ADVERTISEMENT

ಬಿಜೆಪಿಯ ಯಾವ ಶಾಸಕರೂ ಕಾಂಗ್ರೆಸ್‌ ಸೇರಲ್ಲ: ಬೈರತಿ ಬಸವರಾಜ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 8:28 IST
Last Updated 28 ಅಕ್ಟೋಬರ್ 2024, 8:28 IST
   

ತೋರಣಗಲ್ಲು (ಬಳ್ಳಾರಿ): ‘ಬಿಜೆಪಿಯಿಂದ ಕಾಂಗ್ರೆಸ್‌ಗೆ ಯಾವ ಶಾಸಕರೂ ಹೋಗುವುದಿಲ್ಲ. ಶಾಸಕ ಎಸ್‌.ಟಿ  ಸೋಮಶೇಖರ್‌ ಹುಚ್ಚುಚ್ಚಾಗಿ ಮಾತನಾಡಬಾರದು. ಬೇರೆಯವರ ತೇಜೋವಧೆ ಮಾಡಬಾರದು’ ಎಂದು ಕೆ.ಆರ್‌ ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜ ಹೇಳಿದ್ದಾರೆ.   

ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೇಣಿವೀರಾಪುರ, ಏಳುಬೆಂಚಿ, ಕುಡುತಿನಿ, ದರೋಜಿಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಪರ ಪ್ರಚಾರ ಕೈಗೊಂಡ ಅವರು, ಶಾಸಕ ಎಸ್‌.ಟಿ ಸೋಮಶೇಖರ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. 

‘ತಮ್ಮ ವೈಯಕ್ತಿ ಲಾಭಕ್ಕಾಗಿ ಸೋಮಶೇಖರ್‌ ಹೀಗೆಲ್ಲ ಮಾತನಾಡುತ್ತಿದ್ದಾರೆ. ಬಿಜೆಪಿಯ ಯಾವ ಶಾಸಕರೂ ಕಾಂಗ್ರೆಸ್‌ಗೆ ಹೋಗುತ್ತಿಲ್ಲ. ಯಾರಾದರೂ ಕಾಂಗ್ರೆಸ್‌ಗೆ ಹೋಗುತ್ತಿರುವ ಬಗ್ಗೆ ಅವರಿಗೆ  ಗೊತ್ತಿದ್ದರೆ ಹೆಸರು ಹೇಳಲಿ. ಹೆಸರೇ ಹೇಳದೇ ಸುಮ್ಮನೆ ಮಾತನಾಡಿದರೆ ಹೇಗೆ?’ ಎಂದು ಅವರು ಪ್ರಶ್ನೆ ಮಾಡಿದರು. 

ADVERTISEMENT

‘ನಾವೆಲ್ಲರೂ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದವರು. ಈಗ ಬಿಜೆಪಿಯ ಕಟ್ಟಾಳುಗಳಾಗಿ ದುಡಿಯುತ್ತಿದ್ದೇವೆ. ಹಾಗೇನಾದರೂ ಕಾಂಗ್ರೆಸ್‌ಗೆ ಹೋಗುವುದಿದ್ದರೆ ಇಲ್ಲಿ ಬಂದು ಪ್ರಚಾರ ಮಾಡುವ ಅಗತ್ಯವೇನಿತ್ತು’ ಎಂದೂ ಅವರು ಹೇಳಿದರು. 

‘ಗ್ಯಾರೆಂಟಿ’ ಕೆಲಸ ಮಾಡಲ್ಲ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳು ಚುನಾವಣೆಯಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಬೆಳೆ ನಾಶವಾಗಿದೆ. ರೈತರಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಸಂಡೂರು ಕ್ಷೇತ್ರದಲ್ಲಿ ಸಂಸದ ಇ. ತುಕಾರಾಂ ವಿರುದ್ಧ ಜನ ತೀವ್ರ  ಅಸಮಾಧಾನ ಹೊಂದಿದ್ದಾರೆ. ಬಿಜೆಪಿಯ ಪರ ವಾತಾವರಣ ನಿರ್ಮಾಣವಾಗಿದೆ’ ಎಂದರು. 

‘ಬಂಗಾರು ಹನುಮಂತ ಕ್ರಿಯಾಶೀಲ ಅಭ್ಯರ್ಥಿ. ಸಂಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ. ಬಿಜೆಪಿಯ ಎಲ್ಲಾ ಮುಖಂಡರು, ಕಾರ್ಯಕರ್ತರು ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಲು ಪ್ರಯತ್ನ ಮಾಡಲಿದ್ದಾರೆ’ ಎಂದರು. 

ಮಾಜಿ ಶಾಸಕ ಸೋಮಶೇಖರ ರೆಡ್ಡಿ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.