ಬಳ್ಳಾರಿ: ರಾಜ್ಯದ ಕ್ರೀಡಾಪಟುಗಳಿಗೆ ಎಲ್ಲ ಇಲಾಖೆಗಳಲ್ಲಿಯೂ ಶೇ 2ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ತಿಳಿಸಿದರು.
ನಗರದ ವಾಲ್ಮೀಕಿ ಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ರಾಜ್ಯಮಟ್ಟದ ಯುವ ಜನೋತ್ಸವದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರೀಡಾ ಹಾಸ್ಟೆಲ್, ಸುಸಜ್ಜಿತ ಜಿಮ್ ನಿರ್ಮಾಣ ಮಾಡಲಾಗುವುದು ಎಂದರು.
ಯುವಕರು ತಮ್ಮ ಜೀವನದಲ್ಲಿ ಸಂಕಲ್ಪ ಇಟ್ಟುಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಶಾಸಕ ನಾರಾ ಭರತ್‍ರೆಡ್ಡಿ ಮಾತನಾಡಿ, ‘ಪಂಜಾಬ್, ಹರಿಯಾಣದಲ್ಲಿ ಕ್ರೀಡಾ ಕೋಟಾದಡಿ ಹೆಚ್ಚು ಉದ್ಯೋಗ ಪಡೆದುಕೊಳ್ಳುತ್ತಿದ್ದು, ಇದು ರಾಜ್ಯದಲ್ಲಿಯೂ ಜಾರಿಯಾಗಬೇಕು’ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್. ಶಶಿಕುಮಾರ್, ಪಾಲಿಕೆ ಉಪ ಮೇಯರ್ ಬಿ. ಜಾನಕಿ, ಐಜಿಪಿ ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಎಸ್‍ಪಿ ರಂಜಿತ್ ಕುಮಾರ್ ಬಂಡಾರು, ಎಡಿಸಿ ಮಹಮ್ಮದ್ ಜುಬೇರ್, ಉಪ ವಿಭಾಗಾಧಿಕಾರಿ ಹೇಮಂತ್ ಎನ್., ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ. ಗ್ರೇಸಿ ಇತರರು ಹಾಜರಿದ್ದರು.
ಫೆಬ್ರುವರಿಯಲ್ಲಿ ಬಳ್ಳಾರಿ ಉತ್ಸವ: ಜಿಲ್ಲೆಯ ವೈಭವ ಸಾರುವ ಬಳ್ಳಾರಿ ಉತ್ಸವವನ್ನು ಫೆಬ್ರುವರಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮತ್ತ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಸಚಿವ ನಾಗೇಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.