ADVERTISEMENT

ಡೆಂಗಿ: ಬಳ್ಳಾರಿ ಜಿಲ್ಲೆಯಲ್ಲಿ 83 ಪ್ರಕರಣ

ಜುಲೈ, ಆಗಸ್ಟ್‌ನಲ್ಲಿ ಎಚ್ಚರಿಕೆಯಿಂದಿರಲು ಆರೋಗ್ಯ ಇಲಾಖೆ ಸೂಚನೆ

ಆರ್. ಹರಿಶಂಕರ್
Published 9 ಜುಲೈ 2024, 6:59 IST
Last Updated 9 ಜುಲೈ 2024, 6:59 IST
ಡಾ ಅಬ್ದುಲ್ಲಾ
ಡಾ ಅಬ್ದುಲ್ಲಾ   

ಬಳ್ಳಾರಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಗಿ ತಾಂಡವವಾಡುತ್ತಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಆದರೆ, ಬಳ್ಳಾರಿಯಲ್ಲಿ ಈ ವರೆಗೆ 83 ಪ್ರಕರಣಗಳಷ್ಟೇ ವರದಿಯಾಗಿದ್ದು ಯಾವುದೇ ಜೀವಹಾನಿಯಾಗಿಲ್ಲ.

ಸದ್ಯದ ಅಂಕಿ ಅಂಶಗಳು ಜನರಲ್ಲಿ ನೆಮ್ಮದಿ ಮೂಡಿಸಿದೆ. ಆದರೆ, ಇನ್ನೂ ಎರಡು ತಿಂಗಳು ಎಚ್ಚರಿಕೆಯಿಂದರಬೇಕು ಎನ್ನುತ್ತಿದೆ ಜಿಲ್ಲಾ ಆರೋಗ್ಯ ಇಲಾಖೆ.  

ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ 2,691 ಶಂಕಿತ ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 2,217 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಆಗ 83 ಮಂದಿಗೆ ಡೆಂಗಿ ಇರುವುದು ಗೊತ್ತಾಗಿದೆ. ಪಾಸಿಟಿವಿಟಿ ದರ ಶೇ 3.74 ಇದೆ ಎಂದು ಲಭ್ಯ ಅಂಕಿ ಅಂಶಗಳಿಂದ ಗೊತ್ತಾಗಿದೆ. 

ADVERTISEMENT

ಸದ್ಯ ಬಳ್ಳಾರಿ ತಾಲ್ಲೂಕಿನಲ್ಲೇ ಅತಿ ಹೆಚ್ಚು ಪ್ರಕರಣಗಳು (37) ಪತ್ತೆಯಾಗಿವೆ. ಇಲ್ಲಿ 1,516 ಶಂಕಿತ ಪ್ರಕರಣಗಳಿದ್ದವು. 1,408 ಜನರ ಮಾದರಿ ಪರೀಕ್ಷಿಸಲಾಗಿತ್ತು. ಬಳಿಕ ಸಿರುಗುಪ್ಪ ತಾಲ್ಲೂಕಿನಲ್ಲಿ ಒಟ್ಟು 338 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದವು.

324 ಮಾದರಿಯನ್ನು ಪರೀಕ್ಷಿಸಿದಾಗ 25 ಪ್ರಕರಣಗಳು ದೃಢವಾಗಿದ್ದವು. ಸಂಡೂರಿನಲ್ಲಿ 11 ಡೆಂಗಿ ಪ್ರಕರಣಗಳು ಖಚಿತವಾಗಿವೆ. ಅಲ್ಲಿ 539 ಶಂಕಿತ ಪ್ರಕರಣಗಳಿದ್ದವು. 204 ಜನರ ಮಾದರಿಯನ್ನು ಪರೀಕ್ಷಿಸಲಾಗಿತ್ತು. ಕುರುಗೋಡಿನಲ್ಲಿ 219 ಶಂಕಿತ ಪ್ರಕರಣಗಳ ಪೈಕಿ 211 ಜನರ ಮಾದರಿ ಪರೀಕ್ಷಿಸಿದಾಗ 10 ಜನರಲ್ಲಿ ಡೆಂಗಿ ದೃಢವಾಗಿತ್ತು. ಕಂಪ್ಲಿಯಲ್ಲಿ ಯಾವುದೇ ಡೆಂಗಿ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆಯ ಮಾಹಿತಿಯಿಂದ ಗೊತ್ತಾಗಿದೆ. 

ಕಳೆದ ವರ್ಷ ಜಿಲ್ಲೆಯಲ್ಲಿ 4,967 ಶಂಕಿತ ಡೆಂಗಿ ‍ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ ₹4,322 ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಿದಾಗ 176 ಮಂದಿಗೆ ಡೆಂಗಿ ಇರುವುದು ದೃಢವಾಗಿತ್ತು. 

ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಅಧಿಕಾರಿಗಳೇ ಮನೆ ಮನೆಗೆ ತೆರಳಿ ಡೆಂಗಿ ಹರಡುವ ರೀತಿ, ಸೊಳ್ಳೆಗಳ ಉತ್ಪತ್ತಿಯನ್ನು ತಡೆಯುವ ಬಗ್ಗೆ ಮಾಹಿತಿ ನೀಡಿದ್ದರು. ಇದೆಲ್ಲದರ ಪರಿಣಾಮವಾಗಿ ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣದಲ್ಲಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. 

