ಹೊಸಪೇಟೆ: ಪ್ರಾಣಿಗಳಲ್ಲೂ ಕೊರೊನಾ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಮಲಾಪುರ ಸಮೀಪದಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಮಾ. 15ರಂದೇ ಸಾರ್ವಜನಿಕರ ಪ್ರವೇಶವನ್ನು ಉದ್ಯಾನಕ್ಕೆ ನಿರ್ಬಂಧಿಸಲಾಗಿತ್ತು. ಈಗಲೂ ಅದು ಮುಂದುವರೆದಿದೆ. 149 ಹೆಕ್ಟೇರ್‌ನಲ್ಲಿ ವಿಸ್ತರಿಸಿಕೊಂಡಿರುವ ಉದ್ಯಾನದಲ್ಲಿ ಅಧಿಕಾರಿ ವರ್ಗ ಸೇರಿದಂತೆ ಒಟ್ಟು 32 ಜನ ಕೆಲಸ ನಿರ್ವಹಿಸುತ್ತಾರೆ. ಸಮೀಪದ ಕಮಲಾಪುರದಿಂದ ಉದ್ಯಾನಕ್ಕೆ ಬರುವ ಸಿಬ್ಬಂದಿ ವರ್ಗಕ್ಕೆ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಸೃಷ್ಟಿಸಿ ಅವರನ್ನು ಕರೆತರಲಾಗುತ್ತಿದೆ.
ಉದ್ಯಾನಕ್ಕೆ ಬಂದ ನಂತರ ಎಲ್ಲರನ್ನೂ ಕಡ್ಡಾಯವಾಗಿ ಆರೊಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸ್ಯಾನಿಟೈಸರ್‌ನಿಂದ ಕೈತೊಳೆದುಕೊಂಡ ನಂತರ ಕೈಗವಸು, ಮುಖಗವಸು ಧರಿಸಿಕೊಂಡು ಕೆಲಸಕ್ಕೆ ಹೋಗುತ್ತಿದ್ದಾರೆ. ಎಲ್ಲರಿಗೂ ಪ್ರಾಣಿಗಳ ಮನೆಗಳಿಂದ ದೂರ ಇಡಲಾಗಿದೆ. ದೂರದಿಂದಲೇ ಅವುಗಳ ಚಲನವಲನ, ನಡವಳಿಕೆ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
ಸದ್ಯ 5 ಹುಲಿ, 4 ಸಿಂಹ, 6 ಚಿರತೆ, ತಲಾ ನಾಲ್ಕು ಹೈನಾ, ಗುಳ್ಳೇನರಿಗಳು, ಎರಡು ತರಹದ ಮಂಗಗಳು, ಇನ್ನೂರಕ್ಕೂ ಅಧಿಕ ಜಿಂಕೆ, ಸಾಂಬಾರ್ ಹಾಗೂ ಕೃಷ್ಣಮೃಗಗಳಿವೆ. ಅವುಗಳನ್ನು ಇರಿಸಿರುವ ಜಾಗದ ಸುತ್ತಲೂ ನಿತ್ಯ ಔಷಧ ಸಿಂಪಡಿಸಲಾಗುತ್ತಿದೆ. ಬಿಸಿ ನೀರಿನಲ್ಲಿ ತೊಳೆದ ಬಳಿಕ ದೂರದಿಂದಲೇ ಮಾಂಸ, ಹಣ್ಣು ಕೊಡಲಾಗುತ್ತಿದೆ.
‘ಕೆಲ ದೇಶಗಳಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಕೇಂದ್ರ ಮೃಗಾಲಯ ಪ್ರಾಧಿಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅದರ ಪ್ರಕಾರ ಈಗಾಗಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿತ್ಯ ಎಲ್ಲಾ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಯಾರಲ್ಲಾದರೂ ರೋಗದ ಗುಣಲಕ್ಷಣಗಳು ಕಂಡು ಬಂದರೆ ಅಂತಹವರಿಗೆ ರಜೆ ಕೊಟ್ಟು ವಾಪಸ್ ಕಳುಹಿಸಿಕೊಡಲಾಗುತ್ತಿದೆ’ ಎಂದು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಂ. ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಮ್ಮ ಸಿಬ್ಬಂದಿ ವಾಸಿಸುವ ಪ್ರದೇಶದಲ್ಲಿ ಯಾರಾದರೂ ಕ್ವಾರಂಟೈನ್‌ನಲ್ಲಿದ್ದರೆ, ಸೋಂಕು ದೃಢಪಟ್ಟರೆ ಅಂತಹವರಿಗೆ ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ. ಎಲ್ಲೆಲ್ಲಿ ಸೋಂಕಿತರಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದರೂ ತಿಳಿಸಲು ಸುಚಿಸಲಾಗಿದೆ. ನಮ್ಮ ಸಿಬ್ಬಂದಿ ಹೊರತುಪಡಿಸಿ ಯಾರಿಗೂ ಒಳಬಿಡುತ್ತಿಲ್ಲ’ ಎಂದು ಮಾಹಿತಿ ನೀಡಿದರು.
*
ಉದ್ಯಾನಕ್ಕೆ ಬರುವ ಪ್ರತಿಯೊಂದು ವಸ್ತು, ವಾಹನಕ್ಕೆ ಔಷಧ ಸಿಂಪಡಿಸಲಾಗುತ್ತಿದೆ. ತಜ್ಞ ವೈದ್ಯರು ಪ್ರಾಣಿಗಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ.
–ಎನ್.ಎಂ. ಕಿರಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.