ಬಳ್ಳಾರಿ: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕುರುಬೂರು ಬಳಿ ಸಂಭವಿಸಿದ ರಸ್ತೆ ಅಪಘಾತ ನಗರದ ಹೊರ ವಲಯದಲ್ಲಿರುವ ಸಂಗನಕಲ್ ಗ್ರಾಮಕ್ಕೆ ಬರ ಸಿಡಿಲಿನಂತೆ ಬಂದೆರಗಿದೆ. ಸಾವು ಗ್ರಾಮದ ಕದ ಬಡಿದ ಸುದ್ದಿ ಕೇಳುತ್ತಿದ್ದಂತೆ ಇಡೀ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತದಲ್ಲಿ ಮೃತಪಟ್ಟ ಒಂಬತ್ತು ಮಂದಿ ಮೂರು ಕುಟುಂಬಗಳಿಗೆ ಸೇರಿದವರು. ಕೋವಿಡ್ ಸಂಕಷ್ಟದ ಬಳಿಕ ಬದುಕು ಕಟ್ಟಿಕೊಳ್ಳಲು ಹರಸಾಹಸ ಮಾಡಿದ್ದ ಸಂದೀಪ್, ಮಂಜುನಾಥ್ ಮತ್ತು ಜನಾರ್ದನ ಕುಟುಂಬಗಳು, ‘ಹೇಗೋ ಬದುಕು ಸುಧಾರಿಸಿತು’ ಎಂದು ನಿಟ್ಟುಸಿರು ಬಿಡುವಾಗಲೇ ಜವರಾಯ ಬಂದೆರಗಿದ.
ಸಂದೀಪ್, ಸಂಗನಕಲ್ ಗ್ರಾಮದಲ್ಲಿ ‘ಬಳ್ಳಾರಿ ಒನ್’ ನಡೆಸುತ್ತಿದ್ದರು. ಅಪಘಾತದಲ್ಲಿ ಸಂದೀಪ್, ಅವರ ತಾಯಿ ಸುಜಾತಾ, ತಂದೆ ಕೊಟ್ರೇಶ್ ಮೃತಪಟ್ಟಿದ್ದಾರೆ. ಮಗ, ಸೊಸೆ, ಮೊಮ್ಮಗನನ್ನು ಕಳೆದುಕೊಂಡು ಕೊಟ್ರೇಶ್ ಅವರ ತಾಯಿ ರೋದಿಸುತ್ತಿದ್ದುದ್ದನ್ನು ಕಂಡು ಸುತ್ತಲಿದ್ದವರು ಕಣ್ಣಾಲಿಗಳು ತುಂಬಿದ್ದವು. ಅಜ್ಜಿ ತಮ್ಮ ಮಗ, ಮೊಮ್ಮಗನ ಒಡನಾಟ ನೆನದು ಬಿಕ್ಕಿಬಿಕ್ಕಿ ಅಳುತ್ತಿದ್ದರು.
ಮಂಜುನಾಥ್ ರೊಟ್ಟಿ ಮಾಡಿ, ಮಾರಾಟ ಮಾಡಿ ಜೀವನ ಜೀಕುತ್ತಿದ್ದರು. ಮಂಜುನಾಥ್, ಅವರ ಪತ್ನಿ ಪೂರ್ಣಿಮಾ, ಮಕ್ಕಳಾದ ಕಾರ್ತಿಕ್, ಪವನ್ ಎಲ್ಲರೂ ದುರಂತದಲ್ಲಿ ಬಲಿಯಾಗಿದ್ದಾರೆ. ಅಪಘಾತದಲ್ಲಿ ಜನಾರ್ದನ ಗಾಯಗೊಂಡಿದ್ದಾರೆ. ಅವರ ಪತ್ನಿಗಾಯತ್ರಿ ಹಾಗೂ ಮಗಳು ಶ್ರಾವ್ಯ ಸಾವನ್ನಪ್ಪಿದ್ದಾರೆ. ಜನಾರ್ದನ ಕುರುಕಲು ತಿಂಡಿ ತಯಾರಿಸುತ್ತಿದ್ದರು.
ಮೂರು ಕುಟುಂಬಗಳು ಮೇ 27ರಂದು ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಬಳ್ಳಾರಿಯಿಂದ ಮೈಸೂರಿಗೆ ರೈಲಿನಲ್ಲಿ ತೆರಳಿ, ಅಲ್ಲಿಂದ ಕಾರು ಬಾಡಿಗೆಗೆ ಪಡೆದು ಸ್ಥಳ ವೀಕ್ಷಣೆ ಮಾಡಿದ್ದರು. ಮಧ್ಯಾಹ್ನದ ಮಬ್ಬಿನಲ್ಲಿ ಅಪಘಾತ ಸಂಭವಿಸಿದೆ. ಇಡೀ ಗ್ರಾಮದ ಜನ ಮೃತರ ಮನೆಗಳಿಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ.
ಮಾಜಿ ಸಚಿವ ಬಿ. ಶ್ರೀರಾಮುಲು ಮತ್ತು ಉಪ ವಿಭಾಗಾಧಿಕಾರಿ ಹೇಮಂತ್ ಕುಮಾರ್ ಮೃತರ ಮನೆಗಳಿಗೆ ಭೇಟಿ ನೀಡಿದ್ದರು. ‘ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಸೂಚನೆ ಮೇಲೆ ಅಪಘಾತಕ್ಕೀಡಾದ ಕುಟುಂಬಗಳ ಆರ್ಥಿಕ ಸ್ಥಿತಿಗತಿ ತಿಳಿಯಲು ಬಂದಿದ್ದೇನೆ. ಜಿಲ್ಲಾಧಿಕಾರಿ ಮೈಸೂರು ಡಿ.ಸಿ ಅವರನ್ನು ಸಂಪರ್ಕಿಸಿದ್ದಾರೆ. ಮೃತ ದೇಹಗಳನ್ನು ಮಂಗಳವಾರ ಮಧ್ಯಾಹ್ನದೊಳಗೆ ಗ್ರಾಮಕ್ಕೆ ತರಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.