ADVERTISEMENT

ಕೂಡ್ಲಿಗಿ: ಮದ್ಯ ವ್ಯಸನಿಗಳ ತಾಣವಾದ ಆಸ್ಪತ್ರೆ ಕಟ್ಟಡ

ಸ್ವಚ್ಛತೆಗೆ ಕ್ರಮ ವಹಿಸಲು ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 5:02 IST
Last Updated 14 ಡಿಸೆಂಬರ್ 2023, 5:02 IST
ಕೂಡ್ಲಿಗಿ ಪಟ್ಟಣದ  ಸರ್ಕಾರಿ ಆಸ್ಪತ್ರೆಯ ಹಳೆ ಕಟ್ಟಣದ ಆವರಣದಲ್ಲಿ ತುಂಬಿರುವ ಕಸ ರಾಶಿ
ಕೂಡ್ಲಿಗಿ ಪಟ್ಟಣದ  ಸರ್ಕಾರಿ ಆಸ್ಪತ್ರೆಯ ಹಳೆ ಕಟ್ಟಣದ ಆವರಣದಲ್ಲಿ ತುಂಬಿರುವ ಕಸ ರಾಶಿ   

ಕೂಡ್ಲಿಗಿ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆ ಹಳೆಯ ಕಟ್ಟಡವೀಗ ಮದ್ಯವ್ಯಸನಿಗಳ ತಾಣವಾಗಿ ಮಾರ್ಪಟ್ಟಿದ್ದು, ಸುತ್ತಮುತ್ತಲಿನ ನಿವಾಸಿಗಳಿಗೆ ಕಿರಿಕಿರಿಯಾಗಿದೆ.

ಆಸ್ಪತ್ರೆಯ ಹಳೆ ಕಟ್ಟದ ಪಕ್ಕದಲ್ಲಿಯೇ ಮದ್ಯದಂಗಡಿ ಇದ್ದು, ಇಲ್ಲಿ ಮದ್ಯ ಖರೀದಿ ಮಾಡುವ ಮದ್ಯ ವ್ಯಸನಿಗಳು ನೇರವಾಗಿ ಬಂದು ಆಸ್ಪತ್ರೆಯ ಆವರಣ ಕುಳಿತುಕೊಂಡು ಕುಡಿದು ತಿಂದು ಹೋಗುತ್ತಿದ್ದಾರೆ. ಜೊತೆಗೆ ಇಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಆಸ್ಪತ್ರೆಯ ಆವರಣದ ತುಂಬ ಮದ್ಯದ ಬಾಟಲಿ, ಟ್ಯಟ್ರಾ ಪ್ಯಾಕ್, ನೀರಿನ ಪಾಕೇಟ್, ಪ್ಲಾಸ್ಟಿಕ್ ಲೋಟಗಳು ತುಂಬಿವೆ. ಆದರೂ ಯಾರೊಬ್ಬರೂ ಈ ಕಡೆಗೆ ಗಮನ ಹರಿಸುತ್ತಿಲ್ಲ.

1994ರಲ್ಲಿ ಗುಡೇಕೋಟೆ ರಸ್ತೆಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ, ಸ್ಥಳಾಂತರ ಮಾಡುವವರೆಗೂ ಹಳೆ ಕಟ್ಟಡಲ್ಲಿಯೇ ಆಸ್ಪತ್ರೆ ಸುವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿತ್ತು. ಆದರೆ ಹೊಸ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರ ಮಾಡಿದ ನಂತರ ಈ ಕಟ್ಟಡ ಭೂತ ಬಂಗಲೆಯಂತಾಗಿದ್ದು, ಮದ್ಯ ವ್ಯಸನಿಗಳ ಹಾಗೂ ಅನೈತಿಅಕ ಚಟುವಕೆಗಳ ತಾಣವಾಗಿ ಮಾರ್ಪಟ್ಟಿದೆ. ಇದರ ಅಕ್ಕ ಪಕ್ಕದಲ್ಲಿ ತರಕಾರಿ ಮಾರುಕಟ್ಟೆ, ಮನೆಗಳು, ಹೋಟೆಲ್‍ಗಳು ಇವೆ.

