ಸಂಡೂರು: ಪ್ರತಿ ವರ್ಷ ಬೇಸಿಗೆಯ ಕೊನೆಯಲ್ಲಿ ಬಹುತೇಕ ಜಲಮೂಲಗಳು ಬತ್ತಿ ಹೋಗುತ್ತವೆ. ಆದರೆ, ತಾಲ್ಲೂಕಿನ ಹರಿಶಂಕರ ತೀರ್ಥ ಅದಕ್ಕೆ ಅಪವಾದ. ಅಲ್ಲಿ ಇದುವರೆಗೆ ಒಮ್ಮೆಯೂ ನೀರು ಬತ್ತಿಲ್ಲ. ದಿನದ 24 ಗಂಟೆಯೂ ನೀರು ಧುಮ್ಮಿಕ್ಕುತ್ತದೆ.
ಸಂಡೂರು–ಕುಮಾರಸ್ವಾಮಿ ದೇವಸ್ಥಾನದ ಮಾರ್ಗ ಮಧ್ಯದ ಸ್ವಾಮಿಮಲೈ ಅರಣ್ಯದಲ್ಲಿರುವ ಹರಿಶಂಕರ ತೀರ್ಥ ಹಚ್ಚ ಹಸಿರಿನ ವನರಾಶಿಯಲ್ಲಿದೆ. ಇಲ್ಲಿಬೆಟ್ಟದ ಅಂಚಿನಿಂದ ಬರುವ ನೀರು ನಂದಿ ಬಾಯಿಯಿಂದ ಕಿರು ಕಲ್ಯಾಣಿಗೆ ಬಂದು ಬೀಳುತ್ತದೆ. ನೀರಿನ ಹರಿವು ಸದಾ ಒಂದೇ ಸಮನಾಗಿರುತ್ತದೆ.
ಸಂಡೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇರದ ಕಾಲದಲ್ಲಿ ಹೆಚ್ಚಿನವರು ವಾಹನಗಳಲ್ಲಿ ಹರಿಶಂಕರಕ್ಕೆ ಬಂದು ನೀರು ತುಂಬಿಕೊಂಡು ಹೋಗುತ್ತಿದ್ದರು. ಈಗ ಅದು ನಿಂತಿದೆ. ದೇವಸ್ಥಾನಕ್ಕೆ ಬರುವವರು, ಬೆಟ್ಟದ ಮೇಲಿನ ವಿವಿಧ ಗಣಿ ಪ್ರದೇಶಗಳಿಗೆ ಹೋಗುವ ಕಾರ್ಮಿಕರು ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಪ್ರಾಣಿ–ಪಕ್ಷಿಗಳ ನೀರಿನ ದಾಹ ಕೂಡ ಈ ಸ್ಥಳ ತಣಿಸುತ್ತಿದೆ.
ಹರಿಶಂಕರ ತೀರ್ಥದಲ್ಲಿ ತೊಟ್ಟಿಯೊಂದನ್ನು ನಿರ್ಮಿಸಲಾಗಿದೆ. ಬೆಟ್ಟದ ವಿವಿಧ ಕಡೆಗಳಿಂದ ಹರಿದು ಬರುವ ನೀರು ಅಲ್ಲಿಗೆ ಹರಿದು ಬಂದು ಸೇರುವಂತೆ ಪೈಪ್‌ಲೈನ್ ಮಾಡಲಾಗಿದೆ. ಇಲ್ಲಿನ ನೀರಿನಲ್ಲಿ ಔಷಧೀಯ ಗುಣ ಇದೆ. ಈ ಕಾರಣಕ್ಕಾಗಿಯೂ ಕೆಲವರು ನೀರು ತೆಗೆದುಕೊಂಡು ಹೋಗುತ್ತಾರೆ.
‘ಸರಸ್ವತಿ, ಶತಾವರಿ, ತಾಮ್ರಶಿಖೆ, ಮಯೂರ ಶಿಖೆ ಮುಂತಾದ ಔಷಧೀಯ ಸಸ್ಯಗಳು ಇವೆ. ಇಂತಹ ಔಷಧೀಯ ಸಸ್ಯಗಳ ತಾಣದಲ್ಲಿ ಹರಿದು ಬರುವ ನೀರು ಕೂಡ ಔಷಧೀಯ ಗುಣವುಳ್ಳದ್ದಾಗಿದೆ’ ಎನ್ನುತ್ತಾರೆಪರಿಸರವಾದಿ ಮೂಲಿಮನಿ ಈರಣ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.