ಹರಪನಹಳ್ಳಿ (ವಿಜಯನಗರ ಜಿಲ್ಲೆ): ಭಾರತೀಯ ಮೀಸಲು ಪಡೆಗೆಂದು 18 ವರ್ಷದ ಹಿಂದೆ ಕಾಯ್ದಿರಿಸಿದ 149.94 ಎಕರೆ ಜಾಗ ಈಗಲೂ ಖಾಲಿಯಾಗಿಯೇ ಉಳಿದಿದ್ದು, ರಾಜ್ಯ ಸರ್ಕಾರ ತಳೆದಿರುವ ವಿಳಂಬ ಧೋರಣೆ ಸ್ಥಳೀಯರನ್ನು ಗೊಂದಲದಲ್ಲಿ ಸಿಲುಕುವಂತೆ ಮಾಡಿದೆ.
ತಾಲ್ಲೂಕಿನ ಅನಂತನಹಳ್ಳಿ ಸರ್ವೆ ನಂಬರ್ 1 ರಲ್ಲಿ 32.34 ಎಕರೆ, ಮೆಳ್ಳೆಕಟ್ಟೆ ಸರ್ವೆ ನಂಬರ್ 1ರಲ್ಲಿ 117.60 ಎಕರೆ ಒಟ್ಟು 149.94 ಎಕರೆ ಭೂಮಿಯನ್ನು ಭಾರತೀಯ ಮೀಸಲು ಪಡೆಗೆ ಕಾಯ್ದಿರಿಸಿದ್ದರೂ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಇನ್ನೂ ಕ್ರಮ ಕೈಗೊಂಡಿಲ್ಲ. ಇಷ್ಟೂ ವರ್ಷಗಳಿಂದ ಇಲ್ಲಿ ಪ್ರತಿದಿನ ಐವರು ಸ್ಥಳ ಕಾವಲು ಕಾಯುತ್ತಲೇ ಇದ್ದಾರೆ.
ಇಲಾಖೆಯ ಡಿಜಿ ಮತ್ತು ಐಜಿಪಿ ಅವರು ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಜುಲೈ 29ರಂದು ಬರೆದ ಪತ್ರದಲ್ಲಿ ಹರಪನಹಳ್ಳಿ ಮತ್ತು ತುಮಕೂರು ಬದಲಿಗೆ ದೇವನಹಳ್ಳಿ ತಾಲ್ಲೂಕಿನ ಅವತಿಹಳ್ಳಿ ಮತ್ತು ಕೆಜಿಎಫ್‌ಗಳಲ್ಲಿ ಭಾರತೀಯ ಮೀಸಲು ಪಡೆ ಸ್ಥಾಪಿಸುವುದಕ್ಕೆ ಒಲವು ತೋರಿದ್ದರು ಮತ್ತು ಅದಕ್ಕೆ ಕಾರಣವನ್ನೂ ನೀಡಿದ್ದರು. ಈ ಮೂಲಕ ದಾವಣಗೆರೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಅನಂತನಹಳ್ಳಿ-ಮೆಳ್ಳೆಕಟ್ಟೆಯಲ್ಲಿ ಸದ್ಯ ಈ ಪಡೆಯ ಚಟುವಟಿಕೆಗಳು ಆರಂಭವಾಗದೆ ಇರಬಹುದು ಎಂಬ ಸಂಶಯ ಸ್ಥಳೀಯರನ್ನು ಕಾಡತೊಡಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಹಾಗೂ ವಿಜಯಪುರ ಜಿಲ್ಲೆಯ ಅರಕೇರಿಗಳಲ್ಲಿ ಭಾರತೀಯ ಮೀಸಲು ಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ಹರಪನಹಳ್ಳಿಯಲ್ಲಿ ಈ ಪಡೆ ಸ್ಥಾಪನೆ ಅನಗತ್ಯ ಎಂಬ ಧೋರಣೆಯನ್ನು ರಾಜ್ಯ ಪೊಲೀಸ್ ಇಲಾಖೆ ತಳೆದಿದೆ. ಇದರಿಂದ ಸ್ಥಳೀಯರು ಹಾಗೂ ತಾಲ್ಲೂಕಿನ ಅಭಿವೃದ್ಧಿಯ ಕನಸು ಕಂಡಿದ್ದ ಹಲವರು ಆತಂಕಗೊಂಡಿದ್ದಾರೆ.