ADVERTISEMENT

ಇದೇ ಆವರಣದಲ್ಲಿ ಸುಸಜ್ಜಿತ ಆರೋಗ್ಯ ಉಪ ಕೇಂದ್ರದ ಕಟ್ಟಡವಿದೆ. ಆದರೆ ಅಲ್ಲಿ ಯಾರೊಬ್ಬರು ಬಾರದ ಕಾರಣ ಮುಚ್ಚಿದ ಬಾಗಿಲು ತೆರೆದಿಲ್ಲ. ಸೋನಿಯಾ ಪ್ಯಾಕೇಜಿನಡಿಯಲ್ಲಿ ನಿರ್ಮಾಣವಾಗಬೇಕಾಗಿದ್ದ ಕಟ್ಟಡವೊಂದು ಆರ್ಧಕ್ಕೆ ನಿಂತಿದೆ. ಹಳೆ ಕಟ್ಟಡದ ಕಿಟಕಿ, ಬಾಗಿಲುಗಳು ಕಂಡವರ ಪಾಲಾಗಿ, ಇಡೀ ಕಟ್ಟಡ ಶಿಥಿಲಗೊಂಡಿದೆ. ಹಿಂಬದಿಯಲ್ಲಿ ಇಂದಿರಾ ಕ್ಯಾಂಟೀನ್ ನಡೆಯುತ್ತಿದೆ.

ಇದೇ ಜಾಗದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಪ್ರಸ್ತಾವ ಇದೆ. ಆದರೆ, ಇಂದಿರಾ ಕ್ಯಾಂಟಿನ್‌ ಸ್ಥಾಪಿಸಿದ ಬಳಿಕ ಜಾಗ ಇಕ್ಕಟ್ಟಾಗುತ್ತದೆ ಎಂದು ಆಸ್ಪತ್ರೆ ಸ್ಥಾಪನೆ ವಿಳಂಬವಾಗುತ್ತಿದೆ.

ಆಸ್ಪತ್ರೆಯ ಗೇಟಿಗೆ ಹಾಕಿದ್ದ ಬೇಲಿ ತೆಗೆದು ಹಾಕಿರುವುದು ಮದ್ಯ ವ್ಯಸನಿಗಳಿಗೆ ಅವಕಾಶವಾಗಿ ಮಾರ್ಪಟ್ಟಿದೆ.  ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಆಸ್ಪತ್ರೆಯ ಆವರಣ ಸ್ವಚ್ಛ ಮಾಡಿ ಇಲ್ಲಿ ಮದ್ಯಪಾನ ನಿಯಂತ್ರಣ ಮಾಡಬೇಕು ಎಂದು ಸುತ್ತಲಿನ ನಿವಾಸಿಗಳು ಅಗ್ರಹಿಸಿದ್ದಾರೆ.

ಕೂಡ್ಲಿಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಳೆ ಕಟ್ಟಡ ಆವರಣದಲ್ಲಿರುವ ಆರೋಗ್ಯ ಉಪ ಕೇಂದ್ರದ ಮುಂದೆ ಬಿದ್ದಿರುವ ಮಧ್ಯದ ಟ್ಯಟ್ರಾ ಪ್ಯಾಕ್ ನೀರಿನ ಪಾಕೇಟ್ ಪ್ಲಾಸ್ಟಿಕ್ ಲೋಟಗಳ ರಾಶಿ

ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಿ ಹಳೆ ಆಸ್ಪತ್ರೆ ಜಾಗದಲ್ಲಿಯೇ ₹25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು

–ಡಾ. ಶ್ರೀನಿವಾಸ್ ಎನ್.ಟಿ. ಶಾಸಕ ಕೂಡ್ಲಿಗಿ

ಆಸ್ಪತ್ರೆಯ ಆವರಣವನ್ನು ಶೀಘ್ರದಲ್ಲಿಯೇ ಸ್ವಚ್ಛ ಮಾಡಿಸಿ ಒಳಗೆ ಯಾರು ಹೋಗದಂತೆ ಮಾಡಲಾಗುವುದು –ಡಾ. ಎಸ್.ಪಿ. ಪ್ರದೀಪ್ ಕುಮಾರ್ ತಾಲ್ಲೂಕು ಆರೋಗ್ಯಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.