ಸಾಮಾನ್ಯವಾಗಿ ಹಗಲು ಹೊತ್ತಿನಲ್ಲೇ ಕಡಿಯುವ ಈಡಿಸ್ ಈಜಿಪ್ಟಿ ಸೊಳ್ಳೆಯು ಡೆಂಗಿ ರೋಗವಾಹಕವಾಗಿದೆ. ಡೆಂಗಿ ರೋಗಿಯನ್ನು ಕಡಿದ ಸೊಳ್ಳೆ ಮತ್ತೊಬ್ಬ ವ್ಯಕ್ತಿಗೆ ಕಡಿದರೆ ರೋಗ ಹರಡುತ್ತದೆ. ಮನೆ ಸುತ್ತಮುತ್ತ, ಮನೆಯಲ್ಲಿನ ಬಕೆಟ್ಟು, ಟಬ್‌ಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಅವುಗಳ ಸಂತಾನಾಭಿವೃದ್ಧಿ ನಡೆಯುತ್ತದೆ. ಇದನ್ನು ತಡೆದರೆ ರೋಗವನ್ನೂ ತಡೆದಂತೆ ಎಂದು ತಜ್ಞರು ಹೇಳುತ್ತಾರೆ. 

‘ಕಸ, ಕೊಳಚೆ ನೀರಿನಲ್ಲಾಗಲಿ ಈ ಸೊಳ್ಳೆಯ ಸಂತಾನಾಭಿವೃದ್ಧಿಯಾಗುವುದಿಲ್ಲ. ಹಾಗೆಂದು ಮನೆ ಸುತ್ತಲ ಪರಿಸರವನ್ನು ಸ್ವಚ್ಛ ಮಾಡಬಾರದು ಎಂದಲ್ಲ. ಪರಿಸರ ಸ್ವಚ್ಛವಾಗಿರಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೊಡ, ಬಕೆಟ್‌, ಟಬ್‌ಗಳಲ್ಲಿನ ನೀರನ್ನು ಆಗಾಗ್ಗೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು, ಅವುಗಳ ಮೇಲೆ ಮುಚ್ಚಳ ಹಾಗಬೇಕು. ಮನೆ ಆಸುಪಾಸಿನ ಜಾಗದಲ್ಲಿ ಹೆಚ್ಚು ನೀರು ನಿಂತಿದ್ದು, ಖಾಲಿ ಮಾಡಲು ಆಗುವುದಿಲ್ಲ ಎಂದಾಗ ನಿಂತ ನೀರಿಗೆ ಕೊಬ್ಬರಿ ಎಣ್ಣೆ ಸುರಿದರೂ ಸೊಳ್ಳೆಗಳ ಸಂತಾನಾಭಿವೃದ್ಧಿಯಾಗುವುದಿಲ್ಲ‘ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಅಬ್ದುಲ್ಲಾ. 

ಡಾ ವೈ. ರಮೇಶ್‌ ಬಾಬು 
ಶಾಲೆಗಳಿಗೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟಾಗ ಕೆಲವು ಕಡೆ ಲಾರ್ವಾ ಉತ್ಪತ್ತಿ ಕಂಡು ಬಂದಿತ್ತು. ಸಂಬಂಧಪಟ್ಟವರಿಗೆ ಜಾಗೃತಿ ಮೂಡಿಸಿದ್ದರ ಪರಿಣಾಮ ಪರಿಸ್ಥಿತಿ ನಿಯಂತ್ರಣದಲ್ಲಿದೆ
ಡಾ.ಅಬ್ದುಲ್ಲಾ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ 
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜುಲೈ ಆಗಸ್ಟ್‌ನಲ್ಲಿ ನಾಗರಿಕರು ಹೆಚ್ಚು ಎಚ್ಚರದಿಂದ ಇರಬೇಕು. ಆರೋಗ್ಯ ಇಲಾಖೆ ತಿಳಿಸಿರುವ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
ಡಾ.ವೈ.ರಮೇಶ್ ಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ 
636 ತಾಣಗಳಿಗೆ ಲಾರ್ವಾಹಾರಿ ಮೀನು
ಬಳ್ಳಾರಿ ಜಿಲ್ಲೆಯ ಕೆರೆ, ಹೊಂಡ, ಕುಂಟೆ, ಕಲ್ಯಾಣಿ, ಬಾವಿ ಮತ್ತು ತಾತ್ಕಾಲಿಕವಾಗಿ ನೀರು ನಿಲ್ಲುವ ಸ್ಥಳಗಳೂ ಸೇರಿದಂತೆ ಒಟ್ಟು 636 ತಾಣಗಳಲ್ಲಿ ಲಾರ್ವಾಹಾರಿ ಗಪ್ಪಿ ಮತ್ತು ಗ್ಯಾಂಬೂಜಿಯಾ ಮೀನುಗಳನ್ನು ಬಿಡಲಾಗಿದೆ. ಈ ಮೀನುಗಳು ಈಡಿಸ್ ಈಜಿಪ್ಟಿ ಸೊಳ್ಳೆಯ ಮೊಟ್ಟೆ ಮತ್ತು ಲಾರ್ವಾಗಳೇನಾದರೂ ನೀರಿನಲ್ಲಿ ಉತ್ಪತ್ತಿಯಾಗುತ್ತಿದ್ದರೆ ಅವುಗಳನ್ನು ತಿಂದು ಜೀವಿಸುತ್ತವೆ. ಬಳ್ಳಾರಿಯ 166 ತಾಣಗಳಲ್ಲಿ, ಕುರುಗೋಡು–76, ಕಂಪ್ಲಿಯ 101, ಸಿರುಗುಪ್ಪದ–137, ಸಂಡೂರಿನ 152 ತಾಣಗಳಲ್ಲಿ ಈ ಮೀನುಗಳನ್ನು ಬಿಡಲಾಗಿದೆ. ಆರೋಗ್ಯ ಇಲಾಖೆಯೇ ಈ ಮೀನುಗಳನ್ನು ಬೆಳೆಸಿ ಅಗತ್ಯವಿರುವ ಕಡೆ ಬಿಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.