ಕುರುಗೋಡು: ನಷ್ಟ ಅನುಭವ ಬೆನ್ನಿಗಿದ್ದರೂ ಮೊಹರಂನ ಕಾರಣಿಕದ ನುಡಿಯನ್ನು ನಂಬಿ ತಾಲ್ಲೂಕಿನ ರೈತರು ಮತ್ತೆ ಮೆಣಸಿನಕಾಯಿ ಬೆಳೆಯಲು ಮುಂದಾಗಿದ್ದಾರೆ.
ತಾಲ್ಲೂಕಿನ ಪ್ರಮುಖ ಬೆಳೆಗಳಲ್ಲಿ ಭತ್ತ ಮತ್ತು ಮೆಣಸಿನಕಾಯಿಗೆ ಪ್ರಮುಖ ಸ್ಥಾನ. ಕಳೆದ ವರ್ಷ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ವೈರಸ್ ಪರಿಣಾಮ ಇಳುವರಿ ಕುಂಟಿತವಾಗುವುದರ ಜತೆಗೆ ಬೆಲೆ ಕುಸಿತ ದಿಂದ ಮೆಣಸಿನಕಾಯಿ ಬೆಳೆಗಾರರು ತೀವ್ರ ನಷ್ಟ ಎದುರಿಸಿ ಕೈಸುಟ್ಟುಕೊಂಡಿದ್ದರು. ಭತ್ತ ಬೆಳೆದ ರೈತರು ಇಳುವರಿ ಕೊರತೆಯಲ್ಲಿಯೂ ಉತ್ತಮ ಬೆಲೆಯಿಂದ ಗೆದ್ದು ಬೀಗಿದ್ದರು.
ಈ ವರ್ಷ ಶೇ 25ರಷ್ಟು ಭತ್ತದ ಬೆಳೆ ವಿಸ್ತೀಣ ಹೆಚ್ಚಾಗಿದೆ. ಮೆಣಸಿನಕಾಯಿ ಬೆಳೆ ಶೇ 20ರಷ್ಟು ಪ್ರದೇಶ ಕಡಿಮೆಯಾಗುವ ಲಕ್ಷಣ ಕಾಣುತ್ತಿದೆ.
ತಾಲ್ಲೂಕಿನ ಸಿಂಧಿಗೇರಿ ಗ್ರಾಮ ಒಂದರಲ್ಲಿಯೇ ಕಳೆದ ವರ್ಷ 1,200 ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಈ ವರ್ಷ 150 ಎಕರೆಗೆ ಕುಸಿದಿದೆ.
ಮೆಕ್ಕೆಜೋಳ, ಹತ್ತಿ ಮತ್ತು ತೊಗರಿ ಬೆಳೆಯಲು ರೈತರು ಮುಂದಾಗಿದ್ದಾರೆ. ಕೆಲವು ರೈತರು ತೋಟಗಾರಿಕೆ ಬೆಳೆಗಳತ್ತ ವಾಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಂಕಿಅಂಶ ಹೇಳುತ್ತದೆ.
ತುಂಗಭದ್ರಾ ಮೇಲ್ಮಟ್ಟದ ನಾಲೆಗೆ ನೀರು ಹರಿದುಬರುತ್ತಿದ್ದು, ಮೆಣಸಿನಕಾಯಿ ಸಸಿ ನಾಟಿ ಕಾರ್ಯ ಚುರುಕು ಪಡೆದುಕೊಂಡಿದೆ. ನರ್ಸರಿಯಲ್ಲಿ ಬೆಳೆದಿರುವ ಮೆಣಸಿನಕಾಯಿ ಸಸಿಗಳಿಗೆ ಹೆಚ್ಚು ಬೇಡಿಕೆ ಬಂದಿದ್ದು, ರೈತರು ಎದುರಿಸುತ್ತಿರುವ ಪರಿಸ್ಥಿತಿಯ ಲಾಭ ಪಡೆಯಲು ನರ್ಸರಿ ಮಾಲೀಕರು ಹವಣಿಸುತ್ತಿದ್ದಾರೆ.
ರೈತರಿಗೆ ಅನ್ಯಾಯವಾಗದಂತೆ ಮತ್ತು ನರ್ಸರಿ ಮಾಲೀಕರಿಗೆ ನಷ್ಟವಾಗದಂತೆ ನ್ಯಾಯಯುತ ಬೆಲೆಯಲ್ಲಿ ರೈತರಿಗೆ ಮೆಣಸಿನಕಾಯಿ ಸಸಿ ಮಾರಾಟ ಮಾಡಬೇಕು ಎಂದು ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅಧ್ಯಕ್ಷತೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ನರ್ಸರಿ ಮಾಲೀಕರು ಮತ್ತು ಮೆಣಸಿನಕಾಯಿ ಬೆಳೆಗಾರರ ಸಭೆ ನಡೆಸಿ ಸೂಚಿನೆ ನೀಡಲಾಗಿತ್ತು.
ಕಳೆದ ವರ್ಷ ಇಳುವರಿ ಮತ್ತು ಬೆಲೆ ಕುಸಿತದ ಕಹಿ ನೆನಪಿನಲ್ಲಿಯೇ ಈ ವರ್ಷ ನಮ್ಮ ಕೈಹಿಡಿಯಬಹುದು ಎನ್ನುವ ಆಶಾಭಾವನೆಯಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲು ತಾಲ್ಲೂಕಿನ ರೈತರು ಮುಂದಾಗಿದ್ದಾರೆ.
ಕಾರಣಿಕದ ಮೇಲೆ ನಂಬಿಕೆ
ಕೆಂಪು ಕುದುರೆ ಗಗನಕ್ಕೆ ಹಾರಿತು. ಬಿಳಿ ಕುದುರೆ ಮಂಡಿ ಊರಿತು ಎನ್ನುವ ಮೊಹರಂ ಹಬ್ಬದಲ್ಲಿ ನುಡಿದ ಕಾರಣಿಕ ನುಡಿಯಿಂದ ಪ್ರೇರಿತರಾದ ರೈತರು ಮತ್ತೊಮ್ಮೆ ಮೆಣಸಿಕಾಯಿ ಬೆಳೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕಳಚಿ ನೀರು ನದಿ ಪಾಲಾಗುತ್ತಿದೆ. ಕಳೆದ ವರ್ಷ ಬೆಲೆ ದೊರೆಯದೆ ಬೆಳೆದ ಬಹುಪಾಲು ಮೆಣಸಿನಕಾಯಿ ಗೋದಾಮು ಸೇರಿವೆ. ಆದರೂ ಕಾರಣಿಕರ ನುಡಿಯಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಳೆದ ವರ್ಷ ಬೆಲೆ ದೊರೆಯದ ಪರಿಣಾಮ ತಾಲ್ಲೂಕಿನಲ್ಲಿ ಮೆಣಸಿನಕಾಯಿ ಬೆಳೆ ವಿಸ್ತೀಣ ಕಡಿಮೆಯಾಗುವ ಲಕ್ಷಣ ಕಾಣುತ್ತಿದೆ. ಇತರೆ ತೋಟಗಾರಿಕೆ ಬೆಳೆಯತ್ತ ರೈತರು ಮುಖ ಮಾಡಿದ್ದಾರೆ-ತಿಪ್ಪಾರೆಡ್ಡಿ ಸಹಾಯಕ ತೋಟಗಾರಿಕೆ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.