ADVERTISEMENT

ಕೋವಿಡ್ ಕರಿನೆರಳಲ್ಲಿ ಮಣ್ಣಿನ ಮಕ್ಕಳ ಜಾತ್ರೆ

ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ ನಾಳೆ; ಸರಳ ಆಚರಣೆಗೆ ಸಿದ್ಧತೆ

ಕೆ.ಸೋಮಶೇಖರ
Published 17 ಫೆಬ್ರುವರಿ 2022, 7:10 IST
Last Updated 17 ಫೆಬ್ರುವರಿ 2022, 7:10 IST
ಭಕ್ತರಿಲ್ಲದೇ ಕಳೆಗುಂದಿದ ಮೈಲಾರಲಿಂಗೇಶ್ವರ ದೇವಸ್ಥಾನ
ಭಕ್ತರಿಲ್ಲದೇ ಕಳೆಗುಂದಿದ ಮೈಲಾರಲಿಂಗೇಶ್ವರ ದೇವಸ್ಥಾನ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಸುಕ್ಷೇತ್ರ ಮೈಲಾರದಲ್ಲಿ ಫೆ. 18ರಂದು ಸರಳ ಕಾರಣಿಕ ಮಹೋತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆಗೆ ನಿರ್ಬಂಧ ವಿಧಿಸಿರುವ ಕಾರಣ ಮೈಲಾರ ಜಾತ್ರೆ ಸಂಭ್ರಮ ಕಳೆದುಕೊಂಡಿದೆ.

ಮೈಲಾರ ಜಾತ್ರೆ ‘ಮಣ್ಣಿನ ಮಕ್ಕಳ ಜಾತ್ರೆ’ ಎಂದೇ ಬಿಂಬಿತವಾಗಿದೆ. ವರ್ಷವಿಡೀ ದುಡಿದು ದಣಿದ ಕೃಷಿ ಕುಟುಂಬಗಳು ಎತ್ತಿನ ಬಂಡಿ, ಟ್ರ್ಯಾಕ್ಟರ್‌ನಲ್ಲಿ ಬಂದು ವಾರ ಕಾಲ ಸುಕ್ಷೇತ್ರದಲ್ಲೇ ವಾಸ್ತವ್ಯ ಹೂಡುವುದರಿಂದ ಮೈಲಾರ ಜಾತ್ರೆಯಲ್ಲಿ ಅಪ್ಪಟ ಗ್ರಾಮೀಣ ಸೊಗಡು ಮೇಳೈಸುತ್ತದೆ. ಆದರೆ, ಕಳೆದೆರಡು ವರ್ಷಗಳಿಂದ ಮಣ್ಣಿನ ಮಕ್ಕಳ ಜಾತ್ರೆಗೆ ಕೋವಿಡ್ ಕರಿ ನೆರಳು ಕವಿದಿದೆ.

ಭಾರತ ಹುಣ್ಣಿಮೆಯ ದಿನದಿಂದಲೇ ಸುಕ್ಷೇತ್ರದಲ್ಲಿ ಜಾತ್ರೆ ಕಳೆ ಕಟ್ಟುತಿತ್ತು. ಸಾಂಕ್ರಾಮಿಕ ರೋಗ ಭೀತಿಯಿಂದಾಗಿ ಹೊರಗಿನ ಭಕ್ತರು, ಸಾರ್ವಜನಿಕರಿಗೆ ನಿರ್ಬಂಧ ಹೇರಿರುವ ಕಾರಣ ಜಾತ್ರೆ ಕಳೆಗುಂದಿದೆ. ಸುಕ್ಷೇತ್ರದಲ್ಲಿ ಈಗ ಜಾತ್ರೆಯ ಸಂಭ್ರಮ ಇಲ್ಲ. ಭಕ್ತರ ಹರ್ಷೋದ್ಘಾರವಿಲ್ಲ. ಅಲ್ಲೀಗ ಬರೀ ದುಗುಡ ಮನೆ ಮಾಡಿದೆ.

