ಹೊಸಪೇಟೆ: ನಗರದ ಚಿತ್ತವಾಡ್ಗಿಯಲ್ಲಿನ ವಿನೋಬಾ ಭಾವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಒ) ಪಿ. ಸುನಂದಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ನೂರು ವರ್ಷದ ಶಾಲೆಗೆ ನೂರೆಂಟು ವಿಘ್ನ’ ಶೀರ್ಷಿಕೆ ಅಡಿ ಗುರುವಾರ (ಜ.21) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಕಿಡಿಗೇಡಿಗಳು ಶಾಲೆಯ ಪರಿಸರದಲ್ಲಿ ಮದ್ಯಪಾನ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳನ್ನು ನಡೆಸಿ, ಇಡೀ ಪರಿಸರ ಹೊಲಸು ಮಾಡುತ್ತಿದ್ದಾರೆ. ಕಿಟಕಿ, ಬಾಗಿಲು ಒಡೆಯುತ್ತಿದ್ದಾರೆ. ದಾಖಲೆಗಳನ್ನು ಹಾಳುಗೆಡವುತ್ತಿದ್ದಾರೆ ಎಂದು ವರದಿ ಮೂಲಕ ಬೆಳಕು ಚೆಲ್ಲಲಾಗಿತ್ತು.
ಪತ್ರಿಕೆಯಲ್ಲಿ ಬಂದಿರುವ ವರದಿ ನೋಡಿ ಭೇಟಿ ನೀಡಿದ ಎಸಿ, ಬಿಒ ಅವರು ಶಾಲೆಯ ಪರಿಸರದಲ್ಲಿ ಓಡಾಡಿ ಪರಿಶೀಲನೆ ನಡೆಸಿದರು. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
‘ಉಪವಿಭಾಗಾಧಿಕಾರಿ ಸೂಚನೆ ಮೇರೆಗೆ ಚಿತ್ತವಾಡ್ಗಿ ಪೊಲೀಸ್ ಠಾಣೆಗೆ ದೂರು ಕೊಡಲಾಗಿದೆ. ಅವರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಭರವಸೆ ಕೊಟ್ಟಿದ್ದಾರೆ’ ಎಂದು ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ರತ್ನಮ್ಮ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.