ADVERTISEMENT

ಬಳ್ಳಾರಿಯಲ್ಲಿ 12,950 ಅನರ್ಹ ಬಿಪಿಎಲ್ ಕಾರ್ಡ್‌

1,772 ಕಾರ್ಡ್‌ಗಳು ಎಪಿಎಲ್‌ಗೆ ಪರಿವರ್ತನೆ: 71 ಸರ್ಕಾರಿ ನೌಕರರ ಬಳಿ ಇದ್ದ ಕಾರ್ಡ್‌ ರದ್ದು

ಆರ್. ಹರಿಶಂಕರ್
Published 20 ನವೆಂಬರ್ 2024, 4:26 IST
Last Updated 20 ನವೆಂಬರ್ 2024, 4:26 IST
<div class="paragraphs"><p>ಬಿಪಿಎಲ್ ಕಾರ್ಡ್‌</p></div>

ಬಿಪಿಎಲ್ ಕಾರ್ಡ್‌

   

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ 12,950 ಅನರ್ಹ ಬಿಪಿಎಲ್ ಪಡಿತರ ಕಾರ್ಡುಗಳಿದ್ದು, ಅವುಗಳನ್ನು ರದ್ದು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದೆಡೆ, ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬಗಳ 1,772 ಕಾರ್ಡುಗಳನ್ನು ಜಿಲ್ಲೆಯಲ್ಲಿ ಎಪಿಎಲ್‌ಗೆ ಪರಿವರ್ತಿಸಲಾಗಿದೆ. 

ರಾಜ್ಯ ಸರ್ಕಾರ ಕುಟುಂಬ ತಂತ್ರಾಂಶದಡಿ ರಾಜ್ಯದಾದ್ಯಂತ ಆದಾಯ ತೆರಿಗೆ ಪಾವತಿದಾರರು, ಸರಕಾರಿ ನೌಕರರು ಹಾಗೂ ₹1.20 ಲಕ್ಷಕ್ಕೂ ಮೀರಿದ ಆದಾಯ ಹೊಂದಿರುವ, ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹರಲ್ಲದ ಕುಟುಂಬಗಳ 13,133 ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಿದೆ. ಇದರಲ್ಲಿ ಈಗಾಗಲೇ 183 ಕಾರ್ಡ್‌ಗಳನ್ನು ರದ್ದು ಮಾಡಲಾಗಿದ್ದು, ಉಳಿಕೆ 12,950 ಕಾರ್ಡ್‌ಗಳ ರದ್ದತಿಗೆ ನಡೆಯುತ್ತಿದೆ. 

ADVERTISEMENT

ಬಳ್ಳಾರಿ ತಾಲೂಕಿನಲ್ಲಿ– 5,431 ಅನರ್ಹರ ಬಳಿ ಬಿಪಿಎಲ್‌ ಕಾರ್ಡ್‌ ಇತ್ತು. ಈ ಪೈಕಿ 21 ಕಾರ್ಡ್‌ ರದ್ದು ಮಾಡಲಾಗಿದೆ. ಬಳ್ಳಾರಿ ಗ್ರಾಮಾಂತರ–1,883 ಕಾರ್ಡ್‌ಗೆ ಪ್ರತಿಯಾಗಿ 22 ಕಾರ್ಡ್‌ ರದ್ದಾಗಿವೆ,  ಕಂಪ್ಲಿ–1,242 ಪೈಕಿ 83 ಕಾರ್ಡ್‌, ಕುರುಗೋಡು–348 ಪೈಕಿ 14 ಕಾರ್ಡ್‌, ಸಂಡೂರು–2,775 ಪೈಕಿ  37, ಸಿರುಗುಪ್ಪ–1,454 ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪೈಕಿ 6 ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ.  

ಇದಿಷ್ಟೇ ಅಲ್ಲ, ಜಿಲ್ಲೆಯಲ್ಲಿ 71 ಮಂದಿ ಸರ್ಕಾರಿ ನೌಕರರೂ ಬಿಪಿಎಲ್‌ ಕಾರ್ಡ್‌ ಹೊಂದಿದ್ದರು. ಸದ್ಯ ಅವುಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಬಳ್ಳಾರಿ ತಾಲ್ಲೂಕು–30, ಬಳ್ಳಾರಿ ಗ್ರಾಮಾಂತರ–6, ಕಂಪ್ಲಿ–5, ಕುರುಗೋಡು–3 ಸಂಡೂರು–14, ಸಿರುಗುಪ್ಪದಲ್ಲಿ–13 ಮಂದಿ ಸರ್ಕಾರಿ ನೌಕರರ ಬಳಿ ಬಿಪಿಎಲ್‌ ಕಾರ್ಡ್‌ ಇತ್ತು ಎಂದು ಆಹಾರ ನಾಗರಿಕ ಪೂರೈಕೆ ಇಲಾಖೆ ಅಂಕಿ ಅಂಶಗಳಿಂದ ಗೊತ್ತಾಗಿದೆ. 

