ADVERTISEMENT

ಬಳ್ಳಾರಿ: ಬಾಡಿಗೆ ಹಂಗಿನಲ್ಲಿ 330 ಅಂಗನವಾಡಿ

ಸ್ವಂತ ಕಟ್ಟಡ ಒದಗಿಸಿಕೊಡಲು ಮಹಿಳಾ ಮತ್ತು ಕಲ್ಯಾಣ ಇಲಾಖೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 7:20 IST
Last Updated 15 ಆಗಸ್ಟ್ 2024, 7:20 IST
ಬಳ್ಳಾರಿ ನಗರದ ಇಂದಿರಾನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ
ಬಳ್ಳಾರಿ ನಗರದ ಇಂದಿರಾನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ   

ಬಳ್ಳಾರಿ: ಜಿಲ್ಲೆಯಲ್ಲಿ 330 ಬಾಡಿಗೆ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ನಗರ ಪ್ರದೇಶದಲ್ಲಿ 220, ಗ್ರಾಮೀಣ ಪ್ರದೇಶದಲ್ಲಿ 110 ಕೇಂದ್ರಗಳು ಬಾಡಿಕೆ ಕಟ್ಟಡದಲ್ಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಈಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ನೀಡಿದ್ದು, ಇದರಲ್ಲಿ ಬಾಡಿಗೆ, ಸ್ವಂತ ಕಟ್ಟಡದ ವಿವರಗಳಿವೆ. 

ಬಳ್ಳಾರಿ ನಗರದಲ್ಲಿ 140, ಗ್ರಾಮಾಂತರದಲ್ಲಿ 74, ಸಂಡೂರಿನಲ್ಲಿ 21, ಸಿರುಗುಪ್ಪದಲ್ಲಿ 101 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. 

ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1,358 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 13 ಮಿನಿ ಅಂಗನವಾಡಿ ಕೇಂದ್ರಗಳಾಗಿವೆ. ಈ ಪೈಕಿ 934 ಕೇಂದ್ರಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. 61 ಕೇಂದ್ರಗಳು ಶಾಲೆಯ ಕಟ್ಟಡದಲ್ಲಿವೆ. 2 ಕೇಂದ್ರಗಳು ಪಂಚಾಯಿತಿ ಕಟ್ಟಡಗಳಲ್ಲಿ ನಡೆಯುತ್ತಿವೆ. 21 ಕೇಂದ್ರಗಳು ಸಮುದಾಯ ಭವನದಲ್ಲಿವೆ. 9 ಕೇಂದ್ರಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. 1 ಕೇಂದ್ರ ಮಹಿಳಾ ಮಂಡಳದಲ್ಲಿ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ. 

ಬಳ್ಳಾರಿಯಲ್ಲಿ ಜಿಲ್ಲೆಯಲ್ಲಿ ಬಾಡಿಕೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಒದಗಿಸಿಕೊಡಲು ಮಹಿಳಾ ಮತ್ತು ಕಲ್ಯಾಣ ಇಲಾಖೆ ಪ್ರಯತ್ನ ನಡೆಸುತ್ತಿದ್ದು, ಈಗಾಗಲೇ ನರೇಗಾ, ಜಿಲ್ಲಾ ಖನಿಜ ನಿಧಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ, ಎಸ್‌ಡಿಪಿ ಅನುದಾನದ ಅಡಿಯಲ್ಲಿ 91 ಕಟ್ಟಡಗಳಿಗೆ ಸ್ವಂತದ ಸೂರು ಒದಗಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ. 

