ಬಳ್ಳಾರಿ: ‘ರಾಜ್ಯದಲ್ಲಿ ಮಳೆಯಿಂದಾಗಿ ಅನಾಹುತಗಳಾಗುತ್ತಿದ್ದರೂ, ಸಚಿವರು ಎಲ್ಲಿ ಬಿದ್ದಿದ್ದಾರೋ ತಿಳಿಯುತ್ತಿಲ್ಲ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಿ ಆಸ್ತಿ ಪಾಸ್ತಿ ನಾಶವಾಗುತ್ತಿದೆ. ಬಡವರ ಮನೆಗಳಿಗೆ ಹಾನಿಯಾಗಿದೆ. ರೈತರ ಬೆಳೆ ನಷ್ಟವಾಗುತ್ತಿದೆ. ಆದರೆ ಸಚಿವರು ಒಬ್ಬರೂ ಕಾಣುತ್ತಿಲ್ಲ. ಹಿಂದೆ ಬರ ಬಂದಾಗಲೂ ಕಾಣಲಿಲ್ಲ. ಈಗ ವಿಪರೀತ ಮಳೆಯಾಗಿ ಹಾನಿಯಾಗುತ್ತಿದ್ದರೂ ಎಲ್ಲಿ ಬಿದ್ದಿದ್ದಾರೋ ತಿಳಿಯುತ್ತಿಲ್ಲ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಸಮಸ್ಯೆಗಳಿದ್ದರೂ, ಈ ಸರ್ಕಾರ ಇದೆಯೋ, ಸತ್ತಿದೆಯೋ ಗೊತ್ತಾಗುತ್ತಿಲ್ಲ. ಕೇಂದ್ರ ಬರ ಪರಿಹಾರ ನೀಡಲಿಲ್ಲ ಎಂದು ಬೊಬ್ಬೆ ಹೊಡೆದ ಸರ್ಕಾರ, ₹3500 ಕೋಟಿ ಪರಿಹಾರ ಕೊಟ್ಟರೂ ಅದನ್ನು ಫಲಾನುಭವಿಗಳಿಗೆ ನೀಡಲಿಲ್ಲ. ಅದನ್ನು ಗ್ಯಾರೆಂಟಿ ಯೋಜನೆಗಳಿಗಾಗಿ ಇರಿಸಿಕೊಳ್ಳಲಾಗಿದೆ‘ ಎಂದು ಆರೋಪಿಸಿದರು.
‘ರಾಜ್ಯದಲ್ಲಿನ ಬರ ಮತ್ತು ಅತಿವೃಷ್ಟಿಯ ಪರಿಸ್ಥಿತಿ ಅವಲೋಕಿಸಲು ಮುಖ್ಯಮಂತ್ರಿ ವಿಶೇಷ ಕ್ಯಾಬಿನೆಟ್ ಸಭೆ ನಡೆಸಬೇಕು. ಜನರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು’ ಎಂದರು.
‘ರಾಜ್ಯದಲ್ಲಿ ಬಿಜೆಪಿ ಪಕ್ಷವೊಂದೇ 20 ಸ್ಥಾನಗಳಲ್ಲಿ ಗೆಲ್ಲಲಿದೆ. ಮಿತ್ರಪಕ್ಷ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲ್ಲಲಿದೆ’ ಎಂದು ಭವಿಷ್ಯ ನುಡಿದರು.
ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ನೆಲದ ಕಾನೂನಿನ ಬಗ್ಗೆ ಗೌರವ ಇದೆ. ತನಿಖೆ ನಡೆಯುತ್ತಿದೆ. ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆ ಆಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.