ADVERTISEMENT

ಜನತಾ ನ್ಯಾಯಾಲಯದಲ್ಲಿ ಆನಂದ್‌ ಸಿಂಗ್‌ ‘ಅರ್ಹ’

ರಾಜೀನಾಮೆಗೂ ಸೈ, ಪಕ್ಷಾಂತರಕ್ಕೂ ಸೈ ಎಂದ ವಿಜಯನಗರದ ಮತದಾರರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ಡಿಸೆಂಬರ್ 2019, 19:31 IST
Last Updated 9 ಡಿಸೆಂಬರ್ 2019, 19:31 IST
ಉಪಚುನಾವಣೆಯಲ್ಲಿ ಗೆದ್ದ ನಂತರ ಆನಂದ್‌ ಸಿಂಗ್‌ ಅವರು ಹೊಸಪೇಟೆಯಲ್ಲಿ ಕಾಲ್ನಡಿಗೆಯಲ್ಲಿ ಓಡಾಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು
ಉಪಚುನಾವಣೆಯಲ್ಲಿ ಗೆದ್ದ ನಂತರ ಆನಂದ್‌ ಸಿಂಗ್‌ ಅವರು ಹೊಸಪೇಟೆಯಲ್ಲಿ ಕಾಲ್ನಡಿಗೆಯಲ್ಲಿ ಓಡಾಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು   

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಆನಂದ್‌ ಸಿಂಗ್‌ ಗೆಲುವು ಸಾಧಿಸಿದ್ದಾರೆ. ಸ್ಪೀಕರ್‌ ಹಾಗೂ ಸುಪ್ರೀಂಕೋರ್ಟ್‌ನಿಂದ ಅನರ್ಹರಾಗಿದ್ದ ಅವರಿಗೆ ಜನತಾ ನ್ಯಾಯಾಲಯ ಈ ಮೂಲಕ ಅರ್ಹಗೊಳಿಸಿ, ವಿಧಾನಸಭೆಗೆ ಕಳುಹಿಸಿದೆ.

ಅಷ್ಟೇ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಪಕ್ಷಾಂತರ ಮಾಡಿರುವ ಆನಂದ್‌ ಸಿಂಗ್‌ ಅವರ ಕ್ರಮ ಕೂಡ ಸರಿಯಾದುದು ಎಂಬುದನ್ನು ಈ ಮೂಲಕ ಜನ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ.

ಜಿಂದಾಲ್‌ಗೆ ಸರ್ಕಾರ ಭೂ ಪರಭಾರೆ ಮಾಡದಂತೆ ಒತ್ತಾಯಿಸಿ ಸಿಂಗ್‌ ಜುಲೈನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಬಳಿಕ ಸ್ಪೀಕರ್‌ ಅವರಿಂದ ಅನರ್ಹಗೊಂಡಿದ್ದರು. ಸುಪ್ರೀಂಕೋರ್ಟ್‌ ಕೂಡ ಅದನ್ನು ಎತ್ತಿ ಹಿಡಿದಿತ್ತು. ಆದರೆ, ಕೋರ್ಟ್‌ ಅಂತಿಮ ನಿರ್ಧಾರ ಮತದಾರರಿಗೆ ಬಿಟ್ಟಿತ್ತು. ‘ಆನಂದ್‌ ಸಿಂಗ್ ಮಾಡಿರುವುದೇ ಸರಿ ಎಂಬಂತೆ’ ಈಗ ಮತದಾರರು ತೀರ್ಪು ಕೊಟ್ಟಿದ್ದಾರೆ.

ADVERTISEMENT

ಬಿಜೆಪಿ ಜಯ, ಕಾಂಗ್ರೆಸ್‌ ಸೋಲಿಗೆ ಕಾರಣವೇನು?:

‘ಆನಂದ್‌ ಸಿಂಗ್‌ ಅವರು ಅಧಿಕಾರದ ಆಸೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿದ್ದಾರೆ ಅವರನ್ನು ಮತದಾರರು ಕಾಯಂ ಆಗಿ ಅನರ್ಹಗೊಳಿಸಬೇಕು’ ಎಂದು ಅವರ ವಿರೋಧಿಗಳು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲ, ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದರ ಹಿಂದೆ ಅವರ ಕೈವಾಡವಿದೆ. ಅಕ್ರಮ ಸಂಪತ್ತಿನಿಂದ ಭವ್ಯ ಬಂಗಲೆ, ಮಗನ ಅದ್ದೂರಿ ಮದುವೆ ಮಾಡಿದ್ದಾರೆ ಎಂದೂ ಆರೋಪಿಸಿದ್ದರು. ನೀತಿ ಸಂಹಿತೆ ನಡುವೆಯೇ ಗೃಹ ಪ್ರವೇಶ ಹಾಗೂ ಮಗನ ಮದುವೆ ಆಯೋಜಿಸಿದ್ದರಿಂದ ಅದು ವ್ಯಾಪಕ ಟೀಕೆಗೂ ಗುರಿಯಾಗಿತ್ತು. ಆದರೆ, ಚುನಾವಣೆಯಲ್ಲಿ ಅದ್ಯಾವುದೂ ಅವರ ವಿರುದ್ಧ ಕೆಲಸ ಮಾಡಿದಂತೆ ಕಾಣುತ್ತಿಲ್ಲ.

