ADVERTISEMENT

ಎಪಿಎಂಸಿ ಗೋದಾಮಿನಲ್ಲಿ ವಸತಿ ಶಾಲೆ; ಸೌಲಭ್ಯ ಕೊರತೆ

230 ವಿದ್ಯಾರ್ಥಿಗಳಿಗೆ ಗಾಳಿ–ಬೆಳಕಿನ ವ್ಯವಸ್ಥೆಯಿಲ್ಲ; ಶೌಚಕ್ಕೂ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 0:00 IST
Last Updated 20 ನವೆಂಬರ್ 2023, 0:00 IST
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸುತ್ತಿರುವುದು
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸುತ್ತಿರುವುದು   

ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಕರೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯು ಏಳು ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಗೋದಾಮಿನಲ್ಲಿ ನಡೆಯುತ್ತಿದೆ. ಆದರೆ ಯಾವುದೇ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ.

ಎಪಿಎಂಸಿ ಕಚೇರಿಯು ಅಡುಗೆ ಕೋಣೆಯಾಗಿದೆ. ಏಳು ಮಳಿಗೆಗಳು ತರಗತಿಗಳಿಗೆ ಬಳಕೆಯಾಗುತ್ತಿವೆ. ಮೂರು ಗೋದಾಮಗಳಲ್ಲಿ ವಿದ್ಯಾರ್ಥಿಗಳು ಮಲಗುತ್ತಾರೆ.

‘ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ 2019ರಲ್ಲಿ ಆರಂಭಗೊಂಡರೂ ಪೂರ್ಣಗೊಂಡಿಲ್ಲ. ಕಟ್ಟಡ ನಿರ್ಮಾಣವಾದ ಕೂಡಲೇ ಅಲ್ಲಿ ವ್ಯವಸ್ಥೆ ಮಾಡುವುದಾಗಿ ಜುಲೈ ತಿಂಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೇಳಿದ್ದರು. ಆದರೆ, ಪರಿಸ್ಥಿತಿ ಮಾತ್ರ ಬದಲಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

‘ಬಳ್ಳಾರಿ–ವಿಜಯನಗರ ಜಿಲ್ಲೆಯ 6 ರಿಂದ 10ನೇ ತರಗತಿಯ ಒಟ್ಟು 230 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಅವರಿಗೆ ಅಗತ್ಯ ಸೌಲಭ್ಯಗಳಿಲ್ಲ. ಪಾಠ ಆಲಿಸಲು ಅಷ್ಟೇ ಅಲ್ಲ, ಇರಲು ಮತ್ತು ಮಲಗಲು ಕೂಡ ಜಾಗದ ಕೊರತೆ ಇದೆ. ಮಳಿಗೆಗಳಲ್ಲಿ ಬೆಳಕು ಮತ್ತು ಗಾಳಿ ವ್ಯವಸ್ಥೆಯಿಲ್ಲ. ಆವರಣದಲ್ಲಿ ಸೊಳ್ಳೆಗಳ ಕಾಟವೂ ಇದೆ’ ಎಂದು ಅವರು ಹೇಳಿದರು.

‘ಮಳಿಗೆ, ಗೋದಾಮಿನಲ್ಲಿ ಕಿಟಕಿಗಳಿಲ್ಲ. ಗಾಳಿ, ಬೆಳಕು ಇಲ್ಲ. ಆವರಣದಲ್ಲಿ ರೈತರು ಆಯಾ ಋತುವಿನಲ್ಲಿ ಹಾಕುವ ದವಸ ಧಾನ್ಯದ ಘಾಟಿನಿಂದಲೂ ತುಂಬಾ ಸಮಸ್ಯೆಯಾಗುತ್ತದೆ’ ಎಂದು ವಿದ್ಯಾರ್ಥಿಗಳು ದೂರಿದರು.

‘ಐದು ಶೌಚಾಲಯಗಳಿವೆ. ಸ್ನಾನ, ಶೌಚಕ್ಕೆ ತುಂಬಾ ಹೊತ್ತು ಸಾಲಿನಲ್ಲಿ ಕಾಯಬೇಕು. ವಿದ್ಯುತ್ ಸಮಸ್ಯೆಯಿದ್ದು,  ಜನರೇಟರ್ ಇಲ್ಲ. ಅನಿವಾರ್ಯವಾಗಿ ಶೌಚಕ್ಕೆಂದು ಬಯಲಿಗೆ ಹೋದರೆ, ಹಾವು ಮತ್ತು ಚೇಳು ಕಚ್ಚುವ ಭಯವಿದೆ’ ಎಂದರು.

ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಎಪಿಎಂಸಿ ವಾಣಿಜ್ಯ ಮಳಿಗೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ತರಗತಿಗಳು ನಡೆದಿರುವುದು
ಕರೂರು ಗ್ರಾಮದ ಎಪಿಎಂಸಿ ಮಾರುಕಟ್ಟೆಯ ಗೋದಾಮು ಹಗಲು ವೇಳೆ ತರಗತಿಗೆ ರಾತ್ರಿ ವಸತಿಗೆ ಬಳಕೆಯಾಗುತ್ತದೆ.

ವಸತಿ ಶಾಲೆಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೊಸ ಕಟ್ಟಡಕ್ಕೆ ವಸತಿ ಶಾಲೆ ಸ್ಥಳಾಂತರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ತಿಳಿಸಿದ್ದಾರೆ.

–ಪಿ. ಖಾಸಿಂ ಸಾಹೇಬ್ ಮುಖ್ಯ ಶಿಕ್ಷಕ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಕರೂರು

ದಸರೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್ಟ್) ಎಂಜಿನಿಯರ್‌ಗೆ ತಿಳಿಸಲಾಗಿತ್ತು. ಈ ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ಇದೆ.

- ಸತೀಶ್ ಉಪನಿರ್ದೇಶಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ

ಮಾನವೀಯ ಹಾಗೂ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಎಪಿಎಂಸಿ ಕಟ್ಟಡವನ್ನು ಶಾಲೆ ನಡೆಸಲು ಉಚಿತವಾಗಿ ನೀಡಿದ್ದೇವೆ. ನಮ್ಮಿಂದ ಸಾಧ್ಯವಾದಷ್ಟು ನೆರವು ನೀಡಲು ಪ್ರಯತ್ನಿಸಿದ್ದೇವೆ.

- ಎಸ್.ಶ್ಯಾಮ್ ಪ್ರಭಾರಿ ಕಾರ್ಯದರ್ಶಿ ಎಪಿಎಂಸಿ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.