ADVERTISEMENT

12ರಂದು ಯುವಜನರ ಹಕ್ಕಿಗಾಗಿ ಆಂದೋಲನ 

ಬೆಂಗಳೂರಿನಲ್ಲಿ ಎಐಡಿವೈಓ ಆಯೋಜನೆ 

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 5:52 IST
Last Updated 4 ಡಿಸೆಂಬರ್ 2019, 5:52 IST
   

ಬಳ್ಳಾರಿ: ಯುವಜನರನ್ನು ಕಾಪಾಡಿ, ಕೇವಲ ಕಾರ್ಪೊರೇಟ್‌ಗಳನ್ನಲ್ಲ ಎಂದು ಆಗ್ರಹಿಸಿ ಡಿ.12ರಂದು ಬೆಂಗಳೂರಿನಲ್ಲಿ ಯುವಜನರ ಹಕ್ಕಿಗಾಗಿ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಐಡಿವೈಓ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮಾಂಜನಪ್ಪ ಅಲ್ದಳ್ಳಿ ತಿಳಿಸಿದರು.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದು ಉದ್ಯೋಗ ಸೃಷ್ಟಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‌ಗಮನ ಸೆಳೆಯಲು ದೇಶದಾದ್ಯಂತ ಬೃಹತ್ ಹೋರಾಟವನ್ನು ರೂಪಿಸುವುದೇ ಆಂದೋಲನದ ಉದ್ದೇಶ ಎಂದು ನಗರದಲ್ಲಿ‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಂದೋಲನದಲ್ಲಿ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ಎಐಯುಟಿಯುಸಿ ಅಖಿಲ ಭಾರತ ಘಟಕದ ಅಧ್ಯಕ್ಷ ಕೆ.ರಾಧಾಕೃಷ್ಣ ಮುಖ್ಯ ಭಾಷಣ ಮಾಡಲಿದ್ದಾರೆ. ವಿವಿಧ ಜಿಲ್ಲೆಗಳ ಪ್ರಮುಖ ನಾಲ್ಕು ನೂರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿಯಿ ನೀಡಿದರು.

ADVERTISEMENT

ಒಂದು ವರ್ಷದಲ್ಲಿ ದೇಶದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಸಾವಿರಾರು ಕೈಗಾರಿಕೆಗಳು ಮುಚ್ಚಿವೆ. ಹಿಂದಿನ ಆರು ತಿಂಗಳ ಅವಧಿಯಲ್ಲಿ 90 ಲಕ್ಷ ಉದ್ಯೋಗಗಳು ನಾಶ ವಾಗಿವೆ ಎನ್ನಲಾದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪದೇ ಎಲ್ಲವೂ ಸುಸೂತ್ರವಾಗಿದೆ ಎಂದು ನಾಟಕ ಮಾಡುತ್ತಿದೆ ಎಂದು ದೂರಿದರು.

ವಿವಿಧ ಕ್ಷೇತ್ರಗಳಲ್ಲಿ ನನೆಗುದಿಗೆ ಬಿದ್ದಿರುವ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಕೊಡಬೇಕು. ಜಿಎಸ್‌ಟಿ ದರಗಳನ್ನು ಇಳಿಸಬೇಕು. ಜನರ ಕೈಗೆ ಹೆಚ್ಚಿನ ಆದಾಯ ಹರಿದು ಬರುವಂತೆ ಆದಾಯ ತೆರಿಗೆಯನ್ನು ಕಡಿತಗೊಳಿಸಬೇಕು. ಸಾಲದ‌ ಮೇಲಿನ ಬಡ್ಡಿ ದರವನ್ನು ಇಳಿಸಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಬೇಕು. ಖಾಸಗೀಕರಣಗೊಳಿಸಬಾರದು. ಬ್ಯಾಂಕ್ ಗಳ ‌ವಿಲೀನ ಮಾಡಬಾರದು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ರಾಧಾಕೃಷ್ಣ ಉಪಾಧ್ಯ, ಜಗದೀಶ್, ಪಂಪಾಪರಿ, ಎರ್ರಿಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.