ADVERTISEMENT

ಸಕಾಲದ ನಿರ್ಧಾರದಿಂದ ಎಲ್ಲರೂ ಸುರಕ್ಷಿತ

ಮಾನಸ ಸರೋವರದಿಂದ ಹಂಪಿ ವಿದ್ಯಾರಣ್ಯ ಶ್ರೀಗಳ ನೇತೃತ್ವದಲ್ಲಿ 57 ಜನರಿಂದ ಪಯಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಜುಲೈ 2018, 14:27 IST
Last Updated 4 ಜುಲೈ 2018, 14:27 IST
ಮಾನಸ ಸರೋವರದಲ್ಲಿ ಕೈಗೊಂಡ ರುದ್ರಹೋಮದಲ್ಲಿ ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹಾಗೂ ಅವರ 57 ಜನ ಶಿಷ್ಯರು ಪಾಲ್ಗೊಂಡಿದ್ದರು
ಮಾನಸ ಸರೋವರದಲ್ಲಿ ಕೈಗೊಂಡ ರುದ್ರಹೋಮದಲ್ಲಿ ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹಾಗೂ ಅವರ 57 ಜನ ಶಿಷ್ಯರು ಪಾಲ್ಗೊಂಡಿದ್ದರು   

ಹೊಸಪೇಟೆ: ಇಲ್ಲಿನ ಹಂಪಿ ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾನಸ ಸರೋವರಕ್ಕೆ ಪಯಣ ಬೆಳೆಸಿದ್ದ 57 ಜನರ ತಂಡ ಸುರಕ್ಷಿತವಾಗಿ ವಾಪಸ್‌ ತಾಯ್ನಾಡಿಗೆ ಬಂದಿದೆ.

ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹಾಗೂ ಅವರ 57 ಜನ ಶಿಷ್ಯರು ಮಾನಸ ಸರೋವರದಿಂದ ನವದೆಹಲಿಗೆ ಸುರಕ್ಷಿತವಾಗಿ ಬಂದು ತಲುಪಿದ್ದಾರೆ. ಹವಾಮಾನ ಇಲಾಖೆಯು ಭಾರಿ ಮಳೆಯ ಮುನ್ಸೂಚನೆ ಕೊಟ್ಟಿದ್ದರಿಂದ ಸ್ವಾಮೀಜಿ ಹಾಗೂ ಅವರ ಜತೆಗಿದ್ದವರು ತುರ್ತಾಗಿ ಅಲ್ಲಿಂದ ಪಯಣ ಬೆಳೆಸಿದರು. ಸಕಾಲಕ್ಕೆ ತೆಗೆದುಕೊಂಡ ನಿರ್ಧಾರದಿಂದಾಗಿ ಮಳೆ ಸುರಿಯಲು ಆರಂಭವಾಗುವುದರೊಳಗೆ ಎಲ್ಲರೂ ಸುರಕ್ಷಿತ ಜಾಗ ಸೇರಿದ್ದಾರೆ. ಸ್ವಲ್ಪ ವಿಳಂಬ ಮಾಡಿದರೂ ಸಮಸ್ಯೆ ಎದುರಿಸಬೇಕಾಗುತ್ತಿತ್ತು ಎಂದು ಸ್ವತಃ ಸ್ವಾಮೀಜಿಯವರೇ ದೂರವಾಣಿಯಲ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲ 58 ಜನ ಜೂ. 18ರಂದು ಹೈದರಾಬಾದ್‌ ಮೂಲಕ ನವದೆಹಲಿ, ನೇಪಾಳದ ರಾಜಧಾನಿ ಕಠ್ಮಂಡು ಮೂಲಕ ಮಾನಸ ಸರೋವರಕ್ಕೆ ಪ್ರಯಾಣ ಬೆಳೆಸಿದ್ದರು. ರಾಜ್ಯ ಸೇರಿದಂತೆ ನವದೆಹಲಿ, ಔರಂಗಾಬಾದ್‌, ಕೊಚ್ಚಿ, ಕೊಯಮತ್ತೂರು, ನಿಜಾಮಬಾದ್‌ ಸೇರಿದಂತೆ ಇತರೆ ಭಾಗಗಳ 57 ಜನ ಸ್ವಾಮೀಜಿ ಅವರ ಶಿಷ್ಯರು ತಂಡದಲ್ಲಿ ಇದ್ದರು. ಜೂ. 27ರಂದು ಅಲ್ಲಿಗೆ ತಲುಪಿದ ತಂಡ ಜು. 1ರ ವರೆಗೆ ಅಲ್ಲಿಯೇ ಉಳಿದುಕೊಂಡಿತ್ತು.

