ADVERTISEMENT

ಕೂಡ್ಲಿಗಿ: ರೇಷ್ಮೆ ಊರಲ್ಲಿ ಡ್ರ್ಯಾಗನ್ ಫ್ರುಟ್‌ ಘಮಲು

ಬಯಲು ಸೀಮೆಯಲ್ಲಿ ದುಬಾರಿ ಹಣ್ಣು ಬೆಳೆದು ಲಾಭ ಕಂಡ ಮಂಜುನಾಥ

ಎ.ಎಂ.ಸೋಮಶೇಖರಯ್ಯ
Published 2 ಫೆಬ್ರುವರಿ 2024, 5:10 IST
Last Updated 2 ಫೆಬ್ರುವರಿ 2024, 5:10 IST
ತಮ್ಮ ಜಮೀನಿನಲ್ಲಿ ಬೆಳೆದಿರುವ ಸೀತಾಫಲ ಹಾಗೂ ಡ್ರ್ಯಾಗನ್ ಹಣ್ಣುಗಳೊಂದಿಗೆ ನಿಂಬಳಗೆರೆ ಗ್ರಾಮದ ಎಚ್.ಕೆ.ಮಂಜುನಾಥ, ಜಯಮ್ಮ ದಂಪತಿ
ತಮ್ಮ ಜಮೀನಿನಲ್ಲಿ ಬೆಳೆದಿರುವ ಸೀತಾಫಲ ಹಾಗೂ ಡ್ರ್ಯಾಗನ್ ಹಣ್ಣುಗಳೊಂದಿಗೆ ನಿಂಬಳಗೆರೆ ಗ್ರಾಮದ ಎಚ್.ಕೆ.ಮಂಜುನಾಥ, ಜಯಮ್ಮ ದಂಪತಿ   

ಕೂಡ್ಲಿಗಿ: ರೇಷ್ಮೆಗೆ ಬೆಳೆಗೆ ಹೆಸರಾಗಿದ್ದ ನಿಂಬಳಗೆರೆಯಲ್ಲೀಗ ಡ್ರ್ಯಾಗನ್ ಫ್ರುಟ್ ಘಮಲು ಪಸರಿಸುತ್ತಿದೆ. ನಿಂಬಳಗೆರೆ ಗ್ರಾಮದ ಎಚ್.ಕೆ.ಮಂಜುನಾಥ, ಜಯಮ್ಮ(ನಿರ್ಮಲ) ದಂಪತಿ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ವರ್ಷಕ್ಕೆ ₹15 ಲಕ್ಷಕ್ಕೂ ಅಧಿಕ ಅದಾಯ ಪಡೆಯುತ್ತಿದ್ದಾರೆ.

ನೀರಾವರಿ ಮಾಡಿದ ಆರಂಭದ ದಿನಗಳಲ್ಲಿ ಮೆಕ್ಕೆಜೋಳ, ರೇಷ್ಮೆ, ಪಪ್ಪಾಯಿ, ದಾಳಿಂಬೆ ಬೆಳೆಯುತ್ತಿದ್ದ ಮಂಜುನಾಥ, ಕೂಲಿಗಳ ಅಭಾವ ಹಾಗೂ ನೀರಿನ ಕೊರತೆಯಿಂದ ಬಹುವಾರ್ಷಿಕ ಬೆಳೆಗಳ ಕಡೆ ಗಮನ ಹರಿಸಿದರು. ಇದರಿಂದಾಗಿ 6.65 ಎಕರೆ ಜಮೀನು ಹೊಂದಿರುವ ಇವರು ಒಂದೂವರೆ ಎಕರೆಯಲ್ಲಿ 5 ವರ್ಷಗಳ ಹಿಂದೆ ನಾಟಿ ಮಾಡಿದ್ದ ಡ್ರ್ಯಾಗನ್ ಫ್ರುಟ್‌ ಫಲ ಬಿಡಲು ಆರಂಭಿಸಿದ್ದು, ಉತ್ತಮ ಲಾಭ ಪಡೆಯುತ್ತಿದ್ದಾರೆ.

