ADVERTISEMENT

ಕಲಘಟಗಿ | ಕೊಯ್ಲಿಗೆ ಬಂದಿದ್ದ ಫಸಲು ಮಳೆಗೆ ಹಾನಿ

ಅತಿವೃಷ್ಟಿ: ಮೆಕ್ಕೆಜೋಳ ಬೆಳೆದ ರೈತರ ತಪ್ಪದ ಗೋಳು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 5:53 IST
Last Updated 22 ಅಕ್ಟೋಬರ್ 2024, 5:53 IST
ಕಲಘಟಗಿ ತಾಲ್ಲೂಕಿನ ಭೋಗೆನಾರಕೊಪ್ಪ ಗ್ರಾಮದ ರೈತ ಶಂಕ್ರಪ್ಪ ದೊಡ್ಡಪೂಜಾರ ಅವರು ಜಮೀನಿನಲ್ಲಿ ಬೆಳೆದಿದ್ದ ಸೋಯಾಬಿನ್‌ ಕೊಲ್ಯ ಮಾಡಿ ಹಾಕಿದ ರಾಶಿ ಅಡಿಯಲ್ಲಿ ನೀರು ನಿಂತಿದೆ
ಕಲಘಟಗಿ ತಾಲ್ಲೂಕಿನ ಭೋಗೆನಾರಕೊಪ್ಪ ಗ್ರಾಮದ ರೈತ ಶಂಕ್ರಪ್ಪ ದೊಡ್ಡಪೂಜಾರ ಅವರು ಜಮೀನಿನಲ್ಲಿ ಬೆಳೆದಿದ್ದ ಸೋಯಾಬಿನ್‌ ಕೊಲ್ಯ ಮಾಡಿ ಹಾಕಿದ ರಾಶಿ ಅಡಿಯಲ್ಲಿ ನೀರು ನಿಂತಿದೆ   

ಕಲಘಟಗಿ: ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳದತೆನೆಗಳು ಮೊಳಕೆ ಒಡೆಯುತ್ತಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಆದರೆ ತಾಲ್ಲೂಕು ಆಡಳಿತ ಮತ್ತು ಕೃಷಿ ಇಲಾಖೆ ರೈತರ ನೆರವಿಗೆ ಬಾರದೇ ಕಾಲಹರಣ ಮಾಡುತ್ತಿವೆ.

ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 17,223 ಹೆಕ್ಟೇರ್‌ ಗೋವಿನ ಜೋಳ ಹಾಗೂ 10,630 ಹೆಕ್ಟೇರ್‌ ಸೋಯಾಬಿನ್ ಬೆಳೆದಿದ್ದು ಮೊದಲೇ ಬಿಡುವಿಲ್ಲದ ಮಳೆಯಿಂದ ಬೆಳೆ ಇಳುವರಿ ಕುಂಟಿತಗೊಂಡಿವೆ. ಈಗ ಬಂದಷ್ಟು ಆದರೂ ಬೆಳೆ ರಕ್ಷಿಸಿಕೊಳ್ಳುವ ಸಮಯದಲ್ಲಿ ಕೈಗೆ ಬಂದ ಫಸಲು ಕೂಡಾ ಮೊಳಕೆ ಒಡೆಯಲು ಪ್ರಾರಂಭವಾಗಿದೆ. ನೆಲಕ್ಕೆ ಬಿದ್ದ ತೆನೆಗಳು ಮೊಳಕೆ ಒಡೆದು ಹಾಳಾಗುತ್ತಿದೆ.

ಪ್ರತಿ ವರ್ಷ ಮಳೆಗಾಲ ಕಡಿಮೆ ನಿರೀಕ್ಷೆಯಲ್ಲಿದ್ದ ರೈತರು ಉತ್ತಮ ಬೆಳೆ ಬರಬಹುದು ಎಂದು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಆರಂಭದಲ್ಲಿ ತೇವಾಂಶದಿಂದ ಸಮೃದ್ಧವಾಗಿದ್ದ ಬೆಳೆಗಳು ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೊಳೆಯುವ ಹಂತಕ್ಕೆ ತಲುಪಿವೆ.

ADVERTISEMENT

"ಇಷ್ಟೆಲ್ಲಾ ಮಳೆ ಅವಾಂತರದಿಂದ ಬೆಳೆ ಹಾನಿಯಾಗಿ ರೈತರು ಸಮಸ್ಯೆ ಅನುಭವಿಸುತ್ತಿದ್ದರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಸಂತೋಷ್ ಲಾಡ್ ತಮ್ಮ ಸ್ವಕ್ಷೇತ್ರವನ್ನೇ ಮರೆತು ಬಿಟ್ಟಿದ್ದಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತುಕೊಂಡಿವೆ ರೈತರ ಮೇಲೆ ಗೌರವವಿದ್ದರೆ ರೈತರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಿದ್ದಯ್ಯ ಕಟ್ನೂರಮಠ ಆಕ್ರೋಶ ಹೊರಹಾಕಿದರು."