ಆನಂದ್‌ ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾದಾಗ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಮುಖಂಡರಾದ ಎಚ್‌.ಆರ್‌. ಗವಿಯಪ್ಪ, ರಾಣಿ ಸಂಯುಕ್ತಾ ಪ್ರಚಾರದಿಂದ ದೂರ ಉಳಿದರು. ಕವಿರಾಜ್‌ ಅರಸ್‌ ಬಂಡಾಯವೆದ್ದು, ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಪಕ್ಷದಲ್ಲಿ ಆಂತರಿಕವಾಗಿಯೂ ಬೇಗುದಿ ಇತ್ತು.

ಈ ವಿಷಯವನ್ನು ಮನಗಂಡೇ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಕ್ಷೇತ್ರದಲ್ಲಿಯೇ ತಳವೂರಿ ಕಾರ್ಯತಂತ್ರ ರೂಪಿಸಿದರು. ಅವರಿಗೆ ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್‌, ರಾಜುಗೌಡ, ಬಸವರಾಜ ಧಡೇಸಗೂರ ಸೇರಿದಂತೆ ಇತರೆ ಮುಖಂಡರು ಸಾಥ್‌ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ ಸೇರಿದಂತೆ ಡಜನ್‌ಗೂ ಹೆಚ್ಚಿನ ಪಕ್ಷದ ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು, ಬಿಜೆಪಿ ಪರವಾದ ಅಲೆ ಸೃಷ್ಟಿಸಿದರು. ವೈಯಕ್ತಿಕ ವರ್ಚಸ್ಸಿನ ಜತೆಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸಿಂಗ್‌ ಕೊನೆಯ ಕ್ಷಣದ ವರೆಗೆ ಕಾರ್ಯತಂತ್ರ ಬದಲಿಸುತ್ತ ಬಂದರು. ಚುನಾವಣೆಯ ಹೊಸ್ತಿಲಲ್ಲಿ ಏತ ನೀರಾವರಿ ಯೋಜನೆಗೆ ಮಂಜೂರು ಮಾಡಿಸಿಕೊಂಡು ಬಂದರು. ‘ಗೆದ್ದರೆ ವಿಜಯನಗರ ಜಿಲ್ಲೆ ಮಾಡುವೆ’ ಎಂದು ಮತದಾರರಿಗೆ ಕೊಟ್ಟ ಭರವಸೆಯೂ ಕೆಲಸ ಮಾಡಿದ್ದು, ಜಯದ ದಡ ಸೇರಲು ಸಹಾಯವಾಯಿತು. ಚುನಾವಣೆ ಗೆಲ್ಲಲು ಬಿಜೆಪಿ, ಅಧಿಕಾರ ದುರ್ಬಳಕೆ, ಹಣದ ಹೊಳೆ ಹರಿಸಿದೆ ಎಂಬ ಆರೋಪವೂ ಇದೆ.

ಆನಂದ್‌ ಸಿಂಗ್ ವಿರುದ್ಧ ವಿರೋಧಿ ಅಲೆಯಿದ್ದರೂ ಅದನ್ನು ಕಾಂಗ್ರೆಸ್‌ ಸರಿಯಾಗಿ ಬಳಸಿಕೊಂಡು ಪ್ರಚಾರ ನಡೆಸುವಲ್ಲಿ ವಿಫಲವಾಯಿತು. ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಪರ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಪ್ರಚಾರ ಕೈಗೊಂಡು, ಪಕ್ಷದ ಪರವಾದ ಅಲೆ ಸೃಷ್ಟಿಸಿದ್ದರು. ಆದರೆ, ಕೊನೆಯ ವರೆಗೆ ಅದನ್ನು ಉಳಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಸ್ಥಳೀಯವಾಗಿ ಪಕ್ಷದ ಮುಖಂಡರಲ್ಲಿ ಸಮನ್ವಯದ ಕೊರತೆಯೂ ಕಂಡು ಬಂತು. ಕೊನೆಯ ಕ್ಷಣದಲ್ಲಿ ಅನೇಕ ಮುಖಂಡರು ಪಕ್ಷಕ್ಕೆ ಕೈಕೊಟ್ಟು ದೂರ ಹೋದರೂ ಎಂಬ ಮಾತುಗಳು ಕೇಳಿ ಬಂದಿವೆ.

ಘೋರ್ಪಡೆಯವರು ‘ಹೊರಗಿನವರು’ ಎಂಬ ಕಾರಣಕ್ಕಾಗಿ ಪಕ್ಷದ ಅನೇಕ ಮುಖಂಡರು ಅವರಿಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ಕೊಡಲಿಲ್ಲ. ಒಂದುವೇಳೆ ಘೋರ್ಪಡೆಯವರು ಗೆದ್ದರೆ ತಮ್ಮ ರಾಜಕೀಯ ಭವಿಷ್ಯ ಮಂಕಾಗಬಹುದು ಎಂಬ ಭಯವೇ ಅದಕ್ಕೆ ಕಾರಣ. ಬಿಜೆಪಿಯಂತೆ ಕಾಂಗ್ರೆಸ್‌ ಸಂಘಟಿತ, ಪರಿಣಾಮಕಾರಿ ಪ್ರಚಾರ ಮಾಡದ ಕಾರಣ ಅಂತಿಮವಾಗಿ ಅದು ಸೋಲುಂಡಿದೆ. ಇಷ್ಟೆಲ್ಲದರ ನಡುವೆಯೂ ಆ ಪಕ್ಷಕ್ಕೆ ತನ್ನದೇ ಆದ ಭದ್ರ ಮತ ಬ್ಯಾಂಕ್‌ ಇದೆ ಎಂಬುದು ಚುನಾವಣೆಯಲ್ಲಿ ಸಾಬೀತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.