ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾದ ಮೊಟ್ಟೆ ಮೊತ್ತ

ಅಂಗನವಾಡಿ ಕೇಂದ್ರಗಳಿಗೆ ಒಂದು ತಿಂಗಳ ಜಮಾಕ್ಕೆ ಕೋಕ್

ಸಿ.ಶಿವಾನಂದ
Published 11 ಅಕ್ಟೋಬರ್ 2024, 7:17 IST
Last Updated 11 ಅಕ್ಟೋಬರ್ 2024, 7:17 IST
   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ 243 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 50ಕ್ಕೂ ಹೆಚ್ಚು ಕೇಂದ್ರಗಳಿಗೆ ಮೊಟ್ಟೆ ಖರೀದಿಗಾಗಿ ನೀಡುವ ಒಂದು ತಿಂಗಳ ಮೊತ್ತ ಪಾವತಿಯಾಗಿಲ್ಲ.

ಕೇಂದ್ರ ಒಂದಕ್ಕೆ ಅಂದಾಜು ₹5ಸಾವಿರ ಮೊತ್ತ ಬರಬೇಕಿದ್ದು, 50ಕೇಂದ್ರಗಳ ಒಂದು ತಿಂಗಳಿಗೆ ಲಕ್ಷಾಂತರ ರೂಪಾಯಿ ಮೊತ್ತ ಜಮಾ ಆಗಿಲ್ಲ. ಇದರಿಂದಾಗಿ ಏಪ್ರಿಲ್ ತಿಂಗಳಲ್ಲಿ ಮೊಟ್ಟೆ ಖರೀದಿಸಿದ ಮೊತ್ತ ಭರಿಸಲು ಕಾರ್ಯಕರ್ತೆಯರಿಗೆ ಹೊರೆಯಾಗಿ ಪರಿಣಮಿಸಿದೆ.

ಖರೀದಿಸಿದ ಕಾರ್ಯಕರ್ತೆಯರು ಗೌರವ ಧನದ ಹಣ ತೆತ್ತಬೇಕಾದ ಅನಿವಾರ್ಯತೆ ಉಂಟಾಗಿದೆ.
ತಾಲ್ಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೋಗುವ 3ರಿಂದ 6ವರ್ಷದ 8613 ಮಕ್ಕಳಿದ್ದರೆ, ಕೇಂದ್ರಕ್ಕೆ ಹೋಗದ 6ತಿಂಗಳಿಂದ 3ವರ್ಷದ ಒಳಗಿನ 6,281 ಮಕ್ಕಳಿದ್ದಾರೆ, 2050 ಗರ್ಭಿಣಿಯರು, 1708 ಬಾಣಂತಿಯರು ಇದ್ದಾರೆ.

ADVERTISEMENT

ಅಪೌಷ್ಠಿಕತೆಯ ಕೊರತೆ ನೀಗಿಸಲು ಸರ್ಕಾರ ಎಲ್ಲರಿಗೂ ಮೊಟ್ಟೆ ವಿತರಿಸುತ್ತಿದೆ, ಅದಕ್ಕಾಗಿ ಪ್ರತಿ ಮೊಟ್ಟೆಗೆ ₹6 ನೀಡುತ್ತಿದೆ. ಎಲ್ಲರಿಗೂ ಮೊಟ್ಟೆ ನೀಡಬೇಕು, ಮೊಟ್ಟೆ ಬೆಲೆ ಏರಿಕೆಯಾದರೂ ಸಮಿತಿ ಜವಬ್ದಾರಿಯಾಗಿರುತ್ತದೆ.

ಇದುವರೆಗೂ ಮೊಟ್ಟೆ ಮೊತ್ತ ಜಮೆಯಾಗುವ ಬಾಲವಿಕಾಸ ಸಮಿತಿ ಖಾತೆಗೆ ಇಲಾಖೆಯ ದಾಖಲೆಯಲ್ಲಿ ಏಪ್ರಿಲ್, ಜೂನ್, ಜುಲೈ ತಿಂಗಳ ಮೊತ್ತ ಬಿಡುಗಡೆ ಮಾಡಲಾಗಿದೆ. ಆದರೆ ಏಪ್ರಿಲ್ ತಿಂಗಳ ಮೊತ್ತಕ್ಕೆ ಕೋಕ್ ನೀಡಲಾಗಿದೆ.

ಕಡಿಮೆ ಮೊತ್ತ ಬಂದಿರುವ ಕಾರ್ಯಕರ್ತೆಯರು ಕಚೇರಿಗೆ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಲು ಹಿಂದೇಟು ಹಾಕುತ್ತಿದ್ದಾರೆ, ಮೇಲಧಿಕಾರಿಗಳು ತಮ್ಮ ಗುರಿಯಾಗಿಸುತ್ತಾರೆ ಎನ್ನುವ ಭಯ ಅವರನ್ನು ಕಾಡುತ್ತಿದೆ. ಕೆಲವು ಕೇಂದ್ರಗಳ ಕಾರ್ಯಕರ್ತೆಯರು ಹೆಸರಳೇಳದೆ ತಮಗಾದ ಅನ್ಯಾಯವನ್ನು ತೋಡಿಕೊಂಡರು.

‘ಗೌರವಧನದಿಂದ ಕುಟುಂಬದ ನಿರ್ವಹಣೆ ಮಾಡುತ್ತಿದ್ದೇವೆ, ಈಗ ಸಾವಿರಾರು ರೂಪಾಯಿ ಮೊಟ್ಟೆ ವಿತರಿಕರಿಗೆ ಭರಿಸಲು ಆಗದು, ಸಾಲ ಮಾಡಿ ಕೊಡಬೇಕು’ ಎಂದರು.

‘ಇಲಾಖೆಯ ಕಂಪ್ಯೂಟರ್ ದುರಸ್ತಿಯಲ್ಲಿದ್ದು, ಲೆಕ್ಕ ಮಾಡುವಾಗ ಗೊಂದಲ ಉಂಟಾಗಿದೆ. ಆದ್ದರಿಂದ ಕೆಲವರಿಗೆ ಕಡಿಮೆ ಮೊತ್ತ ಜಮೆಯಾಗಿದೆ, ಅದನ್ನು ಸರಿಪಡಿಸಲಾಗುವುದು’ ಎಂದು ಪ್ರಥಮ ದರ್ಜೆ ಸಹಾಯಕ ಮೊಹಮ್ಮದ್ ರಫಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.