2021- 24ರ ನಡುವಿನ ಅವಧಿಯಲ್ಲಿ ಅರ್ಹತೆ ಇಲ್ಲದ 2,813 ಜನರ ಬಳಿ ಬಿಪಿಎಲ್‌ ಕಾರ್ಡ್‌ಗಳಿದ್ದವು. ಅಂಥವರಿಗೆ ದಂಡ ವಿಧಿಸಿ  ಇಲಾಖೆಯು ₹23,5487 ಸಂಗ್ರಹ ಮಾಡಿದೆ. 

ಇನ್ನು ಬಳ್ಳಾರಿ ಜಿಲ್ಲೆಯಲ್ಲಿ ಮೃತರ ಹೆಸರಲ್ಲಿದ್ದ 3,576 ಕಾರ್ಡ್‌ಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರದ್ದುಗೊಳಿಸಿದೆ. ಬಳ್ಳಾರಿ ತಾಲೂಕು ಒಂದದರಲ್ಲೇ 1,556 ಕಾರ್ಡ್‌ಗಳು ಮೃತರ ಹೆಸರಲ್ಲಿದ್ದವು. ಕಂಪ್ಲಿ 341, ಕುರುಗೋಡು 282, ಸಂಡೂರು–589, ಸಿರುಗುಪ್ಪದಲ್ಲಿ 808 ಕಾರ್ಡ್‌ಗಳು ರದ್ದಾಗಿವೆ. 

ಪರಿಶೀಲಿಸಿ ಕ್ರಮ:

'ಜಿಲ್ಲೆಯಲ್ಲಿ ಆರು ತಿಂಗಳಿಂದ ಪಡಿತರ ಪಡೆಯದವರ ಕಾರ್ಡ್‌ಗಳನ್ನು ಅಮಾನತಿನಲ್ಲಿಟ್ಟಿದ್ದೇವೆ. ಇಂಥವರಿಗೆ ಪರಿಶೀಲನೆ ಮಾಡಿ ಮತ್ತೆ ಪಡಿತರ ನೀಡುತ್ತೇವೆ. 12,950 ಅನರ್ಹ ಕಾರ್ಡ್‌ಗಳು ಪತ್ತೆಯಾಗಿವೆ. ಅವುಗಳನ್ನು ಆಹಾರ ಶಿರಸ್ತೇದಾರರು ಮತ್ತು ಆಹಾರ ಇನ್ಸ್‌ಪೆಕ್ಟರ್‌ಗಳು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದ್ದಾರೆ. ಆಧಾರ್‌ ಲಿಂಕ್‌ ಮಾಡಿದಾಗ ಹಲವರಿಗೆ ಸಮಸ್ಯೆಯಾಗಿದೆ. ಅಂಥ ಪ್ರಕರಣಗಳ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದೇವೆ. ಸಮಸ್ಯೆಯಾದವರಿಗೆ ಇಲಾಖೆ ಸ್ಪಂದಿಸಲಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕಿ ಸಕೀನ ತಿಳಿಸಿದ್ದಾರೆ.

7488 ಕಾರ್ಡ್‌ ಅಮಾನತು

ಜಿಲ್ಲೆಯಲ್ಲಿ 7488 ಕಾರ್ಡ್‌ದಾರರು ಸುಮಾರು ಆರು ತಿಂಗಳಿಂದ ಪಡಿತರವನ್ನೇ ಪಡೆದುಕೊಂಡಿಲ್ಲ. ಇಂಥ ಕಾರ್ಡ್‌ಗಳನ್ನು ಸರ್ಕಾರ ಅಮಾನತು ಮಾಡಿದೆ. ದೀರ್ಘ ಕಾಲದ ವರೆಗೆ ಪಡಿತರವನ್ನೇ ಪಡೆಯದವರು ಸೂಕ್ತ ದಾಖಲೆ, ಸಮಜಾಯಿಷಿ ನೀಡಿ ಪಡಿತರ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ. ಬಳ್ಳಾರಿ ತಾಲ್ಲೂಕು ಒಂದರಲ್ಲೇ 3,565 ಮಂದಿ ಬಿಪಿಎಲ್‌ ಕಾರ್ಡ್‌ ದಾರರು ಆರು ತಿಂಗಳಿಂದ ಪಡಿತರ ಪಡೆಯದೆ ನಿಷ್ಕ್ರೀಯರೆನಿಸಿಕೊಂಡಿದ್ದಾರೆ. 

ಇನ್ನು ಜಿಲ್ಲೆಯಲ್ಲಿ ಏಪ್ರಿಲ್‌ ಅಂತ್ಯಕ್ಕೆ 2,69,134  ಬಿಪಿಎಲ್‌ ಕಾರ್ಡ್‌ಗಳಿದ್ದವು. ಈ ವರ್ಷ ಹೊಸದಾಗಿ 18,848 ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಬಂದಿವೆ ಎನ್ನಲಾಗಿದ್ದು, 14,471  ಅರ್ಜಿಗಳನ್ನು ಪರಿಶೀಲಿಸಲಾಗಿದೆ. 8,966 ಹೊಸ ಬಿಪಿಎಲ್‌ ಕಾರ್ಡ್‌ಗಳನ್ನು ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.