ADVERTISEMENT

ಹೊಸಪೇಟೆ | ಡಿಸೆಂಬರ್ 28,29ರಂದು ಆಟೊ ಯೂನಿಯನ್‌ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 14:08 IST
Last Updated 25 ಡಿಸೆಂಬರ್ 2019, 14:08 IST

ಹೊಸಪೇಟೆ: ‘ದುಬಾರಿ ದಂಡ ವಿಧಿಸುವ ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಹಾಗೂ ಈ ಕುರಿತು ಆಟೊ ಚಾಲಕರಲ್ಲಿ ಅರಿವು ಮೂಡಿಸಿ, ಹೋರಾಟ ತೀವ್ರಗೊಳಿಸಲು ಡಿ. 28,29ರಂದು ನಗರದಲ್ಲಿ ಫೆಡರೇಶನ್‌ ಆಫ್‌ ಕರ್ನಾಟಕ ಆಟೊರಿಕ್ಷಾ ಡ್ರೈವರ್ಸ್‌ ಯೂನಿಯನ್‌ ಎರಡನೇ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ಕೆ.ಎಂ. ಸಂತೋಷ್‌ ಕುಮಾರ್‌ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಡಿ. 28ರಂದು ಆಟೊ ಚಾಲಕರಿಂದ ಮೆರವಣಿಗೆ ನಡೆಯಲಿದೆ. ಎಲ್ಲಾ ಆಟೊಗಳನ್ನು ಅಲಂಕರಿಸಿ, ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಗುವುದು. ಬಳಿಕ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಫೆಡರೇಶನ್‌ ಅಧ್ಯಕ್ಷ ಮೀನಾಕ್ಷಿ ಸುಂದರಂ, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ಪಾಲ್ಗೊಳ್ಳುವರು’ ಎಂದು ಮಾಹಿತಿ ನೀಡಿದರು.

‘ಡಿ. 29ರಂದು ನಗರದ ಮಾರ್ಕಂಡೇಶ್ವರ ಕಲ್ಯಾಣ ಮಂಟಪದಲ್ಲಿ ಫೆಡರೇಶನ್‌ ಪ್ರತಿನಿಧಿಗಳ ಸಭೆ ಜರುಗಲಿದೆ. ಈಗಾಗಲೇ ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ. ಜ. 1ರಿಂದ ಎಲ್ಲಾ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಅದರ ವಿರುದ್ಧ ಹೋರಾಟ ನಡೆಸಲು ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಏಕಮುಖ ಮಾರ್ಗದಲ್ಲಿ ವಿರುದ್ಧ ದಿಕ್ಕಿಗೆ ಸಂಚರಿಸುವುದು, ಪಾರ್ಕಿಂಗ್‌ ಇಲ್ಲದ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಸಣ್ಣ ಪುಟ್ಟ ತಪ್ಪು ಎಸಗಿದರೆ ಚಾಲನಾ ಪರವಾನಗಿ ಪತ್ರ ರದ್ದುಗೊಳಿಸುವುದು, ಆರು ತಿಂಗಳು ಜೈಲು ಶಿಕ್ಷೆ ಕಾಯ್ದೆ ಒಳಗೊಂಡಿದೆ. ಅಷ್ಟೇ ಅಲ್ಲ, ಒಂದುವೇಳೆ ದುಬಾರಿ ದಂಡ ಭರಿಸಲು ಆಗದಿದ್ದರೆ ಸರ್ಕಾರಿ ಕಚೇರಿಗಳಲ್ಲಿ ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ಸೇರಿದಂತೆ ಸಮುದಾಯ ಸೇವೆ ಮಾಡಬೇಕಾಗುತ್ತದೆ. ಈ ನಿಯಮಗಳನ್ನು ಸಡಿಲಗೊಳಿಸಬೇಕು. ಅವುಗಳು ಶೋಷಣೆಯಿಂದ ಕೂಡಿವೆ’ ಎಂದರು.

‘25 ಕಿ.ಮೀ ವ್ಯಾಪ್ತಿಯೊಳಗೆ ಸಂಚರಿಸಲು ಎಲ್ಲಾ ಆಟೊ ಚಾಲಕರು ಅನುಮತಿ ಪಡೆದುಕೊಂಡಿದ್ದಾರೆ. ಆದರೆ, ಏನೇನೋ ಕಾರಣಗಳನ್ನು ನೀಡಿ ಹಂಪಿ ಸುತ್ತಮುತ್ತ ಆಟೊಗಳನ್ನು ಓಡಿಸದಂತೆ ಹುನ್ನಾರ ನಡೆಸಲಾಗುತ್ತಿದೆ. ನಿರ್ಬಂಧಿತ ಪ್ರದೇಶದಲ್ಲಿ ಡೀಸೆಲ್‌ ವಾಹನಗಳನ್ನು ಸ್ವತಃ ಹಂಪಿ ವಿಶ್ವ ಪಾರಂಪರಿಕ ಪ್ರಾಧಿಕಾರವೇ ಓಡಿಸುತ್ತಿದೆ. ಹೀಗಿರುವಾಗ ಹಂಪಿ ಪರಿಸರದಲ್ಲಿ ಆಟೊ ಓಡಾಟದ ಮೇಲೆ ನಿರ್ಬಂಧ ಹೇರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ನಿರ್ಬಂಧಿತ ಪ್ರವಾಸಿ ತಾಣಗಳಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಬೇಕು. ಆಟೊ ಚಾಲಕರಿಗೆ ಗುಂಪು ವಸತಿ ಯೋಜನೆ ಜಾರಿಗೆ ತರಬೇಕು. ಪಶ್ಚಿಮ ಬಂಗಾಳದ ಮಾದರಿಯಲ್ಲಿ ಪಿ.ಎಫ್‌., ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಗುವುದು’ ಎಂದು ತಿಳಿಸಿದರು. ಮುಖಂಡರಾದ ವಿರೂಪಾಕ್ಷಪ್ಪ, ಬಿ.ಎಸ್‌. ಯಮುನಪ್ಪ, ಕೆ. ಮೂರ್ತಿ, ಬಿಸಾಟಿ ಮಹೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.