ADVERTISEMENT

ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಅನಿವಾರ್ಯ: ಜೆ.ಎನ್.ಗಣೇಶ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 13:22 IST
Last Updated 20 ಜೂನ್ 2024, 13:22 IST
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದಲ್ಲಿ ಜೆಜೆಎಂ ಯೋಜನೆಯ ₹2.39 ಕೋಟಿ ವೆಚ್ಚದ  ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ್ ಭೂಮಿಪೂಜೆ ನೆರವೇರಿಸಿದರು
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದಲ್ಲಿ ಜೆಜೆಎಂ ಯೋಜನೆಯ ₹2.39 ಕೋಟಿ ವೆಚ್ಚದ  ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಜೆ.ಎನ್. ಗಣೇಶ್ ಭೂಮಿಪೂಜೆ ನೆರವೇರಿಸಿದರು   

ಕಂಪ್ಲಿ: ‘ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಅನಿವಾರ್ಯ’ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.

ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಜೆಜೆಎಂ ಯೋಜನೆಯ ₹2.39 ಕೋಟಿ ವೆಚ್ಚದ ದೇವಸಮುದ್ರ, ನಂ.10 ಮುದ್ದಾಪುರ, ಮೆಟ್ರಿ ಹಾಗೂ ಇತರೆ ಮೂರು ಗ್ರಾಮಗಳ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಪೈಪ್‍ಲೈನ್ ಸಂಪರ್ಕ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಹಲವು ಬಾರಿ ತೈಲ ಬೆಲೆ ಹೆಚ್ಚಳ ಮಾಡಿದ್ದು, ಹೋರಾಟ ಮಾಡುವ ನೈತಿಕತೆ ಕಳೆದುಕೊಂಡಿದೆ’ ಎಂದು ದೂರಿದರು.

‘₹20 ಕೋಟಿ ವೆಚ್ಚದಲ್ಲಿ ರಾಮಸಾಗರದಿಂದ ಪಟ್ಟಣದ ವಾಲ್ಮೀಕಿ ವೃತ್ತದವರೆಗಿನ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಸ್ಥಳೀಯ ಹಳೇ ಬಸ್‍ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು’ ಎಂದರು.

ADVERTISEMENT

ಜಿಲ್ಲೆಯಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ತಾವು ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ, ‘ಪಕ್ಷ ಜವಾಬ್ದಾರಿ ವಹಿಸಿದಲ್ಲಿ ನಿಭಾಯಿಸಲು ಸಿದ್ಧ’ ಎಂದು ಮಾರ್ಮಿಕವಾಗಿ ನುಡಿದರು.

ಬಳಿಕ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.

ಪ್ರಮುಖರಾದ ನಾಯಕರ ಮಾಯಮ್ಮ, ಪೂಜಾರಿ ಈರಮ್ಮ, ಕೆ. ನಾಗೇಶ, ಪವಾಡಿ ರೇಣುಕಮ್ಮ, ಗೌಡ್ರು ಅಂಜೀನಪ್ಪ, ಕೆ.ಷಣ್ಮುಖಪ್ಪ, ಜಿ.ಮರೇಗೌಡ, ಎಚ್.ಗುಂಡಪ್ಪ, ನಾಯಕರ ವೆಂಕೋಬ, ಕೋರಿ ಚನ್ನಬಸವ, ಪಿ. ಪಂಪಾಪತಿ, ಸೂಗೂರು ಶೇಖರಪ್ಪ, ಕುರಿ ರಾಮಯ್ಯ, ನೆಣ್ಕಿ ಗಿರೀಶ, ದಂಡಿನದೊಡ್ಡ ಬಸವ, ದೊಡ್ಡ ನಾಯಕ, ಪ್ರಶಾಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.