ADVERTISEMENT

ಲೋಕಕಲ್ಯಾಣಾರ್ಥ ಮಾನಸ ಸರೋವರದಲ್ಲಿ ಕೈಗೊಂಡ ರುದ್ರಹೋಮ, ನವಹೋಮ, ಚತುಷಷ್ಠಿ ಹೋಮ, 64 ದೇವತೆಗಳ ಪೂಜಾ ಕೈಂಕರ್ಯದಲ್ಲಿ ಎಲ್ಲರೂ ಪಾಲ್ಗೊಂಡಿದ್ದರು. ಇನ್ನೊಂದು ದಿನ ಅಲ್ಲಿಯೇ ಉಳಿದುಕೊಳ್ಳುವ ಯೋಜನೆ ತಂಡದಾಗಿತ್ತು. ಆದರೆ, ಹವಾಮಾನ ಇಲಾಖೆಯು ಭಾರಿ ಮಳೆಯ ಮುನ್ಸೂಚನೆ ಕೊಟ್ಟಿದ್ದರಿಂದ ಜು. 1ರಂದು ಸಂಜೆ ಮಾನಸ ಸರೋವರದಿಂದ ಪ್ರಯಾಣ ಬೆಳೆಸಿ ಮರುದಿನ ನವದೆಹಲಿ ತಲುಪಿದರು. ಅದಾದ ಒಂದು ದಿನದ ಬಳಿಕ ಮಾನಸ ಸರೋವರದಲ್ಲಿ ಭಾರಿ ಮಳೆ, ಭೂಕುಸಿತ ಉಂಟಾಗಿ ಅನೇಕ ಜನ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.

‘ಏಳು ಸಲ ಭಕ್ತರೊಂದಿಗೆ ಮಾನಸ ಸರೋವರಕ್ಕೆ ಹೋಗಿ ಬಂದಿದ್ದೇನೆ. ಎರಡು ಸಲ ಅಲ್ಲಿ ಭೂಕಂಪ ಸಂಭವಿಸಿದ್ದರಿಂದ ಹೋಗಲು ಆಗಲಿಲ್ಲ. ಒಮ್ಮೆಯೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಎಲ್ಲವೂ ಪರಮಾತ್ಮನ ಕೃಪೆ’ ಎಂದು ವಿದ್ಯಾರಣ್ಯ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ.

‘ಕಠ್ಮಂಡು ವರೆಗೆ ಪ್ರಯಾಣ ಸುಗಮವಾಗಿರುತ್ತದೆ. ನಂತರ ಅಲ್ಲಿಂದ ಚಿರುಂಗ ವರೆಗೆ ಹತ್ತು ಗಂಟೆ ಪ್ರವಾಸ. ದುರ್ಗಮವಾದ ಬೆಟ್ಟ, ಗುಡ್ಡಗಳ ಮಧ್ಯೆ ರಸ್ತೆ ಹಾದು ಹೋಗಿರುವುದರಿಂದ ಪ್ರವಾಸದ ಸಂದರ್ಭದಲ್ಲಿ ಆಯಾಸವಾಗುತ್ತದೆ. ಸ್ವಲ್ಪ ಮಳೆ ಸುರಿದರೂ ತೊಂದರೆ ಎದುರಾಗುತ್ತದೆ. ಹೋಗುವಾಗ ಮಳೆ ಇರಲಿಲ್ಲ. ಆದರೆ, ಬರುವಾಗ ಮಳೆ ಶುರುವಾಯಿತು. ಅಷ್ಟರೊಳಗೆ ನವದೆಹಲಿ ಸೇರಿಬಿಟ್ಟಿದ್ದೆವು. ಹೀಗಾಗಿ ಯಾವುದೇ ರೀತಿಯ ಸಮಸ್ಯೆ ಆಗಲಿಲ್ಲ’ ಎಂದರು.

‘ಮಾನಸ ಸರೋವರಕ್ಕೆ ಹೋಗಬೇಕೆಂದರೆ ಮಾನಸಿಕ ಹಾಗೂ ದೈಹಿಕವಾಗಿ ಬಹಳ ಸದೃಢರಾಗಿ ಇರಬೇಕಾಗುತ್ತದೆ. ಮಾನಸ ಸರೋವರದ ಸಮೀಪ ಹೋಗುತ್ತಿದ್ದಂತೆ ಎಷ್ಟೋ ಜನರಿಗೆ ಉಸಿರಾಟದ ಸಮಸ್ಯೆ ಆಗುತ್ತದೆ. ಅಲ್ಲಿನ ಆಹಾರ ಸರಿ ಹೊಂದುವುದಿಲ್ಲ. ಎಲ್ಲಕ್ಕೂ ಒಗ್ಗಿಕೊಳ್ಳುವವರಿದ್ದರೆ ಪ್ರವಾಸ ಕೈಗೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಹೋಗದಿರುವುದೇ ಲೇಸು. ಹಣವಿದ್ದವರೂ ವಿಮಾನದ ಮೂಲಕ ಕಠ್ಮಂಡುವಿಗೆ ಹೋಗುತ್ತಾರೆ. ಅಲ್ಲಿಂದ ಹೆಲಿಕ್ಯಾಪ್ಟರ್‌ನಲ್ಲಿ ಮುಂದಿನ ಪ್ರಯಾಣ ಬೆಳೆಸುತ್ತಾರೆ. ಹೆಲಿಕ್ಯಾಪ್ಟರ್‌ಗಳು ನದಿ ಮಧ್ಯದಲ್ಲಿಯೇ ಇಳಿಯುತ್ತವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.