ADVERTISEMENT

ಮೀನುಗಾರರ ಬಲೆಗೆ ಬಿದ್ದ ಮೊಸಳೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 16:04 IST
Last Updated 28 ಜೂನ್ 2024, 16:04 IST
ಕಂಪ್ಲಿ ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಮೀನುಗಾರರ ಸಹಕಾರದಿಂದ ಮೊಸಳೆಯನ್ನು ಶುಕ್ರವಾರ ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು   
ಕಂಪ್ಲಿ ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಮೀನುಗಾರರ ಸಹಕಾರದಿಂದ ಮೊಸಳೆಯನ್ನು ಶುಕ್ರವಾರ ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು      

ಕಂಪ್ಲಿ: ಇಲ್ಲಿಯ ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ಶುಕ್ರವಾರ ಮೀನುಗಾರರ ಬಲೆಗೆ ಬಿದ್ದಿದೆ.

ಅರಣ್ಯ ಇಲಾಖೆ ಮತ್ತು ಸ್ಥಳೀಯ ಕೋಟೆ ಪ್ರದೇಶದ ತುಂಗಭದ್ರಾ ಸಹಕಾರ ಸಂಘದ ಮೀನುಗಾರರು ಮೂರು ದಿನಗಳಿಂದ ಈ ಕಾರ್ಯಾಚರಣೆ ನಡೆಸುತ್ತಿದ್ದರು. ಮೊಸಳೆ ಸೆರೆಗಾಗಿ 25 ತೆಪ್ಪಗಳನ್ನು ಬಳಸಿದ್ದ ಮೀನುಗಾರರು ಮೀನು ಬಲೆಯೊಂದಿಗೆ ಕೆರೆ ಪೂರ್ಣ ಜಾಲಾಡಿದರು. ಅಂತಿಮವಾಗಿ ಶುಕ್ರವಾರ ಬೆಳಿಗ್ಗೆ 8.45ಕ್ಕೆ ಮೊಸಳೆ ಸೆರೆಯಾಯಿತು.

ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಬಿ. ರಾಘವೇಂದ್ರ ಮಾತನಾಡಿ, ‘ಸೆರೆ ಹಿಡಿದ ಮೊಸಳೆ ಆರೋಗ್ಯವಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ತುಂಗಭದ್ರಾ ನದಿ ಬಳಿಯ ತಳವಾರಘಟ್ಟ ಪ್ರದೇಶದ ನೀರಿನಲ್ಲಿ ಬಿಡಲಾಯಿತು’ ಎಂದು ಮಾಹಿತಿ ನೀಡಿದರು.

ADVERTISEMENT

ಅರಣ್ಯ ವೀಕ್ಷಕ ಬಿ. ನಾಗಪ್ಪ, ಕಂಪ್ಲಿ ಮೀನುಗಾರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಚಿನ್ನರಾಜು, ಉಪಾಧ್ಯಕ್ಷ ಶಣ್ಮುಖ, ನಾಗೇಶ, ವಿರುಪಣ್ಣ, ಎಂ. ರಾಜಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

‘ಕೆರೆಯಲ್ಲಿ ಮತ್ತೊಂದು ಸಣ್ಣ ಮೊಸಳೆ ಇರುವುದಾಗಿ ಜನ ತಿಳಿಸಿದ್ದಾರೆ. ಅದನ್ನೂ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದೆ. ಕೆರೆ ಏರಿಯಲ್ಲಿ ವಾಯು ವಿಹಾರ ನಡೆಸುವವರು ಮೊಸಳೆ ಸೇರಿ ವಿಷಜಂತುಗಳ ಬಗ್ಗೆ ಎಚ್ಚರವಹಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.