ನಗರ ಮತ್ತು ಗ್ರಾಮೀಣ ವ್ಯಾಪ್ತಿಯ 40 ಕೇಂದ್ರಗಳಿಗೆ ನಿವೇಶನ ಲಭ್ಯವಾಗಿದ್ದು, ಕೆಕೆಆರ್‌ಡಿಬಿ, ಕೆಎಂಇಆರ್‌ಸಿ ಅನುದಾನದ ಅಡಿಯಲ್ಲಿ  ಕಟ್ಟಡ ನಿರ್ಮಾಣ ಮಾಡಲು ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಇದೆಲ್ಲವೂ ಪೂರ್ಣಗೊಂಡರೆ ಜಿಲ್ಲೆಯಲ್ಲಿ ಇನ್ನು 172 (ನಗರ 141, ಗ್ರಾಮೀಣ 31) ಕೇಂದ್ರಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ಉಳಿಯಲಿವೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ಧಾರೆ. 

ಈ ಎಲ್ಲ ಕೇಂದ್ರಗಳಲ್ಲಿ ಮೂರು ವರ್ಷದೊಳಗಿನ 67,967 ಮಕ್ಕಳ ಪಾಲನೆ ನಡೆಯುತ್ತಿದ್ದರೆ, 3ರಿಂದ 6 ವರ್ಷದ 37,685 ಮಕ್ಕಳು ಕಲಿಕೆಯಲ್ಲಿ ತೊಡಗಿದ್ದಾರೆ. ಇದರ ಜತೆಗೆ, 14,124 ಗರ್ಭಿಣಿಯರು, 12,636 ಬಾಣಂತಿಯರು ಆರೈಕೆ ಪಡೆಯುತ್ತಿದ್ದಾರೆ. ಒಟ್ಟು 1286 ಅಂಗನವಾಡಿ ಕಾರ್ಯಕರ್ತರೆಯರು ಕಾರ್ಯ ನಿರ್ವಹಿಸುತ್ತಿದ್ದು, 72 ಖಾಲಿ ಉಳಿದಿವೆ ಎಂದು ಮಾಹಿತಿ ನೀಡಲಾಗಿದೆ. ಇನ್ನು ಈ ಎಲ್ಲ ಕೇಂದ್ರಗಳಿಗೆ 1345 ಅಂಗನವಾಡಿ ಸಹಾಯಕಿಯರ ಅಗತ್ಯವಿದ್ದು, 1080 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. 

ಸದ್ಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರೂ ಸೇರಿ ಒಟ್ಟು 33 ಸಾವಿರಕ್ಕೂ ಅಧಿಕ ಮಂದಿಯ ಲಾಲನೆ, ಪೋಷಣೆ ನಡೆಯುತ್ತಿದೆ.

ಅಂಗನವಾಡಿ ಕಟ್ಟಡಕ್ಕೆ 20 ಸಾವಿರ ಮುಂಗಡ ಪಾವತಿ ಮಾಡಿದ್ದೇನೆ. 6 ಸಾವಿರ ಬಾಡಿಗೆಯ ಕಟ್ಟಡಕ್ಕೆ ಇಲಾಖೆಯಿಂದ ₹4 ಸಾವಿರ ಕೊಡಲಾಗುತ್ತಿದೆ. ಮಿಕ್ಕ ಹಣ ನನ್ನ ಕೈಯಿಂದ ಪಾವತಿಸುತ್ತಿದ್ದೇನೆ. ಎಲ್ಲ ಸರಿಹೋಗುವ ವಿಶ್ವಾಸದಲ್ಲೇ ಕೆಲಸ ಮಾಡುತ್ತಿದ್ದೇವೆ.
–ಮಂಗಮ್ಮ, ಇಂದಿರಾನಗರದ ಅಂಗನವಾಡಿ ಕಾರ್ಯಕರ್ತೆ 
ಗ್ರಾಮೀಣ ಪ್ರದೇಶದಲ್ಲಿ ಅಷ್ಟಾಗಿ ಸಮಸ್ಯೆ ಇಲ್ಲ. ನಗರ ಪ್ರದೇಶದಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಅನುದಾನಗಳೇನೋ ಇವೆ. ಆದರೆ ನಿವೇಶನದ್ದೇ ಸಮಸ್ಯೆಯಾಗಿದೆ. ಬಾಡಿಗೆ ನಿಗದಿಗೆ ಮಾನದಂಡಗಳಿವೆ. ಅದರಂತೆ ಪಾವತಿ ಮಾಡಲಾಗುತ್ತದೆ. 
– ವಿಜಯಕುಮಾರ್‌ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ  