‘ಕಲ್ಯಾಣ ಕರ್ನಾಟಕ, ಮದ್ಯ, ಉತ್ತರ ಮತ್ತು ದಕ್ಷಿಣದ ಭಾಗಗಳ ಜಂಕ್ಷನ್ ಎಂದೇ ಗುರುತಿಸಿಕೊಂಡಿರುವ ಹರಪನಹಳ್ಳಿಯಲ್ಲಿ ಭಾರತೀಯ ಮೀಸಲು ಪಡೆ ಆರಂಭಿಸಿದರೆ 1,033 ಪೋಲಿಸರಿಗೆ ತರಬೇತಿಗೆ ಅವಕಾಶ ಸಿಗುತ್ತದೆ. ಜಾಗ ಗುರುತಿಸಿ 20 ವರ್ಷವಾದರೂ ಭಾರತೀಯ ಮೀಸಲು ಪಡೆ ಆರಂಭಿಸಲು ಮೀನಮೇಷ ಎಣಿಸಲಾಗುತ್ತಿದೆ. ಇದನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕು, ಇಲ್ಲವಾದರೆ ಹಂತ ಹಂತವಾಗಿ ಚಳವಳಿ ರೂಪಿಸುತ್ತೇವೆ’ ಎಂದು ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಮಂಡಳಿ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಎಚ್ಚರಿಸಿದ್ದಾರೆ.
ರಾಜ್ಯ ಹೆದ್ದಾರಿ 25ಕ್ಕೆ ಹೊಂದಿಕೊಂಡಿರುವ ವಿಶಾಲ ಸ್ಥಳವನ್ನು ಕೆಎಸ್‌ಆರ್‌ಪಿಯ ಭಾರತೀಯ ಮೀಸಲು ಪಡೆಗೆ 2008ರಲ್ಲಿ ಹಸ್ತಾಂತರಿಸಲಾಗಿತ್ತು. ಈ ಜಾಗವನ್ನು ಕಾಯುವ ಉಸ್ತುವಾರಿಯನ್ನು ಮುನಿರಾಬಾದ್‌ನ ಭಾರತೀಯ ಮೀಸಲು ಪಡೆ ವಹಿಸಿಕೊಂಡು ತಂತಿ ಬೇಲಿ ಹಾಕಿದೆ.
ಇದೇ ಪ್ರದೇಶದಲ್ಲಿ 2008ರಲ್ಲಿಯೇ ಜಾಗ ಪಡೆದಿದ್ದ ತಾಂತ್ರಿಕ ಶಿಕ್ಷಣ ಇಲಾಖೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಐಟಿಐ ಕಾಲೇಜು ಆರಂಭಿಸಿವೆ. ಶಾಲಾ ಶಿಕ್ಷಣ ಇಲಾಖೆ ಪ್ರತಿಷ್ಠಿತ ಸರ್ಕಾರಿ ಆದರ್ಶ ವಿದ್ಯಾಲಯ ಆರಂಭಿಸಿವೆ.
ಮೀಸಲು ಪಡೆ ಸ್ಥಾಪನೆಯಿಂದ ಅಭಿವೃದ್ಧಿಗೆ ವೇಗ ಬೇಗ ನಿರ್ಧಾರವಾಗಲಿ ಎಂಬುದು ಜನರ ಆಶಯ ಮಧ್ಯ ಕರ್ನಾಟಕದಲ್ಲಿ ಅನಗತ್ಯ ಎಂಬ ನಿಲುವು ತಳೆದಿರುವ ಶಂಕೆ
ಈಗಾಗಲೇ ಜಾಗ ಮೀಸಲಿಟ್ಟಿರುವುದರಿಂದ ಇದೇ ಸ್ಥಳದಲ್ಲಿ ಭಾರತೀಯ ಮೀಸಲು ಪಡೆಯ ಕೇಂದ್ರ ಆರಂಭಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ–ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.