ADVERTISEMENT

ತೋರಣಗಲ್ಲು | ಪಾಳು ಬಿದ್ದ ಹೊಸ ಅಂಗನವಾಡಿ ಕೇಂದ್ರ

ಒಂದು ವರ್ಷದಿಂದ ಇಲ್ಲ ಉದ್ಘಾಟನೆಯ ಭಾಗ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 5:19 IST
Last Updated 8 ಜುಲೈ 2024, 5:19 IST
ತೋರಣಗಲ್ಲು ಗ್ರಾಮದಲ್ಲಿ ಉದ್ಘಾಟನೆ ಭಾಗ್ಯ ಕಾಣದೇ ಒಂದು ವರ್ಷದಿಂದ ಪಾಳು ಬಿದ್ದ ನೂತನ ಅಂಗನವಾಡಿ ಕೇಂದ್ರ
ತೋರಣಗಲ್ಲು ಗ್ರಾಮದಲ್ಲಿ ಉದ್ಘಾಟನೆ ಭಾಗ್ಯ ಕಾಣದೇ ಒಂದು ವರ್ಷದಿಂದ ಪಾಳು ಬಿದ್ದ ನೂತನ ಅಂಗನವಾಡಿ ಕೇಂದ್ರ   

ತೋರಣಗಲ್ಲು: ತೋರಣಗಲ್‌ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ನೂತನ 5ನೇ ಅಂಗನವಾಡಿ ಕೇಂದ್ರದ ಕಟ್ಟಡವು ಕಳೆದ ಒಂದು ವರ್ಷದಿಂದ ಉದ್ಘಾಟನೆಗೊಳ್ಳದೇ ಪಾಳುಬಿದ್ದಿದ್ದು, ಅಧಿಕಾರಿಗಳ, ಜನ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಗೆ ಕನ್ನಡಿ ಹಿಡಿದಿದೆ.  

ಇದೇ ಜಾಗದಲ್ಲಿ ಈ ಹಿಂದೆ ಇದ್ದ ಅಂಗನವಾಡಿ ಕೇಂದ್ರ ಹಳತಾಗಿ, ಶಿಥಿಲಗೊಂಡಿತ್ತು. ಜನರ ಒತ್ತಾಯದ ಮೇರೆಗೆ ಅದನ್ನು ತೆರವುಗೊಳಿಸಿ ಗ್ರಾಮೀಣ ಅಭಿವೃದ್ಧಿ–ಪಂಚಾಯತ್ ರಾಜ್ ಇಲಾಖೆ ವತಿಯಿಂದ ‘ಶ್ಯಾಮ್ ಪ್ರಸಾದ್ ಮುಖರ್ಜಿ ರೂರ್ಬನ್ ಯೋಜನೆ’ ಅಡಿಯಲ್ಲಿ ₹18 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ.

ಕೇಂದ್ರವು ಇನ್ನೂ ಉದ್ಘಾಟನೆಯೇ ಆಗಿಲ್ಲ. ಅದಾಗಲೇ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮಕ್ಕಳಿಗೆ ಕುಡಿಯುವ ನೀರಿಗಾಗಿ ನೆಲಮಟ್ಟದ ಟ್ಯಾಂಕ್ ನಿರ್ಮಿಸಿಲ್ಲ, ಶೌಚಾಲಯದ ತಗ್ಗು, ಗುಂಡಿಗಳ ನಿರ್ಮಾಣ ಮಾಡಿಲ್ಲ. ಕಟ್ಟಡದ ಮುಂಭಾಗದಲ್ಲಿ ಮಕ್ಕಳ ಸುರಕ್ಷತೆಗಾಗಿ ಕನಿಷ್ಠ ಕಬ್ಬಿಣದ ಗ್ರೀಲ್‍ಗಳನ್ನೂ ಅಳವಡಿಸಿಲ್ಲ. ಮಕ್ಕಳಿಗಾಗಿ ನೂತನ ಆಟಿಕೆ ಸಾಮಾನುಗಳಿದ್ದರೂ ಅವು ಬಳಕೆಯಿಲ್ಲದೆ ವ್ಯರ್ಥವಾಗಿ ಮೂಲೆಗುಂಪಾಗಿವೆ.

ADVERTISEMENT

ಪ್ರಸ್ತುತ ಅಂಗನವಾಡಿಯೂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಕಟ್ಟಡದಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದೆ. ಕೇಂದ್ರದಲ್ಲಿ 20 ಹೆಣ್ಣುಮಕ್ಕಳು, 16 ಗಂಡುಮಕ್ಕಳು ಸೇರಿ ಒಟ್ಟು 36 ಮಕ್ಕಳು ದಾಖಲಾಗಿದ್ದಾರೆ.

ಕಾಮಗಾರಿ ಪೂರ್ಣವಾಗಿದೆ. ಕೆಲ ಕೆಲಸ ಬಾಕಿ ಇದೆ.
ಎಳೆನಾಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸಂಡೂರು  
ಗ್ರಾಮದಲ್ಲಿ 5ನೇ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಿರುವುದು ಸಂತಸದ ವಿಚಾರ. ಆದರೆ ವಿದ್ಯುತ್ ಕುಡಿಯುವ ನೀರು ಶೌಚಾಲಯ ವ್ಯವಸ್ಥೆಗಳಿಲ್ಲ. ಕಳಪೆ ಕಾಮಗಾರಿ ನಡೆದಿದೆ.
ಎ.ಸ್ವಾಮಿ ತೋರಣಗಲ್ಲು, ಗ್ರಾಮದ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.