ADVERTISEMENT

'ಅಮೃತ ಸರೋವರ’ ಅಡಿ ವಿಜಯನಗರ ಜಿಲ್ಲೆಯಲ್ಲಿ 75 ಕೆರೆ ನಿರ್ಮಿಸಲು ಯೋಜನೆ

ವಿಜಯನಗರ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಜೂನ್ 2022, 19:30 IST
Last Updated 14 ಜೂನ್ 2022, 19:30 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಕೆರೆಯ ಸುಂದರ ನೋಟ –ಸಾಂದರ್ಭಿಕ ಚಿತ್ರ
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಕೆರೆಯ ಸುಂದರ ನೋಟ –ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ಸರ್ಕಾರದ ಮಹತ್ವಕಾಂಕ್ಷಿ ‘ಅಮೃತ ಸರೋವರ’ ಯೋಜನೆಯಡಿ ವಿಜಯನಗರ ಜಿಲ್ಲೆಯಲ್ಲಿ 75 ಹೊಸ ಕೆರೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಮೊದಲ ಹಂತದಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಮೂರು ಹೊಸ ಕೆರೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಕೆರೆ ನಿರ್ಮಾಣಕ್ಕೆ ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸ್ಥಳ ಗುರುತಿಸಲಾಗಿದೆ. ಇಷ್ಟರಲ್ಲೇ ಕಾಮಗಾರಿಗೆ ಚಾಲನೆ ಕೊಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ಆಯಾ ತಾಲ್ಲೂಕಿನ ಭೌಗೋಳಿಕ ಪರಿಸರಕ್ಕೆ ತಕ್ಕಂತೆ ಕೆರೆಯ ವಿಸ್ತಾರ ಭಿನ್ನವಾಗಿರಲಿದೆ. ಸಹಜವಾಗಿಯೇ ಅದರ ಬಜೆಟ್‌ ಗಾತ್ರದಲ್ಲೂ ವ್ಯತ್ಯಾಸ ಉಂಟಾಗಲಿದೆ. ಕನಿಷ್ಠ 25 ಲಕ್ಷದಿಂದ ₹50 ಲಕ್ಷದ ವರೆಗೆ ಖರ್ಚು ಮಾಡಲು ಅನುವು ಮಾಡಿಕೊಡಲಾಗಿದೆ. ನರೇಗಾ ಯೋಜನೆಯ ಅಡಿಯಲ್ಲೇ ಹೊಸ ಕೆರೆಗಳು ನಿರ್ಮಾಣಗೊಳ್ಳಲಿವೆ. ಮೊದಲ ಹಂತದಲ್ಲಿ 15 ಕೆರೆಗಳನ್ನು ಬರುವ ಆಗಸ್ಟ್‌ ಒಳಗೆ ನಿರ್ಮಿಸಿ, ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಕೆರೆಯ ಸಮೀಪ ತ್ರಿವರ್ಣ ಧ್ವಜಾರೋಹಣ ನೆರವೇರಿಸಲು ಉದ್ದೇಶಿಸಲಾಗಿದೆ. ಈಗಷ್ಟೇ ಸ್ಥಳ ಗುರುತಿಸಿರುವುದರಿಂದ ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.

ADVERTISEMENT

ಈಗಾಗಲೇ ಜಿಲ್ಲೆಯಲ್ಲಿರುವ ಕೆರೆಗಳಿಂದ ಹೂಳು ತೆಗೆದು, ಅವುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಹೊಸ ಕೆರೆಗಳನ್ನು ನಿರ್ಮಿಸಿ, ಅಂತರ್ಜಲವನ್ನು ಇನ್ನಷ್ಟು ಹೆಚ್ಚಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾದರೆ ಗ್ರಾಮೀಣ ಭಾಗಗಳಲ್ಲಿ ಜನರು ಎದುರಿಸುತ್ತಿರುವ ತೊಂದರೆ ಶಾಶ್ವತವಾಗಿ ದೂರವಾಗಲಿದೆ. ಜಲ ಸಂರಕ್ಷಣೆಯಿಂದ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಸ್ಥಳೀಯವಾಗಿ ಉದ್ಯೋಗ ಪಡೆದು, ಸ್ವಾವಲಂಬನೆ ಬರುತ್ತದೆ. ಮಳೆಯ ಅವಲಂಬನೆ ದೂರವಾಗುತ್ತದೆ. ಅರಣ್ಯೀಕರಣ ಅಭಿವೃದ್ಧಿ, ಪರಿಸರದಲ್ಲಿ ಸಮತೋಲನ ಉಂಟಾದರೆ ಗ್ರಾಮೀಣರ ಆರೋಗ್ಯ ಸುಧಾರಿಸುತ್ತದೆ ಎಂಬ ದೂರದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.