ADVERTISEMENT

ವಿಜಯನಗರ | ಗುಣಮುಖವಾಗಿ ಹಾರಿದ ರಣಹದ್ದು

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 14:41 IST
Last Updated 12 ಜನವರಿ 2023, 14:41 IST
ಗುಣಮುಖವಾಗಿ ಆಕಾಶಕ್ಕೆ ಹಾರಿದ ರಣಹದ್ದು
ಗುಣಮುಖವಾಗಿ ಆಕಾಶಕ್ಕೆ ಹಾರಿದ ರಣಹದ್ದು   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಚಿಕಿತ್ಸೆ ಪಡೆದು, ಗುಣಮುಖಗೊಂಡ ಅಪರೂಪದ ಯುರೋಪಿಯನ್‌ ‘ಗ್ರಿಫನ್‌’ ರಣಹದ್ದು ಗುರುವಾರ ನಭದಲ್ಲಿ ಹಾರಿ ಹೋಯಿತು.

ತಾಲ್ಲೂಕಿನ ಇಂಗಳಗಿ ಸಮೀಪದ ಬೆಟ್ಟದ ಮೇಲೆ ತೆಗೆದುಕೊಂಡು ಹೋಗಿ, ಪೆಟ್ಟಿಗೆಯಿಂದ ಹೊರಬಿಟ್ಟಾಗ ಸುಮಾರು ಅರ್ಧಗಂಟೆ ಓಡಾಡಿತು. ಅನಂತರ ಉತ್ತರ ದಿಕ್ಕಿನತ್ತ ಹಾರಿ ಹೋಯಿತು.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ಕಿರಣ್ ಕುಮಾರ್‌, ತಜ್ಞ ಪಶುವೈದ್ಯೆ ಡಾ.ವಾಣಿ, ವನ್ಯಜೀವಿ ಸಂಶೋಧಕ ಸಮದ್ ಕೊಟ್ಟೂರು, ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ ಹಾಗೂ ಮೃಗಾಲಯದ ಸಿಬ್ಬಂದಿ ಹಾಜರಿದ್ದರು.

ADVERTISEMENT

ಡಿಸೆಂಬರ್‌ ಎರಡನೇ ವಾರ ನಗರದ ರಾಣಿಪೇಟೆಯಲ್ಲಿ ರಣಹದ್ದು ಅಸ್ವಸ್ಥಗೊಂಡು ಬಿದ್ದಿತ್ತು. ಬಳಿಕ ಶಿವಶಂಕರ ಬಣಗಾರ ಹಾಗೂ ಅಲ್ಲಿನ ಮಕ್ಕಳು ಸೇರಿಕೊಂಡು ಉಪಚರಿಸಿ, ಬಳಿಕ ವಾಜಪೇಯಿ ಉದ್ಯಾನಕ್ಕೆ ತಲುಪಿಸಿದರು. ಮೃಗಾಲಯದ ಪಶುವೈದ್ಯೆ ಡಾ.ವಾಣಿ ರಣಹದ್ದನ್ನು ಪರೀಕ್ಷಿಸಿ, ಅತಿಯಾದ ನಿರ್ಜಲೀಕರಣದಿಂದ ಬಳಲಿದೆ ಎಂದು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಹಾಗೂ ಆಹಾರೋಪಚಾರ ಮಾಡಿದ್ದರಿಂದ ಗುಣಮುಖವಾಯಿತು.

ಉತ್ತರ ಭಾರತದಲ್ಲಿ ಸರ್ವೇ ಸಾಮಾನ್ಯವಾದ ಈ ರಣಹದ್ದುಗಳು ದಕ್ಷಿಣ ಭಾರತಕ್ಕೆ ಬಂದಾಗ ಕೆಲವೊಮ್ಮೆ ನಿರ್ಜಲೀಕರಣದಿಂದ ಬಸವಳಿದು ನೆಲಕ್ಕೆ ಬೀಳುತ್ತವೆ. ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಇಂತಹ ರಣಹದ್ದನ್ನು ಸಂರಕ್ಷಿಸಿ, ಚಿಕಿತ್ಸೆ ನೀಡಿ ಮರಳಿ ಬಿಡುಗಡೆಗೊಳಿಸಿದ ಉದಾಹರಣೆಗಳಿವೆ ಎಂದು ಸಮದ್ ಕೊಟ್ಟೂರು ತಿಳಿಸಿದರು.

ಈ ರಣಹದ್ದಿನ ಕಾಲಿಗೆ ವಿಶೇಷವಾದ ಗುರುತಿನ ನೀಲಿ ಬಣ್ಣದ ಉಂಗುರ ಹಾಕಲಾಗಿದ್ದು ಅದರ ಮೇಲೆ ಇಂಗ್ಲಿಷ್‌ ಅಕ್ಷರ ಬರೆಯಲಾಗಿದೆ. ಅದರ ಆಧಾರದ ಮೇಲೆ ಈ ರಣಹದ್ದು ಹೊಸಪೇಟೆಯ ಪ್ರದೇಶಕ್ಕೆ ಬಂದಿತ್ತು ಎಂದು ತಿಳಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.