಸದಾ ಕೊಳಚೆ ನೀರು ತುಂಬಿರುತ್ತದೆ. ಸೊಳ್ಳೆಗಳು ವಿಪ ರೀತವಾಗಿದೆ. ಈ ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ನಗರಸಭೆ ಹಾಗೂ ಸಂಬಂಧಿಸಿದ ಇಲಾಖೆ ಯವರು ತೆರೆದ ಚರಂಡಿಗೆ ಸ್ಲ್ಯಾಬ್‌ ಹಾಕಬೇಕು. ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು’ ಎನ್ನುತ್ತಾರೆ ಚಲುವಾದಿಕೇರಿ ಮಂಜುನಾಥ.

ಬಸವಣ್ಣ ಕಾಲುವೆ ಗೋಳು
ನಗರದಲ್ಲಿ ಹಾದು ಹೋಗಿರುವ ಐತಿಹಾಸಿಕ ಬಸವಣ್ಣ ಕಾಲುವೆ ಪರಿಸ್ಥಿತಿ ಚರಂಡಿಗಿಂತಲೂ ಕಡೆಯಾಗಿದೆ. ಕಾಲುವೆ ಹೂಳು ತೆಗೆದು ವರ್ಷ ಕಳೆದಿಲ್ಲ, ಈಗ ಮತ್ತೆ ಹೂಳು ತುಂಬಿಕೊಂಡಿದೆ. ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ವಾಸಿಸುವ ಜನರ ನಿತ್ಯಕರ್ಮಗಳು ಕಾಲುವೆಯಲ್ಲಿಯೇ ನಡೆಯುವುದರಿಂದ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿದೆ. ಕಾಲುವೆ ದುರಸ್ತಿ ಜವಾಬ್ದಾರಿ ನೀರಾವರಿ ನಿಗಮಕ್ಕೆ ಸೇರಿದ್ದು, ಅನುದಾನ ಕೊರತೆ ನೆಪವೊಡ್ಡಿ ಕಾಯಕಲ್ಪವೂ ದೊರೆಯದಂತಾಗಿದೆ.

ಕಾಲುವೆ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳು ಹಾಗೂ ಹೂಳಿನಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಅಚ್ಚುಕಟ್ಟು ಪ್ರದೇಶದ ರೈತರು ಪರದಾಡುವಂತಾಗಿದೆ.

ಚರಂಡಿಗಳ ಮೇಲೆ ಸ್ಲ್ಯಾಬ್‌ ಅಳವಡಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅನುಮೋದನೆ ನಂತರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು
- ಟಿ.ಮಂಜುನಾಥ,

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,
ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT