ಬಳ್ಳಾರಿ: ‘ಬೆಳೆಯುವ ಕಲಾವಿದರು ಕಾಲ ಕಾಲಕ್ಕೆ ಪಾತ್ರಗಳನ್ನು ಬದಲಿಸುತ್ತಿರಬೇಕು. ಒಂದೇ ಪಾತ್ರದಲ್ಲಿ ಮುಂದುವರೆಯಬಾರದು’ ಎಂದು ಕಲಾವಿದೆ ಸುಭದ್ರಮ್ಮ ಮನ್ಸೂರು ಪ್ರತಿಪಾದಿಸಿದರು.
ರಂಗಭೂಮಿ ಕಲಾವಿದೆ ಪಿ.ಪದ್ಮಾ ಕೂಡ್ಲಿಗಿ ಅವರ ಜೀವನ ಸಾಧನೆ ಕುರಿತು ಕನ್ನಡ ಸಂಸ್ಕೃತಿ ಇಲಾಖೆಯು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಬಹುಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವುದರಿಂದ ಕಲಾವಿದರು ಪ್ರತಿಭೆ ವಿಕಾಸವಾಗುತ್ತದೆ. ಒಂದೇ ಪಾತ್ರವು ಏಕತಾನತೆಯಿಂದ ಪ್ರತಿಭೆಯನ್ನು ಮಸುಕು ಮಾಡುತ್ತದೆ’ ಎಂದರು.
‘ಶಾಲೆಯಲ್ಲಿ ಮಕ್ಕಳಿಗೆ ದೊರಕುವ ಶಿಕ್ಷಣಕ್ಕಿಂತಲೂ ರಂಗಭೂಮಿಯು ಭಿನ್ನ ಪಾಠಗಳನ್ನು ಕಲಿಸುತ್ತದೆ. ಸಮಾಜದ ಪ್ರತಿರೂಪವೇ ರಂಗಭೂಮಿ. ಯುವಜನರಿಗೆ ಈ ಪ್ರತಿರೂಪದ ಪರಿಚಯವಾಗಬೇಕಿದೆ’ ಎಂದರು.
‘ರಂಗಭೂಮಿ ಕಲೆಯು ಸಮಾಜಕ್ಕೆ ಮಾರ್ಗದರ್ಶನ ನೀಡಿ ತಿದ್ದುತ್ತದೆ. ಕಲಾವಿದರು ಸಮಾಜವನ್ನು ತಿದ್ದುವ ಪ್ರಕ್ರಿಯೆಯ ದೊಡ್ಡ ಭಾಗವಾಗಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಪ್ರತಿಪಾದಿಸಿದರು.
‘ಸಮಾಜಕ್ಕೆ ರಂಗಭೂಮಿ ಕಲಾವಿದರ ಸೇವೆ ಅನನ್ಯವಾಗಿದೆ. ಆದರೆ, ಅವರ ಬದುಕು ಕಷ್ಟಕರವಾಗಿವೆ. ವೈಯಕ್ತಿಕ ಬದುಕನ್ನು ಮರೆತು ರಂಗಭೂಮಿಗೆ ಸೇವೆ ಸಲ್ಲಿಸಿದವರ ಬದುಕನ್ನು ಹಸನಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.
‘ವಿದ್ಯಾರ್ಥಿಗಳಿಗೆ ರಂಗಭೂಮಿ ಪರಂಪರೆಯನ್ನು ಪರಿಚಯಿಸಿ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ. ಇದರಿಂದ ಮಾತ್ರ ಯುವ ಜನತೆ ಸುಸಂಸ್ಕೃತರಾಗಲು ಸಾಧ್ಯ’ ಎಂದರು.
‘ಹಂಪಿ ಉತ್ಸವವನ್ನು ಆಚರಿಸಲು ಸರ್ಕಾರ ಮುಂದಾಗಬೇಕು’ ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಪ್ರಾಚಾರ್ಯ ಮಹಾಲಿಂಗನಗೌಡ ಮಾತನಾಡಿದರು. ಹಗರಿಬೊಮ್ಮನಹಳ್ಳಿಯ ಎ.ವಿರುಪಾಕ್ಷರಾವ್ ಮೊರಗೇರಿ ಅವರು ‘ಪದ್ಮಾ ಅವರ ಜೀವನ ಮತ್ತು ಸಾಧನೆ’ ಕುರಿತು ಹಾಗೂ ಲೇಖಕ ಕೆ.ಬಿ.ಸಿದ್ದಲಿಂಗಪ್ಪ ‘ರಂಗಭೂಮಿ ಕ್ಷೇತ್ರಕ್ಕೆ ಪದ್ಮಾ ಅವರ ಕೊಡುಗ’ ಕುರಿತು ಮಾತನಾಡಿದರು.
ಲೇಖಕಿ ಎನ್.ಡಿ.ವೆಂಕಮ್ಮ, ಕಲಾವಿದರಾದ ರಮೇಶ್ ಗೌಡ ಪಾಟೀಲ್, ಎ.ವರಲಕ್ಷ್ಮಿ, ಅಣ್ಷಾಜಿ ಕೃಷ್ಣ ರೆಡ್ಡಿ ಮತ್ತು ಪತ್ರಕರ್ತ ಎಂ.ಅಹಿರಾಜ್ ಸಂವಾದದಲ್ಲಿ ಪಾಲ್ಗೊಂಡರು. ಕೆ.ಕಲ್ಯಾಣಿ ರಂಗ ಗೀತೆಗಳನ್ನು ಹಾಡಿದರು. ಹಿರಿಯ ಕಲಾವಿದ ಬೆಳಗಲ್ಲು ವೀರಣ್ಣ, ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮತ್ತುಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷೆ ಶ್ರೀದೇವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.