ಡ್ರ್ಯಾಗನ್ ಸಸಿಗಳನ್ನು ನಾಟಿ ಮಾಡಲು 600 ಕಂಬಗಳನ್ನು ನೆಟ್ಟಿದ್ದು, ಕಂಬದ ಪ್ರತಿ ಮೂಲೆಗೂ ಒಂದೊಂದು ಡ್ಯ್ರಾಗನ್ ಸಸಿಗಳನ್ನು ನಾಟಿ ಮಾಡಿದ್ದಾರೆ. ಇದಕ್ಕಾಗಿ 2500 ಡ್ರ್ಯಾಗನ್ ಸಸಿಗಳನ್ನು ಮಹಾರಾಷ್ಟ್ರದಿಂದ ತರಿಸಿದ್ದು, ಪ್ರತಿ ಸಸಿಗೂ ₹55 ರೂಪಾಯಿ ವೆಚ್ಚವಾಗಿದೆ. ಅಲ್ಲದೆ ಒಂದು ಕಂಬಕ್ಕೆ ನಾಲ್ಕು ಸಸಿಗಳನ್ನು ನಾಟಿ ಮಾಡಲು ₹500 ವೆಚ್ಚ ಮಾಡಲಾಗಿದೆ. 5 ವರ್ಷಗಳ ಹಿಂದೆ ನಾಟಿ ಮಾಡಿದ್ದ ಗಿಡಗಳು ಒಂದು ವರ್ಷದ ನಂತರ ಫಲ ನೀಡಲು ಆರಂಭಿಸಿದ್ದವು. ಮೊದಲ ವರ್ಷದಲ್ಲಿ 800 ಕೆಜಿ ಮಾತ್ರ ಇಳುವರಿ ಬಂದಿತ್ತು. ನಂತರ ಮೂರನೇ ವರ್ಷದಲ್ಲಿ 4 ಟನ್ ಇಳುವರಿ ಬಂದಿದ್ದು, ಕಳೆದ ವರ್ಷ 25 ಟನ್ ಫಸಲು ಬಂದಿತ್ತು.

ADVERTISEMENT

ಪ್ರತಿ ಕೆಜಿಗೆ ಸರಾಸರಿ 70 ರೂಪಾಯಿ ಬೆಲೆ ಸಿಕ್ಕಿದ್ದು, ಬಳ್ಳಾರಿ, ದಾವಣಗೆರೆ, ಅನಂತಪುರ, ಮೈಸೂರು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ವ್ಯಾಪಾರಿಗಳೇ ಹೊಲಕ್ಕೆ ಬಂದು ಹಣ್ಣು ಖರೀದಿ ಮಾಡುತ್ತಾರೆ. ಗೊಬ್ಬರ, ಬೆಳೆ ನಿರ್ವಹಣೆ, ಹಣ್ಣು ಕಟಾವು, ಪ್ಯಾಕ್ ಮಾಡುವುದು ಸೇರಿದಂತೆ ಪ್ರತಿ ಬೆಳೆಗೆ ₹3 ಲಕ್ಷದಿಂದ ₹3.50 ಲಕ್ಷ ವೆಚ್ಚವಾಗುತ್ತದೆ.

4.50 ಎಕರೆ ಜಮೀನಿನಲ್ಲಿ ಮೂರು ವರ್ಷಗಳ ಹಿಂದೆ ನಾಟಿ ಮಾಡಿರುವ 3,200 ಸೀತಾಫಲ ಈ ವರ್ಷ ಫಲ ಬಿಡಲು ಪ್ರಾರಂಭವಾಗುತ್ತಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಸೀತಾಫಲ ಸಸಿಗಳ ಮಧ್ಯ 300 ಸೇಬಿನ ಗಿಡ ಹಾಕಿದ್ದಾರೆ.