‘ಹಿಂದಿನ ವರ್ಷ ಹಸಿರು ಬರಗಾಲ ಅಂತ ಘೋಷಣೆ ಮಾಡಿ ರೈತರಿಗೆ ಕೇವಲ ಸರ್ಕಾರ ₹ 2 ಸಾವಿರ ಪರಿಹಾರ ನೀಡಿ ಕೈತೊಳೆದುಕೊಂಡಿದೆ. ನಮ್ಮ ಸಮಸ್ಯೆ ಯಾರಿಗೆ ಹೇಳಿಕೊಂಡರೂ ಏನೂ ಲಾಭವಿಲ್ಲ. ರೈತನ ನಷ್ಟ ರೈತರೇ ಭರಿಸುವುದಾಗಿದೆ’ ಎಂದು ಗಂಜಿಗಟ್ಟಿ ಗ್ರಾಮದ ರೈತ ನಿಂಗಪ್ಪ ಮುತ್ತಣ್ಣವರ ಅಳಲು ತೋಡಿಕೊಂಡರು.  

ಪ್ರಸಕ್ತ ಸಾಲಿನಲ್ಲಿ ಎಂಟು ಎಕರೆ ಜಮೀನಿನಲ್ಲಿ ಸೋಯಾಬಿನ್ ಬೆಳೆ ಬೆಳೆದಿದ್ದು 2 ಎಕರೆ ಜಮೀನಿನ ಪಸಲು ಕೊಯ್ಲು ಮಾಡಿ ಬಣವಿ ಹಾಕಲಾಗಿದೆ. ಅದು ಮಳೆ ನೀರಿನಲ್ಲಿ ನಿಂತು ಹಾನಿಯಾಗುತ್ತಿದೆ. ಉಳಿದ 6 ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣ ನೀರಿನಲ್ಲಿ ನಿಂತು ಕೊಳೆಯುತ್ತಿದೆ’ ಎಂದು ಭೋಗೆನಾರಕೊಪ್ಪ ಗ್ರಾಮದ ರೈತ ಶಂಕ್ರಪ್ಪ ದೊಡ್ಡಪೂಜಾರ ಅಲವತ್ತುಕೊಂಡರು.

ಮಳೆ, ಬೆಳೆ ಹಾನಿ ಕುರಿತು ಸಂಬಂಧಿಸಿದ ತಹಶೀಲ್ದಾರ್‌ ಕಚೇರಿಗೆ ಸಂಪರ್ಕಿಸಿದರೂ ತಹಶೀಲ್ದಾರ್‌ ವಿರೇಶ ಮುಳಗುಂದಮಠ ಯಾವುದೇ ಸ್ಪಂದನೆ ನೀಡಲಿಲ್ಲ.

ಕಲಘಟಗಿ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದ ರೈತರೊಬ್ಬರ ಮೆಕ್ಕೆಜೋಳದ ತೆನೆ ತೇವಾಂಶದಿಂದ ಮೊಳಕೆ ಒಡೆದಿವೆ 
ಹಾಳಾದ ಮೆಕ್ಕೆಜೋಳದ ತೆನೆ
ಕಲಘಟಗಿ ತಾಲ್ಲೂಕಿನ ತಬಕದಹೊನ್ನಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಹಾಳಾದ ಮೆಕ್ಕೆಜೋಳದ ತೆನೆ

ಬೆಳೆ ಹಾನಿ: ಸ್ಪಂದಿಸದ ತಹಶೀಲ್ದಾರ್ ಜಿಲ್ಲಾ ಉಸ್ತುವಾರಿ ಸಚಿವ ನಿರ್ಲಕ್ಷ್ಯ ರೈತ ಸಂಘಟನೆಗಳ ಆಕ್ರೋಶ: ಹೋರಾಟಕ್ಕೆ ಸಿದ್ಧತೆ

ಲಕ್ಷಾಂತರ ವೆಚ್ಚ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆ ಕೊಯ್ಲಿಗೆ ಬರುವ ಮುಂಚೆಯೇ ಕೊಳೆಯುತ್ತಿವೆ. ಕ್ಷೇತ್ರದ ಸಚಿವರು ಇನ್ನಾದರೂ ಪರಿಹಾರ ಕೊಡಿಸಬೇಕು
ಪರಶುರಾಮ ಎತ್ತಿನಗುಡ್ಡ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.