ಹರಪನಹಳ್ಳಿ: ‘ತಾಲ್ಲೂಕಿನ ಕಣಿವಿಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿದ ಆರು ಜನರು ವಾಂತಿ, ಬೇಧಿಯಿಂದ ಬಳಲುತ್ತಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಹಾಲಸ್ವಾಮಿ ತಿಳಿಸಿದರು.
‘ಶುಕ್ರವಾರ ಸಂಜೆವರೆಗೂ 14 ಜನ ಅಸ್ವಸ್ಥರಾಗಿದ್ದರು. ರಾತ್ರಿ ಮತ್ತೊಬ್ಬರಿಗೆ ಹಾಗೂ ಶನಿವಾರ ಐವರು ಸೇರಿ ಒಟ್ಟು 20 ಜನರು ವಾಂತಿ, ಬೇಧಿಯಿಂದ ಬಳಲಿದ್ದಾರೆ. ಎಂಟು ಜನರು ಸಾರ್ವಜನಿಕ ಆಸ್ಪತ್ರೆ, ಮೂವರು ಸ್ಥಳೀಯ ಖಾಸಗಿ ಆಸ್ಪತ್ರೆ, ಒಬ್ಬರು ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.
‘ಗ್ರಾಮದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಆಂಬುಲೆನ್ಸ್ ಇದೆ’ ಎಂದು ಹೇಳಿದರು.
‘ಕೊಳವೆಬಾವಿ ನೀರು ಪೂರೈಕೆ ಸ್ಥಗಿತಗೊಳಿಸಿದ್ದು, ಟ್ಯಾಂಕರ್ ಮೂಲಕ ಶುದ್ದ ನೀರು ಪೂರೈಸಲಾಗುತ್ತಿದೆ’ ಎಂದು ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರಸನ್ನ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.