ADVERTISEMENT

ಮೈಲಾರಲಿಂಗಸ್ವಾಮಿಯ ಕಾರಣಿಕ ಮಹೋತ್ಸವ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. 1904ರಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಹರಡಿದ್ದರಿಂದ ಆಗಲೂ ಮೈಲಾರ ಜಾತ್ರೆಗೆ ನಿರ್ಬಂಧ ಹೇರಲಾಗಿತ್ತು. ನಂತರ ವರ್ಷದಿಂದ ವರ್ಷಕ್ಕೆ ಮೈಲಾರ ಜಾತ್ರೆಯ ಸಂಭ್ರಮ ಹೆಚ್ಚುತ್ತಲೇ ಸಾಗಿತ್ತು.

ವಿಶಿಷ್ಟ ಪರಂಪರೆ: ಮೈಲಾರಲಿಂಗನ ಪರಂಪರೆ ದೇಶದಲ್ಲೇ ವಿಶಿಷ್ಟವಾಗಿದೆ. ರಾಜ್ಯದ ನಾನಾ ಕಡೆಗಳಲ್ಲಿ ಮೈಲಾರಲಿಂಗಸ್ವಾಮಿಯ ದೇವಸ್ಥಾನಗಳಿದ್ದರೂ ತಾಲ್ಲೂಕಿನ ಮೈಲಾರ ಸುಕ್ಷೇತ್ರವೇ ಸ್ವಾಮಿಯ ಮೂಲ ನೆಲೆಯಾಗಿದೆ.
ಕೋರಿ ಅಂಗಿ, ಕುಂಚಿಗೆ ಧರಿಸಿ, ಕೈಯಲ್ಲಿ ಡಮರುಗ ಭಂಡಾರದ ಬಟ್ಟಲು ಹಿಡಿದು ಧಾರ್ಮಿಕ ನೆಲೆಗಳನ್ನು ಹೊತ್ತು ತಿರುಗುವ ಗೊರವ ಪರಿವಾರ ಮೈಲಾರ ಜಾತ್ರೆಯ ಕೇಂದ್ರ ಬಿಂದುವಾಗಿದ್ದಾರೆ. ಇವರು ಇಲ್ಲದಿದ್ದರೆ ಜಾತ್ರೆಯ ವಿಧಿವಿಧಾನ, ಆಚರಣೆಗಳು ಪೂರ್ಣಗೊಳ್ಳುವುದಿಲ್ಲ.

ಕಾರಣಿಕದಲ್ಲಿ ಅಡಗಿದೆ ನಾಡಿನ ಭವಿಷ್ಯ: ಕಾರಣಿಕ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಗೂಡಾರ್ಥದಿಂದ ಕೂಡಿದ ಸ್ವಾಮಿಯ ನುಡಿಯು ಭವಿಷ್ಯವಾಣಿ ಆಗಿರಲಿದೆ ಎಂಬುದು ಭಕ್ತರ ನಂಬಿಕೆ.

ಭಾರತ ಹುಣ್ಣಿಮೆಯ ಮೂರನೇ ದಿನ ಸಂಜೆ ಮೈಲಾರದ ಡೆಂಕನ ಮರಡಿಯಲ್ಲಿ ಲಕ್ಷಾಂತರ ಭಕ್ತರ ಮಹಾಸಾಗರವೇ ನೆರೆದಿರುತ್ತದೆ. 11 ದಿನ ವ್ರತಾಚರಣೆಯಲ್ಲಿರುವ ಗೊರವಯ್ಯ ಧರ್ಮಕರ್ತರಿಂದ ಭಂಡಾರದ ಆಶೀರ್ವಾದ ಪಡೆದು ಬಿಲ್ಲು ಏರುತ್ತಾರೆ. ಗೊರವಯ್ಯನ ‘ಸದ್ದಲೇ’ ಉದ್ಗಾರಕ್ಕೆ ಭಕ್ತ ಪರಿಷೆ, ಜೀವ ಸಂಕುಲ ಸ್ತಬ್ಧಗೊಳ್ಳುತ್ತದೆ. ಕೌತುಕ ಸೃಷ್ಟಿಸುವ ಈ ಕ್ಷಣದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ ಮೊಳಗುತ್ತದೆ. ಅದನ್ನು ಈ ವರ್ಷದ ಕೃಷಿ, ರಾಜಕೀಯ, ವಾಣಿಜ್ಯ ಕ್ಷೇತ್ರಗಳಿಗೆ ತಾಳೆ ಹಾಕಿ ವಿಶ್ಲೇಷಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.