ADVERTISEMENT

ಆನಂದ್‌ಸಿಂಗ್‌, ಸಂದೀಪ್‌ಸಿಂಗ್‌ರಿಂದ ಜೀವ ಬೆದರಿಕೆ–ಶಾಸಕ ಗಣೇಶ್‌ ಪೋಸ್ಟ್‌ ವೈರಲ್‌

ಘಟನೆ ಕುರಿತು ಮಾಹಿತಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 11:40 IST
Last Updated 24 ಜನವರಿ 2019, 11:40 IST
   

ಹೊಸಪೇಟೆ: ಶಾಸಕ ಆನಂದ್‌ ಸಿಂಗ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಅವಾಚ್ಯ ಶಬ್ದಗಳಿಂದ ಕೂಡಿರುವ ಪೋಸ್ಟ್‌ ವೈರಲ್‌ ಆಗಿದೆ.

‘ಆನಂದ್‌ ಸಿಂಗ್‌ ಹಾಗೂ ಅವರ ಅಳಿಯ ಸಂದೀಪ್‌ ಸಿಂಗ್‌ ಅವರಿಂದ ನನಗೆ ಜೀವ ಬೆದರಿಕೆ ಇದೆ. ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಕಂಪ್ಲಿ ಕ್ಷೇತ್ರದ ಜನತೆ ಅದಕ್ಕೆ ಕಿವಿಗೊಡಬಾರದು. ಕ್ಷೇತ್ರದ ಅಭಿವೃದ್ಧಿಯೊಂದೆ ನನ್ನ ಗುರಿ. ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗಲ್ಲ’ ಎಂದು ಬರೆದುಕೊಂಡಿದ್ದಾರೆ.

‘ಜ. 19ರಂದು ರಾತ್ರಿ 11ಗಂಟೆಗೆ ಆನಂದ್‌ ಸಿಂಗ್‌ ಅವರೇ ನನ್ನನ್ನು ಅವರ ರೂಂಗೆ ಕರೆದಿದ್ದರು. ತಡರಾತ್ರಿ 2.30ರ ವರೆಗೆ ಅವರ ಜತೆ ನಾನು ಪಾರ್ಟಿ ಮಾಡಿದ್ದು ನಿಜ. ಈ ವೇಳೆ ಆನಂದ್‌ ಸಿಂಗ್‌ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ್ದಾರೆ. ಈ. ತುಕಾರಾಂ ಅವರನ್ನು ಸಚಿವರಾಗಿ ಮಾಡಲು ದೆಹಲಿಗೆ ಹೋಗುತ್ತೀಯಾ. ಕಂಪ್ಲಿಯಲ್ಲಿ ನಿನ್ನನ್ನು ಮುಗಿಸುತ್ತೇನೆ ಎಂದು ಜೋರಾಗಿ ನನ್ನ ಎದೆಗೆ ಒದ್ದರು. ಎದೆಗೆ ನೋವಾಗಿದ್ದರಿಂದ ನಾನು ಅಲ್ಲಿಂದ ನನ್ನ ರೂಂಗೆ ಹೋದೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಅಲ್ಲಿಗೂ ಬಂದ ಆನಂದ್‌ ಸಿಂಗ್‌ ಕೈಯಲ್ಲಿ ಹೂಕುಂಡ ಹಿಡಿದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಬಲವಂತವಾಗಿ ನನ್ನನ್ನು ಶಾಸಕ ಭೀಮಾ ನಾಯ್ಕ ಅವರ ರೂಂಗೆ ಕರೆದುಕೊಂಡು ಹೋದರು. ಈ ವೇಳೆ ಭೀಮಾ ನಾಯ್ಕನನ್ನು ನಿಂದಿಸಿ, ಹಲ್ಲೆ ನಡೆಸಲು ಮುಂದಾದಾಗ ನಾನು ಮಧ್ಯ ಪ್ರವೇಶಿಸಿ ಸಮಾಧಾನಗೊಳಿಸಲು ಯತ್ನಿಸಿದೆ. ಆಗ ನನ್ನ ಕುಟುಂಬ ಸದಸ್ಯರಿಗೆ ಬೈಯ್ದು ಜಾತಿ ನಿಂದನೆ ಮಾಡಿದರು. ನಂತರ ನನ್ನ ಮೇಲೆ ಹಲ್ಲೆ ನಡೆಸಿದರು. ನಂತರ ನಾನು ಅವರ ಮೇಲೆ ಕೈಯ ಮಾಡಿದೆ. ಅದಕ್ಕೆ ಭೀಮಾ ನಾಯ್ಕ, ವಿಶ್ವ ಹಾಗೂ ಶರಣಪ್ಪ ಅವರು ಸಾಕ್ಷಿ’ ಎಂದು ಹೇಳಿಕೊಂಡಿದ್ದಾರೆ.

‘ಘಟನೆಯಲ್ಲಿ ಇಬ್ಬರ ತಪ್ಪು ಕೂಡ ಇದೆ. ಒಂದುವೇಳೆ ನಾನು ಆನಂದ್‌ ಸಿಂಗ್‌ ಅವರಿಗೆ ಹೊಡೆಯಬೇಕು ಎಂಬ ಉದ್ದೇಶ ಹೊಂದಿದ್ದರೆ ಎರಡ್ಮೂರು ತಾಸು ಅವರ ರೂಂನಲ್ಲಿದ್ದಾಲೇ ಹೊಡೆಯುತ್ತಿದ್ದೆ’ ಎಂದು ಸಮಜಾಯಿಷಿ ನೀಡಿದ್ದಾರೆ.

J.N ಗಣೇಶ...#kampli #congress #kpcc #karnataka #media #justice ಎಂಬ ಸಾಲುಗಳೊಂದಿಗೆ ಪೋಸ್ಟ್‌ ಕೊನೆಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.