ADVERTISEMENT

ಬಳ್ಳಾರಿ | ಗೃಹಜ್ಯೋತಿ: 26,523 ಗ್ರಾಹಕರ ನಿರಾಸಕ್ತಿ

ಕಂದಾಯ ಸಚಿವ ಕೆ.ಜೆ ಜಾರ್ಜ್‌ಗೆ ನೀಡಲಾದ ವಿವರಗಳಿಂದ ಬಹಿರಂಗ

ಆರ್. ಹರಿಶಂಕರ್
Published 15 ಜುಲೈ 2024, 6:16 IST
Last Updated 15 ಜುಲೈ 2024, 6:16 IST
ಗೃಹಜ್ಯೋತಿ
ಗೃಹಜ್ಯೋತಿ   

ಬಳ್ಳಾರಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ಗೆ ಜಿಲ್ಲೆಯಲ್ಲಿ 26,523 ಗ್ರಾಹಕರು ನೋಂದಣಿಯನ್ನೇ ಮಾಡಿಕೊಂಡಿಲ್ಲ ಎಂಬುದು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)  ವರದಿಯೊಂದರಿಂದ ಗೊತ್ತಾಗಿದೆ.  

ಇತ್ತೀಚೆಗೆ ಬಳ್ಳಾರಿಗೆ ಭೇಟಿ ನೀಡಿದ್ದ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಗೆ ನೀಡಲು ಜೆಸ್ಕಾಂ ಅಧಿಕಾರಿಗಳು ಸಿದ್ಧಪಡಿಸಿದ್ದ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅದರಲ್ಲಿ ಹಲವು ವಿವರಗಳು ದಾಖಲಾಗಿವೆ. 

ಜಿಲ್ಲೆಯಲ್ಲಿ ಒಟ್ಟು 3,16,126 ಗ್ರಾಹಕರಿದ್ದಾರೆ. ಈ ಪೈಕಿ 13,234 ಗ್ರಾಹಕರು 200 ಯುನಿಟ್‌ ಮೀರಿದ ಬಳಕೆದಾರರಾಗಿದ್ದು, 3,02,892 ಗ್ರಾಹಕರು ಯೋಜನೆಗೆ ಅರ್ಹರಾಗಿದ್ದಾರೆ. ಈ ಪೈಕಿ 2,76,369 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 26,523 ಗ್ರಾಹಕರು ಯೋಜನೆಯ ಬಗ್ಗೆ ನಿರಾಸಕ್ತಿ ತೋರಿಸಿದ್ದಾರೆ. 

ADVERTISEMENT

ಬಳ್ಳಾರಿ ತಾಲೂಕಿನಲ್ಲಿ–16,990, ಕುರುಗೋಡು–1601, ಸಂಡೂರು–4332, ಸಿರುಗುಪ್ಪ–3213, ಕಂಪ್ಲಿ–387 ಗ್ರಾಹಕರು ನೋಂದಣಿ ಮಾಡಿಕೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  

ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಶೇ 95ರಷ್ಟು ಮಂದಿ ನೋಂದಾಯಿಸಿಕೊಂಡಿದ್ದು, ಶೇ 5ರಷ್ಟು ಗ್ರಾಹಕರು ಮಾತ್ರವೇ ಯೋಜನೆಯಿಂದ ಹೊರಗೆ ಉಳಿದಿದ್ದಾರೆ. ಗೃಹಜ್ಯೋತಿಯು ಜನರೇ ಸ್ವಇಚ್ಛೆಯಿಂದ ನೋಂದಣಿ ಮಾಡಿಕೊಳ್ಳಬೇಕಾದ ಯೋಜನೆ. ಇಚ್ಛೆ ಇಲ್ಲದವರು ಹೊರಗುಳಿಯಬಹುದು. 

ಇನ್ನು ಗೃಹಜ್ಯೋತಿ ಯೋಜನೆಯ ಸಬ್ಸಿಡಿಯಾಗಿ ರಾಜ್ಯ ಸರ್ಕಾರದಿಂದ ಜೆಸ್ಕಾಂಗೆ ₹121.68 ಕೋಟಿ ಬಿಡುಗಡೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. 

ಪರಿವರ್ತಕಗಳ ದಾಸ್ತಾನು, ದುರಸ್ತಿ ವಿವರ: ವಿವಿಧ ಕಿಲೊವೋಲ್ಟ್‌ನ ಒಟ್ಟು 95 ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌) ದಾಸ್ತಾನ ಇರಬೇಕಿತ್ತು ಎನ್ನಲಾಗಿದ್ದು, ಸದ್ಯ 49 ಪರಿವರ್ತಗಳು ದಾಸ್ತಾನು ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿ ಗ್ರಾಮೀಣದಲ್ಲಿ 82 ಪರಿವರ್ತಕಗಳಿಗೆ ಬದಲಾಗಿ 36 ದಾಸ್ತಾನು ಇದೆ. ನಗರ ಪ್ರದೇಶದಲ್ಲಿ 13ಕ್ಕೆ 13 ದಾಸ್ತಾನು ಇದೆ ಎಂದು ಮಾಹಿತಿ ನೀಡಲಾಗಿದೆ. 

ಆದರೆ, 2023ರ ಏಪ್ರಿಲ್‌ನಿಂದ 2024ರ ಜೂನ್‌ 30ರ ವರೆಗೆ ಬಳ್ಳಾರಿ ಗ್ರಾಮೀಣ ವಿಭಾಗಕ್ಕೆ ವಿವಿಧ ಕೆವಿಎನ  278 ಪರಿವರ್ತಕಗಳನ್ನು ನೀಡಲಾಗಿದೆ. ಬಳ್ಳಾರಿ ನಗರಕ್ಕೆ 37 ಪರಿವರ್ತಕಗಳನ್ನು ಒದಗಿಸಲಾಗಿದೆ. ಒಟ್ಟು 315 ಪರಿವರ್ತಕಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಗ್ರಾಮೀಣ ಮತ್ತು ನಗರ ವಿಭಾಗದಲ್ಲಿ ಒಟ್ಟು 15,087 ಪರಿವರ್ತಕಗಳಿದ್ದು, ಅದರಲ್ಲಿ 288 ವಿಫಲವಾಗಿದ್ದವು ಎನ್ನಲಾಗಿದೆ. 288 ಅನ್ನೂ ಬದಲಿಸಲಾಗಿದೆ ಎಂದು ಸಚಿವರಿಗೆ ನೀಡಲಾದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.  

ಜಿಲ್ಲೆಯಲ್ಲಿ 2024–25ರ ಆರ್ಥಿಕ ವರ್ಷದ ಜೂನ್‌ ಅಂತ್ಯದವರೆಗೆ ಒಟ್ಟು 432 ಪರಿವರ್ತಕಗಳನ್ನು ದುರಸ್ತಿಗಾಗಿ ನೀಡಲಾಗಿತ್ತು. ಈ ಪೈಕಿ 377 ಪರಿವರ್ತಕಗಳು ದುರಸ್ತಿಯಾಗಿ ಜೆಸ್ಕಾಂ ಸೇರಿದ್ದರೆ, ಇನ್ನು 55 ಪರಿವರ್ತಕಗಳು ಇನ್ನಷ್ಟೇ ರಿಪೇರಿಯಾಗಿ ಬರಬೇಕಿವೆ ಎಂದು ವರದಿಯಲ್ಲಿ ಜೆಸ್ಕಾಂ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.