ADVERTISEMENT

ಬಳ್ಳಾರಿ: ಶ್ವಾನಪಡೆಯ ‘ಟೈಸನ್‌’ ಅಕಾಲಿಕ ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:29 IST
Last Updated 21 ಜುಲೈ 2024, 15:29 IST
   

ಬಳ್ಳಾರಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್‌) ಶ್ವಾನದಳದಲ್ಲಿದ್ದ ‘ಟೈಸನ್’ (7) ಹೆಸರಿನ ಗಂಡು ನಾಯಿ ಭಾನುವಾರ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಇಲಾಖಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. 

ಶನಿವಾರ ಚಿತ್ರದುರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಭದ್ರತೆ ಪರಿಶೀಲನೆಗಾಗಿ ತೆರಳಿದ್ದ ಟೈಸನ್‌, ರಾತ್ರಿ 10 ಗಂಟೆ ಹೊತ್ತಿಗೆ ಡಿಎಆರ್‌ಗೆ ಮರಳಿತ್ತು. ಮರುದಿನ ಬೆಳಗ್ಗೆ 6 ಗಂಟೆಯಲ್ಲಿ ನರಳಾಡುತ್ತಿದ್ದ ಟೈಸನ್‌ ಅನ್ನು ಗಮನಿಸಿದ್ದ ಅಧಿಕಾರಿಗಳು ವೈದ್ಯರ ಬಳಿಕೆಗೆ ಕೊಂಡೊಯ್ದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಟೈಸನ್‌ ಕೊನೆಯುಸಿರೆಳೆಯಿತು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. 

ಪ್ರಧಾನಮಂತ್ರಿ, ಮುಖ್ಯಮಂತ್ರಿ, ಐಪಿಎಲ್‌ ಭದ್ರತೆ ಪರೀಶೀಲನೆಗೆ ಮತ್ತು ಬಾಂಬ್‌ ಪತ್ತೆಗಾಗಿ  ಸ್ನೀಪರ್‌ ಡಾಗ್‌ ಆಗಿದ್ದ ಟೈಸನ್‌ನನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಇದರ ಜತೆಗೆ, ಹಲವು ಮಹತ್ತರ ಪ್ರಕರಣಗಳಲ್ಲಿ ಟೈಸನ್‌ ಕೊಟ್ಟಿದ್ದ ಸುಳಿವು ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ಡಿಎಆರ್‌ನ ಡಿವೈಎಸ್‌ಪಿ ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.  

ADVERTISEMENT

ಲ್ಯಾಬ್ರಡಾರ್‌ ಪ್ರಭೇದದ ಟೈಸನ್‌ ಕಲುಷಿತ ಆಹಾರ ಸೇವೆನೆಯಿಂದ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ. 

ಈ ಪ್ರಭೇದದ ನಾಯಿಗಳು ಸಾಮಾನ್ಯವಾಗಿ 12–14 ವರ್ಷ ಜೀವಿಸುತ್ತವೆ. ಶ್ವಾನ ಪಡೆಗೆ ಮೂರು ತಿಂಗಳ ಮರಿಯಿದ್ದಾಗಲೇ ಚುರುಕಿನ ನಾಯಿಗಳನ್ನು ಪಡೆದುಕೊಳ್ಳಲಾಗುತ್ತದೆ. ಅವುಗಳನ್ನು ಬೆಂಗಳೂರಿನಲ್ಲಿ 8 ತಿಂಗಳ ಕಾಲ ತರಬೇತಿ ಕೊಡಿಸಲಾಗುತ್ತದೆ.  

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ , ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರವಿಕುಮಾರ್‌, ನವೀನ್‌ ಕುಮಾರ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿ ‘ಟೈಸನ್‌’ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.