‘ದಾನಿಗಳು ಮುಂದೆ ಬರಲಿ’

ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅಂಗನವಾಡಿಗಳನ್ನು ಸ್ವಂತದ ಕಟ್ಟಡ ಒದಗಿಸಿಕೊಡುವುದೇ ಪ್ರಯಾಸದ ಕೆಲಸವಾಗಿ ಮಾರ್ಪಟ್ಟಿದೆ ಎಂದು ಅಧಿಕಾರಿಗಳು ಅವಲತ್ತುಕೊಂಡಿದ್ದಾರೆ.

‘ನಗರ ಪ್ರದೇಶದಲ್ಲಿ ನಿವೇಶನ ಖರೀದಿ ಮಾಡಲು ಸರ್ಕಾರ ಅತ್ಯಲ್ಪ ಪ್ರಮಾಣದ ಹಣ ನಿಗದಿ ಮಾಡಿದೆ. ನಗರೀಕರಣದ ನಾಗಲೋಟದಲ್ಲಿ ಈಗ ನಿವೇಶನಗಳಿಗೆ ಚದರಡಿಗೆ ಸಾವಿರಾರು ರೂಪಾಯಿಗಳ ಬೆಲೆ ಇದೆ. ಇಂಥ ಸನ್ನಿವೇಶದಲ್ಲಿ ನಿವೇಶನ ಖರೀದಿ ಎಂಬುದು ಅಸಾಧ್ಯವಾದ ಮಾತು. ಹೀಗಾಗಿ ಸರ್ಕಾರಿ ಜಾಗ ಕಟ್ಟಡಗಳನ್ನು ಹುಡುಕುತ್ತಿದ್ದೇವೆ. ಪಾರ್ಕ್‌ಗಳಲ್ಲಿ ಅಂಗನವಾಡಿ ನಡೆಸುವ ಪ್ರಸ್ತಾವಗಳನ್ನು ಸ್ಥಳೀಯಾಡಳಿತಗಳಿಗೆ ನೀಡಿದ್ದೇವೆ. ಅದ್ಯಾವುದೂ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ದಾನಿಗಳು ಮುಂದೆ ಬಂದು ಅಂಗನವಾಡಿಗಳಿಗೆ ನಿವೇಶನ ಒದಗಿಸಿಕೊಟ್ಟರೆ ಭವಿಷ್ಯದ ಉತ್ತಮ  ಪ್ರಜೆಗಳನ್ನು ರೂಪಿಸುವ ಸರ್ಕಾರದ ಕೆಲಸಕ್ಕೆ ಕೈಜೋಡಿಸಿದಂತಾಗುತ್ತದೆ ಎಂದು ಅಧಿಕಾರಿಗಳು ಮನವಿಯನ್ನೂ ಮಾಡಿದ್ದಾರೆ.

ವಿಜಯನಗರದಲ್ಲಿ 203

ವಿಜಯನಗರ ಜಿಲ್ಲೆಯಲ್ಲಿ ಒಟ್ಟು 203 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹೊಸಪೇಟೆ– 117 ಹಗರಬೊಮ್ಮನಹಳ್ಳಿ– 3 ಹರಪನಹಳ್ಳಿ–39 ಹೂವಿನಹಡಗಲಿ–13 ಕೂಡ್ಲಿಗಿ–31 ಕೇಂದ್ರಗಳು ಬಾಡಿಕೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ಸರ್ಕಾರದ ಅಧಿಕೃತ ಮಾಹಿತಿಯಿಂದ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.