ಕೃಷಿ ಕಾಯಕದಲ್ಲಿ ಕಾರ್ಮಿಕರ ಜತೆ ಸ್ವತಃ ತಾವೇ ತೊಡಗಿಸಿಕೊಂಡು ಸತತ ಪರಿಶ್ರಮ ಪಡುತ್ತಿರುವ ಮಂಜುನಾಥ ಅವರ ಈ ಕೃಷಿ ಕೆಲಸಗಳಿಗೆ ಪತ್ನಿ ಜಯಮ್ಮ ಕೈ ಜೋಡಿಸುತ್ತಿದ್ದಾರೆ. ಉಳಿದಿರುವ ಸ್ವಲ್ಪ ಜಮೀನಿನಲ್ಲಿ ಮೆಣಸಿನಕಾಯಿ, ಹಿರೇಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಮಂಜುನಾಥ ಬಳಿ ಡ್ರ್ಯಾಗನ್ ಫ್ರುಟ್‌ ಸಸಿಗಳು ಲಭ್ಯವಿದ್ದು ಅಗತ್ಯವಿದ್ದವರು (9008676969) ಸಂಪರ್ಕಿಸಬಹುದು.

ತಾವು ಬೆಳೆದಿರುವ ಎರಡು ಬೆಳೆಗಳಿಗೆ ಅಲ್ಪ ನೀರೇ ಸಾಕಾಗುತ್ತದೆ. ಜಮೀನಿನಲ್ಲಿ ಎರಡು ಕೊಳವೆ ಬಾವಿಗಳಿದ್ದು, ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ನೀರು ಸಂಗ್ರಹಕ್ಕಾಗಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಅಂತರ್ಜಲ ಕಡಿಮೆಯಾಗಿರುವುದರಿಂದ ಕೊಳವೆ ಬಾವಿಯ ನೀರಲ್ಲಿನಲ್ಲಿ ಪ್ಲೋರೈಡ್ ಅಂಶ ಬರುತ್ತದೆ. ಈ ನೀರನ್ನು ನೇರವಾಗಿ ಜಮೀನಿಗೆ ಹರಿಸಿದರೆ ಮಣ್ಣಿನಲ್ಲಿ ಪ್ಲೋರೈಡ್ ಸೇರಿಕೊಂಡು ಫಲವತ್ತತೆ ಕಡಿಮೆಯಾಗುತ್ತದೆ. ಅಲ್ಲದೆ ಹನಿ ನೀರಾವರಿಗೆ ಅಳವಡಿಸಿರುವ ಪೈಪುಗಳಲ್ಲಿ ಪ್ಲೋರೈಡ್ ಅಂಶ ಸೇರಿಕೊಂಡು ಪೈಪುಗಳು ಸಹ ಹಾಳಾಗುತ್ತವೆ. ಇದನ್ನು ತಪ್ಪಿಸಲು ಕೊಳವೆ ಬಾವಿ ನೀರನ್ನು ಕೃಷಿ ಹೊಂಡಕ್ಕೆ ಬಿಟ್ಟುಕೊಂಡು ನಂತರ ಹೊಲಕ್ಕೆ ಹಾಯಿಸಿದರೆ ಅಲ್ಪಮಟ್ಟಿಗೆ ನಿವಾರಿಸಿಕೊಳ್ಳಬಹುದು ಎಂಬುದು ಮಂಜುನಾಥ ಅವರ ಅಭಿಪ್ರಾಯ.

25KDL2: ತಮ್ಮ ಜಮೀನಿನಲ್ಲಿ ಬೆಳೆದಿರುವ ಸೀತಾಫಲವನ್ನು ತೋರಿಸುತ್ತಿರುವ ನಿಂಬಳಗೆರೆ ಗ್ರಾಮದ ಹೆಚ್.ಕೆ. ಮಂಜುನಾಥ  ಜಯಮ್ಮ ದಂಪತಿ.

ಡ್ರ್ಯಾಗನ್ ಫ್ರುಟ್‌ ಹಾಗೂ ಸಿತಾಫಲ ಅಲ್ಪ ನೀರಿನಲ್ಲೇ ಬೆಳೆಯಬಹುದಾಗಿದೆ. ಈ ಬೆಳೆಗಳು ಬಯಲು ಸೀಮೆಯ ರೈತರಿಗೆ ಲಾಭದಾಯಕವಾಗಿವೆ.

–ಎಚ್.ಕೆ. ಮಂಜುನಾಥ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.